7-6-2022
ಚಡ್ಡಿ ಹಾಕುವ ಎಲ್ಲರನ್ನೂ ಅಪಮಾನಿಸಿದ ಸಿದ್ದರಾಮಯ್ಯ
-ಛಲವಾದಿ ನಾರಾಯಣಸ್ವಾಮಿ ಆಕ್ಷೇಪ
ಬೆಂಗಳೂರು: ಚಡ್ಡಿ ಹಾಕುವವರು ಮಿಲಿಟರಿಯಲ್ಲಿ, ಪೊಲೀಸ್ ವ್ಯವಸ್ಥೆಯಲ್ಲೂ ಹಿಂದೆ ಇದ್ದರು. ಕರ್ಮಚಾರಿಗಳೂ ಚಡ್ಡಿ ಹಾಕುತ್ತಾರೆ. ರೈತರೆಲ್ಲರೂ ಚಡ್ಡಿ ಧರಿಸುತ್ತಾರೆ. ಚಡ್ಡಿ ಹಾಕುವ ಎಲ್ಲರನ್ನೂ ಸಿದ್ದರಾಮಯ್ಯ ಅಪಮಾನ ಮಾಡಿದ್ದಾರೆ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಮತ್ತು ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದರು.
ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ವತಿಯಿಂದ ಇಂದು “ಜನರಿಂದ ಸಂಗ್ರಹಿಸಿದ ಚಡ್ಡಿಗಳನ್ನು ಸಿದ್ದರಾಮಯ್ಯ ಅವರ ಮನೆಗೆ ತಲುಪಿಸುವ ಆಂದೋಲನ”ದಲ್ಲಿ ಅವರು ಮಾತನಾಡಿದರು. ಮೋರ್ಚಾದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ನಗರದ ಗಾಂಧಿ ಭವನದಿಂದ ಸಿದ್ದರಾಮಯ್ಯರವರ ಮನೆಗೆ ತೆರಳುವ ಕಾರ್ಯಕ್ರಮ ಇದಾಗಿತ್ತು.
ವಿರೋಧ ಪಕ್ಷದ ನಾಯಕರು, ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯನವರು ಇತ್ತೀಚೆಗೆ ಚಡ್ಡಿ ಸುಡುವ ಆಂದೋಲನ ಮಾಡುವುದಾಗಿ ತಿಳಿಸಿದ್ದರು. ಆರೆಸ್ಸೆಸ್ ಅಥವಾ ಬಿಜೆಪಿಯನ್ನು ಗುರಿ ಮಾಡಿ ಹೀಗೆ ಹೇಳಿದ್ದಾರೆ. ಆರೆಸ್ಸೆಸ್‍ನವರು ಪ್ಯಾಂಟ್ ಹಾಕಲು ಆರಂಭಿಸಿ ಆರೇಳು ವರ್ಷಗಳಾಗಿವೆ. ಕಾಲ ಬಂದಂತೆ ನಾವು ಬದಲಾಗಿದ್ದೇವೆ. ಚಡ್ಡಿ ಎಂಬುದು ಮಾನವಕುಲದ ಗೌರವ ಕಾಪಾಡುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದವರ ಎಲ್ಲವನ್ನೂ ಕಿತ್ತುಕೊಂಡಿದ್ದು, ಇರುವ ಚಡ್ಡಿಯನ್ನು ಮಾತ್ರ ಸುಟ್ಟು ನೀವ್ಯಾಕೆ ಬೆತ್ತಲಾಗುತ್ತೀರಿ ಎಂದು ಕೇಳಿದ್ದೆವು. ಆದರೂ ಅದನ್ನು ಕೇಳದೆ ಚಡ್ಡಿ ಸುಟ್ಟಿದ್ದಾರೆ. ಎಸ್‍ಸಿ ಮೋರ್ಚಾವು ರಾಜ್ಯದಾದ್ಯಂತ ಸಿದ್ದರಾಮಯ್ಯನವರ ಹೆಸರಿನಲ್ಲಿ ಚಡ್ಡಿಗಳನ್ನು ಸಂಗ್ರಹಿಸುತ್ತಿದೆ. ಸಾಂಕೇತಿಕವಾಗಿ ನಾವು ಇವತ್ತು ಚಡ್ಡಿಗಳನ್ನು ತಲುಪಿಸುತ್ತಿದ್ದೇವೆ ಎಂದು ತಿಳಿಸಿದರು.
ಇದು ಬಿಜೆಪಿ ಚಡ್ಡಿಯಲ್ಲ ಎಂದ ಅವರು, ಚಡ್ಡಿ ತಯಾರಿಕೆ ಹಿಂದಿನ ಶ್ರಮವನ್ನು ಅವರು ತಿಳಿದುಕೊಳ್ಳಬೇಕು. ಜನರು ಕೋವಿಡ್ ಸಾಂಕ್ರಾಮಿಕದ ಬಳಿಕ ಸಂಕಷ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಚಡ್ಡಿ ಸುಟ್ಟರೂ ಮಾಲಿನ್ಯ ಉಂಟಾಗುತ್ತದೆ. ಆದ್ದರಿಂದ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆದು ಚಡ್ಡಿ ಸುಡಬೇಕು. ಇಲ್ಲವಾದರೆ ಮಾಲಿನ್ಯ ಉಂಟು ಮಾಡಿದ ಸಿದ್ದರಾಮಯ್ಯರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್‍ನವರಿಗೆ ಬೇರೇನೂ ಕೆಲಸ ಇಲ್ಲ. ಇನ್ನು ಚಡ್ಡಿ ಸುಟ್ಟುಕೊಂಡೇ ಇರಲಿ ಎಂದರಲ್ಲದೆ, ಈ ದೇಶದ ಗೌರವವನ್ನೂ ಈ ಚಡ್ಡಿ ಕಾಪಾಡುತ್ತದೆ. ಆರೆಸ್ಸೆಸ್‍ನಂಥ ಸಂಘಟನೆ ಇರದಿದ್ದರೆ ನಿಮ್ಮ ಚಡ್ಡಿ ಉಳಿಯುತ್ತಿರಲಿಲ್ಲ ಎಂದು ನುಡಿದರು. ಕಾಂಗ್ರೆಸ್ ಇದುವರೆಗೆ ದೇಶದಲ್ಲಿ ಅಧಿಕಾರದಲ್ಲಿ ಇರುತ್ತಿದ್ದರೆ ಅವರವರ ಚಡ್ಡಿಯನ್ನು ಅವರವರೇ ಹುಡುಕಾಡಿ ನೋಡಿಕೊಳ್ಳಬೇಕಾಗುತ್ತಿತ್ತು ಎಂದರು.
ಕರುಣಾಕರ ಖಾಸಲೆ
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
Post a Comment