ನನ್ನ ಮುಖಕ್ಕೆ ಬ್ರಾಹ್ಮಣನೊಬ್ಬ ಸಿಟ್ಟಿನಿಂದ ಮಸಿ ಬಳಿದಿದ್ದಾನೆ ...
ಪುರಿ ಜಗನ್ನಾಥ ಮಂದಿರದ ಆವರಣದಲ್ಲಿ ವಾಸಿಸುತ್ತಿದ್ದ ಬಡ ಬ್ರಾಹ್ಮಣ ಕುಟುಂಬ. ಅತೀ ಚಿಕ್ಕ ವಯಸ್ಸಿನಿಂದಲೂ ನಿರಂತರ ಶ್ರೀ.ವಿಷ್ಣುಸಹಸ್ರನಾಮ ಪಾರಾಯಣ ಮಾಡುತ್ತಿದ್ದ ಬಡ ಬ್ರಾಹ್ಮಣನ, ಅತಿಯಾದ ಬಡತನದಿಂದ ಬೇಸತ್ತ ಅವನ ಹೆಂಡತಿ ಒಂದು ದಿನ ಸಿಟ್ಟಿನಿಂದ ಹೇಳಿದಳು "ನೀವು ಬಾಲ್ಯದಿಂದಲೆ ಈ ವಿಷ್ಣುವಿಷ್ಣುಸಹಸ್ರನಾಮ ವನ್ನು ನಿರಂತರ ಹೇಳುತ್ತಿದ್ದರೂ, ನಮ್ಮ ಬಡತನ ದೂರವಾಗುತ್ತಿಲ್ಲ ಏಕೆ?" ಅನ್ನುತ್ತಾ ವಿಷ್ಣುವನ್ನು ಸಹ ಬೈಯುತ್ತಿರುವಾಗ ಬ್ರಾಹ್ಮಣ ಅವಳಿಗೆ ತಾಳ್ಮೆ ಮತ್ತು ನಂಬಿಗೆ ಇಡುವಂತೆ ಸಲಹೆ ಕೊಡುತ್ತಿದ್ದ.
ಆದರೆ ಹೆಂಡತಿಯ ಸಿಟ್ಟು ಕಡಿಮೆಯಾಗಲಿಲ್ಲ "ಸಾವಿರ ನಾಮದ ವಿಷ್ಣುವಿನ ಮೊದಲ ಹೆಸರು 'ವಿಶ್ವಂ', ಆ ವಿಶ್ವವ್ಯಾಪಿ - ಸರ್ವಾಂತರ್ಯಾಮಿಯಾಗಿ ದೇಹದ ಒಳಗೂ ಹೊರಗೂ ತುಂಬಿರುವ ಪರಿಪೂರ್ಣ ಜ್ಞಾನಾನಂದಮಯನಾದ ಭಗವಂತ ವಿಶ್ವಂ ಇರುವಾಗ, ನಮ್ಮ ಮನೆಯಲ್ಲಿ ದುಃಖ ಯಾಕೆ?... " ಎಂದು ಪುನಃ ಪುನಃ ಹೇಳುವಾಗ, ಬ್ರಾಹ್ಮಣನಿಗೂ ಹೌದೆನ್ನಿಸಿತು. ಕೂಡಲೇ ವಿಷ್ಣುಸಹಸ್ರನಾಮ ಪುಸ್ತಕ ತೆಗೆದು 'ವಿಶ್ವಂ' ಹೆಸರಿನ ಮೇಲೆ ಇದ್ದಿಲಿನಿಂದ ಮಸಿಬಳಿದು, ಅಂದಿನಿಂದ 'ವಿಶ್ವಂ' ನಾಮವನ್ನೇ ಹೇಳುವುದು ನಿಲ್ಲಿಸಿದ.
ಒಂದು ದಿನ ಬಡ ಬ್ರಾಹ್ಮಣ ಭಿಕ್ಷಾಟನೆಗೆ ಹೋಗಿದ್ದಾಗ, ಒಬ್ಬ ಅಪರಿಚಿತ ವ್ಯಕ್ತಿ ಬಂಡಿ ತುಂಬಾ ಕನಕಾಂಬರಾದಿ ಐಶ್ವರ್ಯಗಳೊಂದಿಗೆ ಅವನ ಮನೆಗೆ ಬಂದು, ಅವನ ಹೆಂಡತಿಗೆ "ನಿಮ್ಮ ಯಜಮಾನರಿಂದ ನಾನು ಇಷ್ಟೆಲ್ಲಾ ಸಾಲ ಪಡೆದಿದ್ದೆ. ವಾಪಸು ಮಾಡಲು ಕಾರಣಾಂತರಗಳಿಂದ ವಿಳಂಬವಾಯಿತು, ದಯವಿಟ್ಟು ಸ್ವೀಕರಿಸಬೇಕು" ಅಂದಾಗ, ಬ್ರಾಹ್ಮಣನ ಹೆಂಡತಿ, "ನನಗೆ ಈ ಲೆಕ್ಕಾಚಾರ ಯಾವುದೂ ಗೊತ್ತಿಲ್ಲ, ಮೇಲಾಗಿ ಯಜಮಾನರು ಮನೆಯಲ್ಲಿಲ್ಲ" ಎಂದು ಎಷ್ಟೇ ನಿರಾಕರಿಸಿದರೂ ಅಪರಿಚಿತ ವ್ಯಕ್ತಿ ತಂದ ಐಶ್ವರ್ಯಗಳನ್ನೆಲ್ಲಾ ಅವಳಿಗೆ ಒಪ್ಪಿಸಿ ಹೊರಟು ನಿಂತ.
ಆಗ ಅವಳು ತಾವು ಯಾರು? ಕೊನೆ ಪಕ್ಷ ನಿಮ್ಮ ಹೆಸರು ಹೇಳಿ, ಅದೂ ಸಾಧ್ಯವಿಲ್ಲವಾದರೆ ಒಮ್ಮೆ ನಿಮ್ಮ ಮುಖ ತೋರಿಸಿ ಅಂದಾಗ, ಅಷ್ಟರವರೆಗೆ ಮುಖ ಮುಚ್ಚಿಕೊಡ ವ್ಯಕ್ತಿ, ವಸ್ತ್ರ ಸ್ವಲ್ಪ ಸರಿಸಿ ಹೇಳಿದ
"ಹೇಗೆ ಮುಖ ತೋರಿಸಲಿ ತಾಯಿ. ನನ್ನ ಮುಖಕ್ಕೆ ಬ್ರಾಹ್ಮಣನೊಬ್ಬ ಸಿಟ್ಟಿನಿಂದ ಮಸಿ ಬಳಿದಿದ್ದಾನೆ, ಇಷ್ಟು ಹೇಳಿ ಸಾಕು, ನಿಮ್ಮ ಯಜಮಾನರಿಗೆ ಗೊತ್ತಾಗುತ್ತದೆ" ಅನ್ನುತ್ತಾ ಅಲ್ಲಿದ ತಕ್ಷಣ ಹೊರಟು ಹೋದ.
ಸ್ವಲ್ಪ ಸಮಯದ ಬಳಿಕ ಮನೆಗೆ ಹಿಂತಿರುಗಿದ ಬ್ರಾಹ್ಮಣನಿಗೆ ನಡೆದ ಕಥೆಯನ್ನೆಲ್ಲಾ ವಿವರವಾಗಿ ಹೇಳುತ್ತಲೇ, ಬಡ ಬ್ರಾಹ್ಮಣನ ಕಣ್ಣಿನಿಂದ ಧಾರಾಕಾರವಾಗಿ ಕಣ್ಣೀರು ಬಂತು. "ಸಾಕ್ಷಾತ್ ವಿಷ್ಣುವೇ ಮನೆಗೆ ಬಂದದ್ದು ಕಣೆ. ನೀನು ಎಷ್ಟು ಪುಣ್ಯವಂತೆ ! ವಿಷ್ಣುವಿನ ಕೇವಲ ಒಂದು ಹೆಸರು 'ವಿಶ್ವಂ' ಅಂತ ಹೇಳಿದ್ದಕ್ಕೆ ನಿನಗೆ ದರ್ಶನ ಕೊಟ್ಟ. ಅಯ್ಯೋ".... ಅನ್ನುತ್ತಾ ಜಗನ್ನಾಥನ ಮಂದಿರದ ಕಡೆ ಓಡಿದ.
ಊರಿನ ಜನರಿಗೆಲ್ಲಾ, ವಿಷಯ ತಿಳಿಯುತ್ತಿದ್ದಂತೆ, ದೇವಸ್ಥಾನದಲ್ಲಿ ಅಪಾರ ಜನಸಂದಣಿ ಕೂಡಿತ್ತು. ಅರ್ಚಕರ ಅಪ್ಪಣೆಯಂತೆ ಎಲ್ಲರೂ ಸಾಮೂಹಿಕವಾಗಿ ಶ್ರೀ.ವಿಷ್ಣುಸಹಸ್ರನಾಮ ಪಾರಾಯಣ ಮಾಡಿ ಪುನೀತರಾದರು.
ಅಂದಿನಿಂದ ಇಂದಿಗೂ ದೇವಸ್ಥಾನದ ವಠಾರದಲ್ಲಿ ಸಾಮೂಹಿಕವಾಗಿ ಶ್ರೀ.ವಿಷ್ಣುಸಹಸ್ರನಾಮ ಪಾರಾಯಣ ನಡೆಯುತ್ತಿದೆ.
ಹರೇ ರಾಮ, ಹರೇ ಕೃಷ್ಣ.
Post a Comment