ಬೆಂಗಳೂರು : ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆಯುವ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದೆ. ಛಲವಾದಿ ನಾರಾಯಣಸ್ವಾಮಿ, ಹೇಮಲತಾ ನಾಯಕ, ಲಕ್ಷ್ಮಣ ಸವದಿ, ಕೇಶವ ಪ್ರಸಾದ್ ಮತ್ತು ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಸವರಾಜ ಹೊರಟ್ಟಿ ಹೆಸರು ಅಂತಿಮಗೊಳಿಸಿ ಹೈಕಮಾಂಡ್ ಪಟ್ಟಿ ಬಿಡುಗಡೆ ಮಾಡಿದೆ.ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಸಂಘಟನೆ ಹಿನ್ನೆಲೆಯ ನಾಯಕಿ ಎಸ್ಟಿ ಸಮುದಾಯದ ಹೇಮಲತಾ ನಾಯಕ, ಲಿಂಗಾಯತ ಸಮುದಾಯದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮತ್ತು ಒಬಿಸಿಗೆ ಸೇರಿದ ರಾಜ್ಯ ಕಾರ್ಯದರ್ಶಿ ಕೇಶವ ಪ್ರಸಾದ್ಗೆ ಬಿಜೆಪಿ ಮಣೆ ಹಾಕಿದೆ.
ಪದೇ ಪದೇ ಬಿಜೆಪಿ ಅನಿರೀಕ್ಷಿತ ಆಯ್ಕೆ ಮಾಡುತ್ತಲೇ ಬಂದಿದೆ. ಇಂದು ಕೂಡ ಹೇಮಲತಾ ನಾಯಕ್, ಸವದಿ ಹೆಸರನ್ನು ಪ್ರಕಟಿಸಿ ಅಚ್ಚರಿ ಮೂಡಿಸಿದೆ. ಆಕಾಂಕ್ಷಿಯಾಗಿ ಕಚೇರಿಗೆ ಬಂದಿದ್ದ ಮಂಜುಳಾ ನಿರಾಶರಾಗಿ ವಾಪಸ್ಸಾಗುವಂತಾಯಿತು. ಇನ್ನು ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ನಿರೀಕ್ಷೆಯಂತೆ ಬಸವರಾಜ ಹೊರಟ್ಟಿ ಅವರ ಹೆಸರನ್ನು ಪ್ರಕಟಿಸಿದೆ. ಜೆಡಿಎಸ್ ತೊರೆದು ಬಿಜೆಪಿ ಸೇರಿರುವ ಹೊರಟ್ಟಿ ಈಗಾಗಲೇ ಪ್ರಚಾರ ಆರಂಭಿಸಿದ್ದು, ಇಂದು ಅವರ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದೆ.
ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದ್ದು, ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ಸಲ್ಲಿಸಬೇಕು. ಅಂತೆಯೇ ಸಂಭಾವ್ಯ ಅಭ್ಯರ್ಥಿಗಳು ಪಕ್ಷದ ಕಚೇರಿಗೆ ಆಗಮಿಸಿ, ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಆದ್ರೆ ಅಚ್ಚರಿಯ ಬೆಳವಣಿಗೆಯಲ್ಲಿ ಲಕ್ಷಣ ಸವದಿಗೆ ಮತ್ತೆ ಟಿಕೆಟ್ ಸಿಕ್ಕಿದೆ. ಜೂನ್ 3ರಂದು ವಿಧಾನ ಪರಿಷತ್ನ 7 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
Post a Comment