ಸದಾಚಾರ

ಅನ್ನದಾನದ ಪುಣ್ಯ:- 

"ದಾನಕ್ಕಿಂತ ದೊಡ್ಡದಿಲ್ಲ ದಾನ ಮಾಡಿ ಕೆಟ್ಟೋರಿಲ್ಲ" ದಾನದಲ್ಲಿ ಅನ್ನದಾನಕ್ಕಿಂತ ಶ್ರೇಷ್ಠದಾನ ಬೇರಿಲ್ಲ."ಹಸಿದ  ಮನುಷ್ಯನಿಗೆ ಊಟ ಹಾಕಿದ ಮೇಲೆ ಮತ್ತೆ ಬೇರೆ ಏನು ತಿನ್ನಲು ಆಗುವುದಿಲ್ಲ. ಅದೇ ಚಿನ್ನ, ಬಟ್ಟೆ, ಅಥವಾ ಏನೇ ಕೊಡಲಿ, ಹೀಗಿದ್ದರೆ ಚೆನ್ನಾಗಿತ್ತು . ಇದು ನನ್ನ ಹತ್ತಿರ ಇದೆ.  ಇದು ಇಷ್ಟವಿಲ್ಲ, ಹೀಗೆ ಏನಾದರೂ ಹುಡುಕಲು ಇರುತ್ತದೆ. ಹಸಿವಾದಾಗ ಹೊಟ್ಟೆತುಂಬಾ ಬಡಿಸಿದರೆ ಅದರ ಮುಂದೆ ಇನ್ನೇನು ಬೇಡ. ಇದು ಅನ್ನದ ಮಹತ್ವ.  ಈ ಕುರಿತಾದ ಒಂದು ಕಥೆ. 

ಒಬ್ಬ ತಾಯಿ ಮಗ ಇದ್ದರು. ಆ ತಾಯಿ ನಾಲ್ಕಾರು ಮನೆಗಳ ಕೆಲಸಮಾಡಿ ಅಲ್ಲಿ  ಕೊಟ್ಟಿದ್ದನ್ನು ತಂದುದರಲ್ಲಿ ,ಬೇಡಲು ಬಂದ ಭಿಕ್ಷುಕರಿಗೆ ಕೊಟ್ಟು ಉಳಿದುದನ್ನು ತಾಯಿ-ಮಗ ತಿನ್ನುತ್ತಿದ್ದರು. ಒಮ್ಮೊಮ್ಮೆ ಒಬ್ಬರಿಗೆ ಮಾತ್ರ ಆಹಾರ ಉಳಿದರೆ ಮಗನಿಗೆ ಹಾಕಿ ತಾಯಿ ಹಾಗೆ ನೀರು ಕುಡಿದು ಮಲಗುತ್ತಿದ್ದಳು. ಮಗ ಹೀಗೆ ಬೆಳೆದು ದೊಡ್ಡವನಾದನು. ಅವನಿಗೆ ತನ್ನ ತಾಯಿ ಅನ್ನದಾನ ಮಾಡದೇ ಹೋಗಿದ್ದರೆ ತಾವು ಎಲ್ಲರಂತೆ ಚೆನ್ನಾಗಿರಬಹುದಿತ್ತು. ತನ್ನ ಅಮ್ಮ ಹೀಗೇಕೆ ಮಾಡುತ್ತಾಳೆ. ತಾಯಿ ಅವರಿವರ ಮನೆ ಕೆಲಸ ಮಾಡಿ ಅದರಿಂದ ಬಂದುದರಲ್ಲಿ ನಾವಿಬ್ಬರೂ ಹೇಗೋ ಜೀವನ ಮಾಡುತ್ತಿದ್ದೇವೆ ಅದರೊಳಗೆ ಅವಳೇಕೆ ಅನ್ನದಾನ ಮಾಡಬೇಕು. ಇದನ್ನೆಲ್ಲ ತಿಳಿದುಕೊಳ್ಳಬೇಕು ಎಂದು ಒಂದು ದಿನ, ಅಮ್ಮ ನಮಗೆ ಊಟಕ್ಕೆ ಇಷ್ಟು ಕಷ್ಟ ಪಡುತ್ತೇವೆ, ಒಂದೊಂದು ದಿನ ನೀನು ನಿನ್ನ ಪಾಲಿನ ಊಟವನ್ನು ಭಿಕ್ಷುಕರಿಗೆ ಕೊಟ್ಟು ನೀನು ಉಪವಾಸ ವಿರುತ್ತಿ, ಹೀಗಿರುವಾಗ ಮನೆಗೆ ಬರುವ ಭಿಕ್ಷುಕರುಗೆಲ್ಲ ಅನ್ನ ಕೊಡುತ್ತೀ ಯಾಕೆ? ಅಲ್ಲದೆ ಈ ಅನ್ನದಾನ ಮಾಡದಿದ್ದರೆ ನೀನು ಸಹ ಬೇರೆಯವರ ಮನೆ ಕೆಲಸ ಮಾಡುವ ಅಗತ್ಯವೇ ಇರಲಿಲ್ಲ. ಹಾಗಾದರೆ ಅನ್ನದಾನಕ್ಕೆ ಅಷ್ಟೊಂದು ಮಹತ್ವವಿದೆಯೇ? ಅದನ್ನು ಏನು ಅಂತ ನನಗೂ ಹೇಳು ಎಂದನು. 

ಆಗ ತಾಯಿಯು, ಮಗನೇ ದಾನಗಳಲ್ಲಿ ಶ್ರೇಷ್ಠವಾದ ದಾನ ಅನ್ನದಾನ. ಈ ಅನ್ನದಾನದ ಪುಣ್ಯವು  ಕಡೆ ತನಕ ನಮಗೆ ಉಳಿಯುವುದು. ಬಡತನ ಸಿರಿತನ ಇವುಗಳೆಲ್ಲ ಇವತ್ತು ಬರಬಹುದು ,ನಾಳೆ ಹೋಗಬಹುದು ಎಂದು ಮಗನಿಗೆ ಹೇಳಿದರಳು.  ಹಾಗಾದರೆ ಅನ್ನದಾನ ದಿಂದ ಯಾವ ಪುಣ್ಯ ಸಿಗುತ್ತದೆ ಎಂದು ಕೇಳಿದ. ಆಗ ತಾಯಿಯು ಪುಣ್ಯದ ವಿಚಾರ ನಮ್ಮಂಥವರಿಗೆ ತಿಳಿದಿಲ್ಲ. ಅದೇನಿದ್ದರೂ 'ಶಿವ'ನಿಗೆ ಗೊತ್ತು ನೀನು ಹೋಗಿ ಅವನನ್ನು ಕೇಳಿದರೆ ತಿಳಿಯುತ್ತದೆ ಎಂದಳು. ಮಗ ಯೋಚಿಸಿದ 'ಪುಣ್ಯ' ಎಂದರೇನು? ಹೇಗೆ ಸಿಗುತ್ತದೆ ಎಂದು ತಿಳಿಯಬೇಕು  ಎಂದುಕೊಂಡು ತಾಯಿ ಅನುಮತಿ ಪಡೆದು ಒಂದು ದಿನ ಮನೆಯಿಂದ ಶಿವನನ್ನು ಹುಡುಕಲು ಹೊರಟನು. 

ಶಿವನನ್ನು ಹುಡುಕುತ್ತಾ ನಡೆದುಹೋಗುತ್ತಲೇ  ಇದ್ದನು. ಎಷ್ಟು ದೂರ ನಡೆದರೂ ಶಿವನು  ಸಿಗಲಿಲ್ಲ. ದೊಡ್ಡ ಕಾಡು ಸಿಕ್ಕಿತು, ಕಾಡನ್ನು ದಾಟಿದಮೇಲೆ ಒಂದು ಬೆಟ್ಟ ಬಂದಿತು.  ಬೆಟ್ಟ ಹತ್ತಿ ಕೆಳಗೆ ಇಳಿದನು. ಅಷ್ಟು ಹೊತ್ತಿಗೆ ಕತ್ತಲಾಯಿತು ದಾರಿ ತಪ್ಪಿತು. ಮುಂದೆ ಏನು ಮಾಡಬೇಕು ಅವನಿಗೆ ತಿಳಿಯದಾಯಿತು. ಆಗ ಅಲ್ಲಿಗೆ ಬೇಡನೊಬ್ಬ ಬಂದನು. ಅವನಿಗೆ ಬಾಲಕನನ್ನು ನೋಡಿ ಕನಿಕರ ಹುಟ್ಟಿತು. ಹತ್ತಿರ ಬಂದು, ಹುಡುಗ ಈ ರಾತ್ರಿ ಇಲ್ಲೇ ಉಳಿದರೆ ಹುಲಿ ,ಸಿಂಹಗಳ ಬಾಯಿಗೆ ನೀನು ಆಹಾರವಾಗುತ್ತಿ ಎಂದನು. ಮತ್ತು ಈ ರಾತ್ರಿ ಕಾಡಲ್ಲಿ ಉಳಿಯ ಬೇಡ. ನೀನು ಇಂದು  ನಮ್ಮ ಗುಡಿಸಲಿಗೆ ಬಂದು ರಾತ್ರಿ ಅಲ್ಲೇ ಉಳಿಯುವಂತೆ ಎಂದನು. ಹುಡುಗನಿಗೂ ಬೆಳಗ್ಗಿನಿಂದ ಓಡಾಡಿ  ಸಾಕಾಗಿತ್ತು. ಬೇಡನ ಗುಡಿಸಲ ಮನೆ ಸರಿ ಎಂದುಕೊಂಡು, ಅವನ ಜೊತೆ ಗುಡಿಸಲಿಗೆ ಬಂದನು. ಬೇಡನು ತನ್ನ ಹೆಂಡತಿಗೆ,  ಈ ಹುಡುಗನು ಕಾಡಲ್ಲಿ ಒಂಟಿಯಾಗಿದ್ದನು. ಅಲ್ಲೇ ಉಳಿದಿದ್ದರೆ ಕಾಡುಪ್ರಾಣಿಗಳು ಇವನನ್ನು ಬಿಡುತ್ತಿರಲಿಲ್ಲ  ಹಾಗಾಗಿ ನಾನು ಕರೆದುಕೊಂಡು ಬಂದೆ  ಹುಡುಗನಿಗೆ ಏನಾದರೂ ತಿನ್ನಲು ಸ್ವಲ್ಪ ಆಹಾರ ಕೊಡು ಎಂದು ಹೇಳಿದನು. ಅದಕ್ಕೆ ಬೇಡನ ಹೆಂಡತಿ ನನ್ನ ಪಾಲಿನ ಆಹಾರವನ್ನು ನಾನು ಕೊಡುವುದಿಲ್ಲ. ಬೇಕಾದರೆ ನಿನ್ನ ಪಾಲಿನ ಆಹಾರವನ್ನು ಕೊಡು ಎಂದಳು. ಬೇಡನು ಏನು ಹೇಳದೆ ತನ್ನ ಪಾಲಿನ ಆಹಾರವನ್ನು ಹುಡುಗನಿಗೆ ಕೊಟ್ಟನು. ನಂತರ ಕನಿಕರದಿಂದ ಹಾಸಿಗೆ ಹಾಸಿ ಕೊಟ್ಟು ಅವನ ಕಾಲನ್ನು ಒತ್ತಿ ನಿದ್ದೆ ಮಾಡುವಂತೆ ಹೇಳಿದನು. ಗುಡಿಸಲಲ್ಲಿ  ಬೇಡನಿಗೆ ಮಲಗಲು ಜಾಗವಿಲ್ಲ ವಾಯಿತು ಆಗ ಅವನು ಮನೆಯಿಂದ ಹೊರ ಭಾಗಕ್ಕೆ ತನ್ನ ಕಾಲನ್ನು ಹೊಸಿಲು ಒಳಗಡೆ ತಲೆಯನ್ನು ಇಟ್ಟುಕೊಂಡು ಬಾಗಿಲು ಹಾಕದೆ ಹಾಗೆ ಮಲಗಿಕೊಂಡನು. ಮಧ್ಯರಾತ್ರಿ  ಹೊತ್ತಿಗೆ ಒಂದು ಹುಲಿ ಬಂದು ಬೇಡನನ್ನು ತಿಂದು, ಒಳಗೆ ಹೋಗಿ ಅವನ ಹೆಂಡತಿಯನ್ನು ತಿಂದಿತು. ಹೊಟ್ಟೆ ತುಂಬಿದ್ದರಿಂದ ಹುಡುಗನನ್ನು ನೋಡದೆ ಹೊರಟು ಹೋಯಿತು. ಹುಡುಗನು ಬೆಳಿಗ್ಗೆ ಎದ್ದು ನೋಡಿದ ಬರೀ ಮೂಳೆ ಗಳಿದ್ದವು. ಅವನಿಗೆ  ತುಂಬಾ ಬೇಸರವಾಯಿತು ಹಾಗೆ ಮುಂದೆ ನಡೆದನು. 

ಮುಂದೆ ಹೋಗುತ್ತಿರುವಾಗ ಅಲ್ಲೊಬ್ಬ ರಾಜನು ತಲೆಯಮೇಲೆ ಕೈಹೊತ್ತು ಕುಳಿತಿದ್ದನು. ಈ ಹುಡುಗನನ್ನು ಕರೆದು ಎಲ್ಲಿಗೆ ಹೋಗುತ್ತಿರುವೆ ಎಂದು ಕೇಳಿದನು. ಹುಡುಗನು ಶಿವನಲ್ಲಿ  ನನಗೆ ಕೇಳಲು ಒಂದು ಪ್ರಶ್ನೆಇದೆ. ಅವನನ್ನು ಕಾಣಲು ಹೋಗುತ್ತಿದ್ದೇನೆ ಎಂದನು. ಹಾಗಾದರೆ ನನ್ನದೊಂದು ಪ್ರಶ್ನೆ ಇದೆ ಕೇಳಿಬರುವೆಯಾ ಎಂದನು. ನಾನು ಕೋಟಿ ಹಣ ಖರ್ಚು ಮಾಡಿಕೆರೆ ಕಟ್ಟಿಸಿದ್ದೇನೆ. ಆದರೆ ಒಂದು ಹನಿ ನೀರು ಬಂದಿಲ್ಲ ಯಾಕೆಂದು ಕೇಳಿಕೊಂಡು ಬರುತ್ತೀಯಾ? ಎಂದು ಕೇಳಿದನು. ಹುಡುಗನು ಆಗಲಿ ಎಂದು ಉತ್ತರಿಸಿ ಮುಂದೆ ನಡೆದನು. 

ಹೀಗೆ ಮುಂದೆ ಮುಂದೆ ಹೋದಾಗ  ಕುಂಟ ನೊಬ್ಬನು ಇವನನ್ನು ಕರೆದು,ಏ  ಹುಡುಗ ನೀನು ಎಲ್ಲಿಗೆ ಹೋಗುತ್ತಿರುವೆ? ಎಂದು ಕೇಳಿದನು. ಅದಕ್ಕೆ ನಾನು ಶಿವನನ್ನು ಕಾಣಲು ಹೋಗುತ್ತಿದ್ದೇನೆ. ಎಂದು ರಾಜನಿಗೆ ಹೇಳಿದಂತೆ ಹೇಳಿದನು. ಕುಂಟನು, ಹಾಗಾದರೆ ನೀನು ನನ್ನ ಕುಂಟುತನಕ್ಕೆ ಕಾರಣವೇನು ಎಂದು ಕೇಳಿಕೊಂಡು ಬರುತ್ತೀಯಾ? ಎಂದು ಕೇಳಿದಾಗ ಆಯಿತು ಎಂದು ಅವನಿಗೆ ಹೇಳಿ ಮುಂದೆ ನಡೆದನು. ಸ್ವಲ್ಪ ಮುಂದೆ ಹೋದಂತೆ ಒಂದು  ಪೊದೆಯ ಹತ್ತಿರ  ಹುತ್ತವಿತ್ತು .ಒಂದು ಸರ್ಪವು ತನ್ನ ದೇಹವನ್ನು ಹುತ್ತದ ಒಳಗೆ  ಅರ್ದ ಮತ್ತು ಹುತ್ತದಿಂದ ಹೊರಗೆ ಅರ್ದ ಇಟ್ಟುಕೊಂಡು ಅಲುಗಾಡದೆ ಅತಂತ್ರ ಸ್ಥಿತಿಯಲ್ಲಿ ಒದ್ದಾಡುತ್ತಾ ಬಿದ್ದಿತ್ತು. ಅದು ಸಹ ಹುಡುಗನನ್ನು ಕರೆದು ಕೇಳಿತು. ಹುಡುಗನು ಎಲ್ಲರಿಗೂ ಹೇಳಿದ ಉತ್ತರವನ್ನೇ ಹೇಳಿದನು.ಆಗ  ಸರ್ಪವು ಹೇಳಿತು. ಹಾಗಾದರೆ ನನ್ನದೊಂದು ಪ್ರಶ್ನೆ ಇದೆ ನನ್ನ ಈ ಸ್ಥಿತಿಗೆ ಕಾರಣವೇನು ಎಂದು ಶಿವನನ್ನು ಕೇಳಿಬರುತ್ತಿಯಾ? ಎಂದು ಕೇಳಿತು. ಹುಡುಗನು ಆಗಲಿ ಎಂದು ಮುಂದೆ ಹೊರಟನು. 

ಬಹಳಷ್ಟು ದೂರ ನಡೆದು ನಡೆದು ಅವನು ನೇರವಾಗಿ  ಕೈಲಾಸಪರ್ವತಕ್ಕೆ ಬಂದನು. ಅಲ್ಲಿ ಜಗತ್ತಿನ ತಂದೆ ತಾಯಿಯರಾದ ಶಿವಪಾರ್ವತಿಯರ ಕುಳಿತಿದ್ದರು. ಹುಡುಗನ ಸಂತೋಷಕ್ಕೆ ಪಾರವೇ ಇರಲಿಲ್ಲ.ಅವರ ಹತ್ತಿರ ಹೋಗಿ ಭಕ್ತಿಯಿಂದ ನಮಸ್ಕರಿಸಿದನು. ಏ ತಂದೆ ಶಿವ, ಶಂಭೋ ಶಂಕರ, ನನ್ನದೊಂದು ಪ್ರಶ್ನೆ ಇದೆ 'ಅನ್ನದಾನದ ಪುಣ್ಯ' ಯಾವುದು? ಎಂದು ಕೇಳಿದನು. ಶಿವನ ನೋಡು ಮಗು ಈಗ ನೇಪಾಳದ ರಾಜನ  ಹೆಂಡತಿ ಗರ್ಭವತಿಯಾಗಿದ್ದಾಳೆ. ನೀನು ಹೋಗಿ ಅವಳಿಗೆ ನಾನು ಕೊಡುವ ಈ ಪ್ರಸಾದ
ವನ್ನು ಅವಳಿಗೆ ಕೊಡು. ಆಗ ಅವಳಿಗೆ ಒಂದು ಮಗು ಹುಟ್ಟುತ್ತದೆ. ಹುಟ್ಟಿದ ಮಗುವು ನಿನ್ನ ಪ್ರಶ್ನೆಗೆ ಉತ್ತರ ಹೇಳುತ್ತದೆ ಎಂದನು. 

ಆಮೇಲೆ ಆ ಹುಡುಗನು ತಾನು ಮನೆಯಿಂದ ಬರುವಾಗ  ಹಾದಿಯಲ್ಲಿ  ರಾಜ, ಕುಂಟ, ಸರ್ಪ, ಇವರೆಲ್ಲರೂ ತಮಗಿರುವ ಸಮಸ್ಯೆಗಳಿಗೆ ಉತ್ತರ ಕೇಳಿಕೊಂಡು ಬರಲು ತಿಳಿಸಿದ್ದಾರೆ ಪ್ರಭು ಎಂದನು. ಶಿವನು ಆ ಪ್ರಶ್ನೆಗಳಿಗೆಲ್ಲ ಒಂದೊಂದಾಗಿ  ಉತ್ತರಕೊಟ್ಟನು. ರಾಜನು ಬೆಳೆದುನಿಂತ ತನ್ನ ಮಗಳನ್ನು ಯೋಗ್ಯ ವರನಿಗೆ ಕೊಟ್ಟು ಮದುವೆ ಮಾಡಿದರೆ, ಅವನು ಕಟ್ಟಿಸಿರುವ ಕೆರೆಯಲ್ಲಿ ನೀರು ತುಂಬುತ್ತದೆ ಎಂದು ಹೇಳು. ಎಂದನು.   ಎರಡನೇಯದಾಗಿ ಕುಂಟನು ತನ್ನಲ್ಲಿರುವ ವಿದ್ಯೆಯನ್ನು ದಾನ ಮಾಡಿದರೆ ಅವನು ಕುಂಟು ಕಾಲು ಸರಿಹೋಗುವುದು ಎಂದನು.   ಮೂರನೆಯದಾಗಿ ಆ ಸರ್ಪವು ತನ್ನ ನೆತ್ತಿಯ ಮೇಲಿರುವ ರತ್ನವನ್ನು ಯೋಗ್ಯರಿಗೆ ದಾನ ಮಾಡಿದರೆ ಅದು ಚಲಿಸಲು ಸಾಧ್ಯವಾಗುತ್ತದೆ ಎಂದನು. ಈ ರೀತಿಯಾಗಿ ಹುಡುಗನು ಶಿವನಿಂದ ಎಲ್ಲರಿಗೂ ಉತ್ತರದ ಪರಿಹಾರವನ್ನು ತೆಗೆದುಕೊಂಡು ಶಿವನಿಗೆ ಭಕ್ತಿಭಾವದಿಂದ ಪ್ರಾರ್ಥಿಸಿ ನಮಸ್ಕರಿಸಿ  ಅಲ್ಲಿಂದ ಹೊರಟನು. 

ಆ ಹುಡುಗನಿಗೆ ಬರುವಾಗ ಮೊದಲು ಸರ್ಪ ಸಿಕ್ಕಿತು. ಶಿವನು ಹೇಳಿದ ಪರಿಹಾರವನ್ನು ಅದಕ್ಕೆ ಹೇಳಿದನು. ಆಗ ಸರ್ಪವು ನಿನಗಿಂತ ಯೋಗ್ಯರು ಯಾರಿದ್ದಾರೆ ಎಂದುಕೊಂಡು ಅದರ ನೆತ್ತಿಯಲ್ಲಿರುವ ನಾಗರವನ್ನು ಹುಡುಗನಿಗೆ ದಾನ ಮಾಡಿತು. ತಕ್ಷಣವೇ ಆ ಸರ್ಪವು ಅಲ್ಲಿಂದ ಚಲಿಸಲು ಸಾಧ್ಯವಾಯಿತು ಅದು  ಸಂತೋಷವಾಗಿ  ತನ್ನ ಹೆಡೆಯನ್ನು ಬಿಚ್ಚಿ ಕೊಂಡಿತು.
ಮುಂದೆ ಬಂದಾಗ ಕುಂಟ ಹುಡುಗನು ಸಿಕ್ಕನು. ನೀನು ನಿನ್ನಲ್ಲಿರುವ ವಿದ್ಯೆಯನ್ನು ಯಾರಿಗಾದರೂ ದಾನ ಮಾಡಿದರೆ ನಿನ್ನ ಕುಂಟು ಹೋಗುತ್ತದೆ. ಎಂದು  ಶಿವನು ಹೇಳಿದನು. ಇದನ್ನು ಕೇಳಿ ಕುಂಟನು ನಿನಗಿಂತ ಯೋಗ್ಯರು ಯಾರಿದ್ದಾರೆ ಎಂದುಕೊಂಡು ತನ್ನಲ್ಲಿರುವ ಅರವತ್ತನಾಲ್ಕು ವಿದ್ಯೆಯನ್ನು ಹುಡುಗನಿಗೆ ಧಾರೆಯೆರೆದನು.
ಮತ್ತೆ ಮುಂದೆ ಬಂದನು ರಾಜನು ಕಂಡನು, ರಾಜನಿಗೆ ಶಿವನು ಹೇಳಿದ ಉತ್ತರವನ್ನು ಹೇಳಿದಾಗ ರಾಜನು ಸಂತೋಷಗೊಂಡು ನಿನಗಿಂತ ಯೋಗ್ಯ ವರ ಇನ್ನಾರು ಇರುವರು ಎಂದು ತನ್ನ ಮಗಳನ್ನು ಆ ಹುಡುಗನಿಗೆ ಕೊಟ್ಟು ಸಂತೋಷದಿಂದ ವಿವಾಹ ಮಾಡಿದನು. 

ಆನಂತರ ತನ್ನ ಪತ್ನಿ ರಾಜಕುಮಾರಿಯೊಂದಿಗೆ  ನೇಪಾಳ ರಾಜ್ಯಕ್ಕೆ ಬಂದನು. ಅಲ್ಲಿಯ ರಾಣಿ ಹೆರಿಗೆ ಯಾಗದೆ ಒದ್ದಾಡುತ್ತಿದ್ದಳು. ಹುಡುಗನು ಶಿವನು ಕೊಟ್ಟ ಪ್ರಸಾದವನ್ನು ಆಕೆಗೆ ಕೊಟ್ಟನು. ಶಿವನು ಕೊಟ್ಟ ಪ್ರಸಾದವನ್ನು ಭುಂಜಿಸಿದ ಸ್ವಲ್ಪಹೊತ್ತಿನಲ್ಲೇ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದಳು. ಸ್ವಲ್ಪ ಸಮಯದ ನಂತರ ಹುಡುಗನು ರಾಜನಲ್ಲಿ ಹೇಳಿದನು. ಹುಟ್ಟಿದ ಮಗುವಿನ ಹತ್ತಿರ ನಾನೊಂದು ಪ್ರಶ್ನೆ ಕೇಳಬೇಕು ಹಾಗಾಗಿ ನನಗೆ ಮಗುವನ್ನು ತೋರಿಸಿ ಎಂದು  ಕೇಳಿದಾಗ, ದರ್ಬಾರಿ ನಲ್ಲಿರುವ ಎಲ್ಲರೂ ಆಶ್ಚರ್ಯಪಟ್ಟರು.ರಾಜನು ಹುಡುಗನ ಅಪೇಕ್ಷೆಯಂತೆ ಮಗುವನ್ನು ತಂದು ಬಂಗಾರದ ತಟ್ಟೆಯಲ್ಲಿ ಮಲಗಿಸಿ ತೋರಿಸಿದನು. ಅದರ ಕಿವಿಯಲ್ಲಿ ಹುಡುಗನು, ಮಗು ಶಿವನು ನನ್ನ ಪ್ರಶ್ನೆಯನ್ನು ನಿನ್ನಲ್ಲಿ ಕೇಳು ಎಂದು ಹೇಳಿದ್ದಾನೆ. ನನ್ನ ಪ್ರಶ್ನೆ 'ಅನ್ನದಾನದ ಪುಣ್ಯ ಯಾವುದು' ಎಂದು ಕೇಳಿದಾಗ ಆ ಮಗು ಜೋರಾಗಿ ನಕ್ಕು , ಶಿವನನ್ನು ಕಂಡು ಬಂದರೂ ನಿನಗೆ ಈ ವಿಚಾರ ಅರ್ಥವಾಗಲಿಲ್ಲವೇ? ಎಂದು ಮಗು ಕೇಳಿತು. ಆನಂತರ ನೋಡು ನೀನು ಅಡವಿಗೆ ಬಂದಾಗ ಅಲ್ಲಿ ದಾರಿತಪ್ಪಿ ಕತ್ತಲೆಯಲ್ಲಿ ಒಬ್ಬನೇ ಉಳಿದಾಗ ಬೇಡನೊಬ್ಬ  ನಿನ್ನನ್ನು ಮನೆಗೆ ಕರೆತಂದು ಆಹಾರ ಕೊಟ್ಟು ಉಪಚರಿಸಿದ ನಲ್ಲ ಆ ಬೇಡನೇ  ನಾನು,  ನನ್ನ ಹೆಂಡತಿ ಅನ್ನದಾನ ಮಾಡದೆ ಹಾಗೆ ಮಲಗಿದಳು.
ನಡುರಾತ್ರಿ ಹುಲಿಯೊಂದು ಬಂದು ನಮ್ಮಿಬ್ಬರನ್ನು ತಿಂದು ಹಾಕಿತು. ಹಿಂದಿನ ಜನ್ಮದಲ್ಲಿ  ನಾನು ನಿನಗೆ ಅನ್ನ ಹಾಕಿದ ಪುಣ್ಯದಿಂದ ಈ ಜನ್ಮದಲ್ಲಿ  ರಾಜನ ಮನೆಯಲ್ಲಿ ರಾಜಕುಮಾರನಾಗಿ ಜನ್ಮ ತಾಳಿದ್ದೇನೆ. ನನ್ನ ಹೆಂಡತಿ ನಿನಗೆ ಅನ್ನ ಕೊಡದ ಕಾರಣ ಇದೇ ಊರಿನಲ್ಲಿ ಬೇರೆ ಕಡೆ ಒಂದು ಜಂತು ವಾಗಿ ಜನ್ಮ ತಾಳಿದ್ದಾಳೆ. ನೀನು ಬೇಕಾದರೆ ಹೋಗಿ ನೋಡಬಹುದು ಎಂದಿತು. ಹುಡುಗನಿಗೆ ಆಗಲೇ ಅನ್ನದಾನದ ಪುಣ್ಯದ ಅರಿವು ತಿಳಿದಾಯಿತು ಆದ್ದರಿಂದ ಅವನು ಎಲ್ಲಿಗೂ ಹೋಗದೆ ತಾನು ಮದುವೆಯಾದ ರಾಜಕುಮಾರಿಯೊಂದಿಗೆ ಊರಿಗೆ ಬಂದು ತನ್ನ ತಾಯಿ ಮಾಡುತ್ತಿದ್ದ ಅನ್ನದಾನವನ್ನು  ತಾನು ಸಹ ಮುಂದುವರಿಸಿ ಬಡವರು ಶ್ರೀಮಂತರು ಏನ್ನದೆ ಹಸಿದ ಪ್ರತಿಯೊಬ್ಬರಿಗೂ ನಾನಾ ರೀತಿಯಲ್ಲಿ. ಅನ್ನದಾನ ಮಾಡುತ್ತಾ ಸುಖವಾಗಿ ಬಾಳಿದನು. 

  "ವಸ್ತ್ರ ದಾನಫಲಂ ರಾಜ್ಯಂ, ಪಾದುಕಾಭ್ಯಾಂ ಚ ವಾಹನಂ!
ತಾಂಬೂಲಾದ್ಭೋಗಮಾಪ್ನೋತಿ , ಅನ್ನದಾನಾತ್ಫಲತ್ರಯಂ! 

ಬಟ್ಟೆಯ ದಾನದಿಂದ ಫಲವಾಗಿ ರಾಜ್ಯ ಲಾಭವಾಗುತ್ತದೆ
ಪಾದುಕ ದಾನದಿಂದ ವಾಹನ ಲಾಭ,
ತಾಂಬೂಲ ದಾನದಿಂದ ಸುಖಭೋಗಗಳು ಮತ್ತು
ಅನ್ನದಾನ ದಿಂದ ಈ ಮೂರು ಫಲವಾಗಿ ಲಭಿಸುತ್ತದೆ.

Post a Comment

Previous Post Next Post