ಶ್ರಾವಣ ಸೋಮವಾರ:- ಕಥೆ

ಶ್ರಾವಣ ಸೋಮವಾರ:- ಕಥೆ

ಅದೊಂದು ಅಗ್ರಹಾರ. ಕಾಮಾಕ್ಷಿ ಎಂಬ ಮಹಿಳೆಗೆ  ಬಾಲಚಂದ್ರ ಎಂಬ ಒಬ್ಬ ಮಗನಿದ್ದನು. ಮಗನನ್ನು ಇದ್ದಿದ್ದರಲ್ಲಿ ಚೆನ್ನಾಗಿ ಸಾಕಿ ಸಲಹಿದಳು. 

ಮಗನು ತಮಗಿರುವ ಚಿಕ್ಕ ಜಮೀನಿನ ಆದಾಯದ ಜೊತೆ  ನೆರೆಹೊರೆಯವರ ಜಮೀನಿನಲ್ಲೂ ಕೆಲಸ ಮಾಡಿ ಸಂಪಾದಿಸುತ್ತಿದ್ದನು. 

ಅಂತೂ ಮಗ ದೊಡ್ಡವನಾಗಿ ಕೈಗೆ ಬಂದಿದ್ದಾನೆ ಎಂದು ಸಂತೋಷಗೊಂಡ ಕಾಮಾಕ್ಷಿಯು ತನ್ನ ಮಗನಿಗೆ ವಿವಾಹ ಮಾಡಬೇಕೆಂದು ಯೋಚಿಸಿ ಮೂರ್ನಾಲ್ಕು ಹಳ್ಳಿಗಳನ್ನು ಸುತ್ತಿ ಯೋಗ್ಯವಾದ ಕನ್ಯೆಯನ್ನು ಹುಡುಕಿ ಮಗನ ಜೊತೆ ವಿವಾಹ ಮಾಡಿ  ಮನೆಗೆ ಸೊಸೆಯನ್ನು ತಂದಳು. 

ಸೊಸೆ ಪಾರ್ವತಿ ಗುಣವಂತೆ -ಸಂಸ್ಕಾರವಂತೆ ಆಗಿದ್ದಳು. ಶಿವನನ್ನು ಪೂಜಿಸುತ್ತಿದ್ದಳು. ಮನೆಯ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಳು. ನೆಮ್ಮದಿಯಾಗಿ ಜೀವನ ಸಾಗುತ್ತಿತ್ತು. 

ಪ್ರತಿನಿತ್ಯ ಮುಂಜಾನೆ ಎದ್ದು ಮನೆಯ ಕೆಲಸಗಳನ್ನೆಲ್ಲ ಮುಗಿಸಿ ಸ್ನಾನ ಮಾಡಿ ಶಿವ ಪೂಜೆಯನ್ನು ಶ್ರದ್ಧೆಯಿಂದ ಮಾಡಿ ಧ್ಯಾನವನ್ನು ಮಾಡುತ್ತಿದ್ದಳು. 

ಅವಳ ಮದುವೆಯಾದ ಸ್ವಲ್ಪ ದಿನಗಳಲ್ಲಿ ಮೊದಲ ಶ್ರಾವಣ ಮಾಸ ಬಂದಿತು.  ಶಿವಮಂದಿರಕ್ಕೆ ಹೋಗಿ ಶಿವನ ಪೂಜೆ, ಅಭಿಷೇಕ ಮಾಡಬೇಕು ಎಂದು  ಪಾರ್ವತಿ ಮನಸ್ಸಿನಲ್ಲಿ ಇತ್ತು. 

ಅತ್ತೆಯನ್ನು ಕೇಳಿದಳು, ಆದರೆ ಅವಳ ಅತ್ತೆಗೆ ದೇವರ ಮೇಲೆ ಅಷ್ಟೊಂದು ನಂಬಿಕೆ ಇರಲಿಲ್ಲ.  ಸೊಸೆ ಶಿವಮಂದಿರಕ್ಕೆ ಹೋಗಿ ಪೂಜೆ ಮಾಡಲು ‌ ಹೋದರೆ ಮನೆಯ ಕೆಲಸವನ್ನು ಯಾರು ಮಾಡುವುದು ರಾಶಿ ರಾಶಿ ಕೆಲಸ ಬಿದ್ದಿದೆ. ಆ ಸಮಯದಲ್ಲಿ ಮಾಡಬೇಕಾದ ಕೆಲಸಗಳನ್ನು ಮಾಡು ಎಲ್ಲಿಗೂ ಹೋಗುವುದು ಬೇಡ ಎಂದಳು. 

ಇದರಿಂದ ಸೊಸೆಯ ಮನಸ್ಸಿಗೆ ತುಂಬಾ ನೋವಾಯಿತು. ಅವಳು ಅನ್ಯ ಮನಸ್ಕಳಾಗಿ ಆ ದಿನವಿಡೀ  ಏನೂ ತಿನ್ನದೇ 
ಹಾಗೆ ಇದ್ದು ಉಪವಾಸ ಮಾಡಿದಳು. 

ಅವಳು ಮರುದಿನ ನದಿ ತೀರಕ್ಕೆ ನೀರು ತರಲು ಹೋದಾಗ ಊರಿನ ಮದುವೆಯಾದ ಕೆಲವು ಹೆಣ್ಣು ಮಕ್ಕಳು, ಸ್ನಾನ ಮಾಡಿ  ಪೂಜಾ ಸಾಮಾಗ್ರಿ ಗಳನ್ನು ತೆಗೆದುಕೊಂಡು ಶಿವ ಮಂದಿರಕ್ಕೆ ಹೊರಟಿದ್ದರು. 

ಅವರನ್ನು ನೋಡಿ ಯಾವ ಕಡೆ ಹೊರಟಿದ್ದೀರಿ ಎಂದಳು. ಆ ಮಹಿಳೆಯರು  ಈಗ  ಶ್ರಾವಣ ಮಾಸ ಶುರುವಾಗಿದೆ. ಇಂದಿನಿಂದ  ಶಿವ ದರ್ಶನವನ್ನು ಮಾಡಿ ಪೂಜೆ ಮಾಡಿ ಬರಲು ಶಿವಮಂದಿರಕ್ಕೆ ಹೋಗುತ್ತಿದ್ದೇವೆ ಎಂದರು. 

ಆಗ ಸೊಸೆಯು ನನಗೂ ಸಹ ಶಿವನ ಪೂಜೆ ಮಾಡುವುದು ಎಂದರೆ ತುಂಬಾ ಇಷ್ಟ ಆದರೆ ನಾನು ಬರಲು ಆಗುವುದಿಲ್ಲ ನನ್ನ ಅತ್ತೆಯು ಹೋಗಲು ಬಿಡುವುದಿಲ್ಲ ಎಂದಳು. ಅದಕ್ಕೆ ಆ ಮಹಿಳೆಯರು  ಹಾಗಾದರೆ ನೀನು ಪೂಜಾ ಸಾಮಾಗ್ರಿ ಗಳನ್ನು ತಂದು ಕೊಡು ನಾವೇ ನಿನ್ನ ಹೆಸರಿನಲ್ಲಿ ಪೂಜೆ ಮಾಡುತ್ತೇವೆ ಎಂದರು.

ಸೊಸೆ ಹೇಳಿದಳು, ಪೂಜಾ ಸಾಮಗ್ರಿಗಳನ್ನು ಮನೆಯಿಂದ ತೆಗೆದುಕೊಂಡು ಬಂದರೆ ನನ್ನ ಅತ್ತೆಗೆ ಅನುಮಾನ ಬರುತ್ತದೆ ಅದು ಆಗುವುದಿಲ್ಲ ಎಂದಳು.
ಆಗ ಉಳಿದ ಮಹಿಳೆಯರು, ಹಾಗಾದರೆ ನೀನು ಚಿಂತಿಸಬೇಡ, ಪ್ರತಿನಿತ್ಯ ನೀರು ತೆಗೆದು ಕೊಂಡು ಹೋಗುವಾಗ ನದಿ ತೀರಕ್ಕೆ  ಸ್ವಲ್ಪ ಬೇಗ ಬಾ ನಮ್ಮ ಪೂಜಾ ಸಾಮಗ್ರಿ ಯಲ್ಲಿ  ನೀನು ಮಂದಿರದಲ್ಲಿಯೇ ಶಿವ ಪೂಜೆ ಮಾಡು ಎಂದರು. 

ಸೊಸೆ ಸಂತೋಷದಿಂದ ಒಪ್ಪಿ ನೀರು ತರುವ ನೆಪದಲ್ಲಿ ನದಿಗೆ ಬೇಗ ಬಂದು ಅಲ್ಲಿಂದಲೇ ಶಿವಮಂದಿರಕ್ಕೆ ಹೋಗಿ  ಪೂಜೆ ಆರತಿ ಮಾಡಿ ಬರುತ್ತಿದ್ದಳು ಇದೇ ರೀತಿ ಮಾಡಿ ಶ್ರಾವಣ ಮಾಸ ಪೂರ್ತಿ ಕಳೆಯಿತು. 

ಶ್ರಾವಣ ಮಾಸದ ಕಡೆಯ ದಿನ ಪೂಜೆ ಮಾಡುವಾಗ ಸೊಸೆ ಯೋಚಿಸಿದಳು.

ಆ ಪರಮೇಶ್ವರನು ನನಗೆ ಒಂದು ತಿಂಗಳು ಪೂರ್ತಿ ಪೂಜೆ ಮಾಡಲು ಅವಕಾಶ ಕೊಟ್ಟಿದ್ದಾನೆ.  ಅವನಿಗೂ ನಾನು ಏನಾದರೂ ಕಾಣಿಕೆ ಕೊಡಬೇಕು ಏನು ಕೊಡಲಿ ಎಂದು ಯೋಚಿಸಿದವಳೇ ತನ್ನ ಮೂಗಿನನತ್ತು  ತೆಗೆದು ಶಿವನಿಗೆ ಅರ್ಪಿಸಿ ಮನೆಗೆ ಬಂದಳು. 

ಮತ್ತು ಅವಳ ಅತ್ತೆಗೆ  ತನ್ನ ಮುಖವನ್ನು ಸರಿಯಾಗಿ ತೋರಿಸದೆ ಮನೆ ಕೆಲಸಗಳನ್ನು ಮಾಡಿದಳು.‌ ಆದರೂ ಅವಳ ಅತ್ತೆ ಗಮನಿಸುತ್ತಾ ಅವಳ ಮುಖವನ್ನು ನೋಡಿ, ನಿನ್ನ ಮೂಗಿನಲ್ಲಿದ್ದ ಮೂಗಿನ ನತ್ತು ಏನಾಯಿತು ಎಂದಳು. 

ಅತ್ತೆ ನಾನು ಬೆಳಗ್ಗೆ ನದಿಗೆ ನೀರು ತರಲು ಹೋದಾಗ ನನ್ನ ಮೂಗುತಿ ಮೂಗಿನಲ್ಲಿಯೇ ಇತ್ತು. ಆದರೆ ಮನೆಗೆ ಬಂದು ಸಗಣಿಯಿಂದ ಕುರುಳು ತಟ್ಟಿದ 
ಮೇಲೆ ನನ್ನ ಮೂಗುತಿ ಕಾಣುತ್ತಿಲ್ಲ ಎಂದಳು.‌ 

ಅತ್ತೆ ಸೊಸೆಯನ್ನು ಕರೆದುಕೊಂಡು  ಕುರುಳು ತಟ್ಟಿದ ಜಾಗಕ್ಕೆ ಬಂದಳು. ಅತ್ತೆ ಸೊಸೆ ಇಬ್ಬರೂ ತಟ್ಟಿದ್ದ ಕುರುಳನ್ನು ಒಂದೊಂದೇ ಮುರಿದರು. ಅದರ ಮಧ್ಯದಲ್ಲಿ 'ಮೂಗಿನ ನತ್ತು' ಸಿಕ್ಕಿತು. ಆದರೆ ಅತ್ತೆ ಸೊಸೆ ಮುರಿದ  ಎರಡೂ ಕುರುಳಿನಲ್ಲಿ  ಮೂಗಿನ ನತ್ತು ಇತ್ತು.

 ಅತ್ತೆಗೆ ತುಂಬಾ ಸಂತೋಷ ವಾಯಿತು. ಕಳೆದು ಹೋಗಿದ್ದ  ಮೂಗಿನ ನತ್ತು  ಒಂದೇ ಆದರೂ, ಈಗ ಎರಡೂ  ಕುರುಳುಗಳಲ್ಲೂ ಒಂದೊಂದು ಇತ್ತು. ಕುರುಳುಗಳಲ್ಲಿ ನತ್ತು ಇರುವುದನ್ನು ಕಂಡು ಆಶ್ಚರ್ಯವಾಯಿತು, ತಟ್ಟಿ ಒಣಗಲು ಹಾಕಿದ್ದ ಎಲ್ಲಾ ಕುರುಳುಗಳನ್ನು ಮುರಿದು ನೋಡಿದಾಗ ಎಲ್ಲದರಲ್ಲೂ ಅದೇ ತರಹದ ಒಂದೊಂದು ನತ್ತು  ಇರುವುದನ್ನು ನೋಡಿ  ಅತ್ತೆಗೆ ಅನುಮಾನ ಬಂದಿತು. 

ಸೊಸೆಯನ್ನು ನಿಲ್ಲಿಸಿ ಏನು ನಡೆದಿದೆ ನಿಜವನ್ನು ಹೇಳು ಎಂದಳು.  ಹೆದರಿದ ಸೊಸೆಯು ಅತ್ತೆಯನ್ನು ಕ್ಷಮೆ ಕೇಳುತ್ತಾ ನಡೆದ ಘಟನೆ ಎಲ್ಲಾ ಹೇಳಿದಳು, ನಂತರ ತಾನು ಪೂಜಾ ಸಾಮಗ್ರಿಗಳನ್ನು ತೆಗೆದುಕೊಳ್ಳದೆ ಶಿವಾಲಯಕ್ಕೆ ಹೋಗಿದ್ದೆ, ಆದ್ದರಿಂದ ಶಿವನಿಗೆ ಏನಾದರೂ ಕೊಡಬೇಕೆನಿಸಿತು ನನ್ನ ಮೂಗಿನ ನತ್ತು ಕೊಟ್ಟು ಬಂದೆ. ಅದಕ್ಕಾಗಿ ಆ ಶಿವನು ನನಗೆ  ಒಂದು ನತ್ತಿನ ಬದಲಾಗಿ ಇಷ್ಟೊಂದು ನತ್ತುಗಳನ್ನು ಕೊಟ್ಟಿದ್ದಾನೆ ಎಂದಳು. 

ಈ ಆಶ್ಚರ್ಯಕರವಾದ ಘಟನೆಯನ್ನು ನೋಡಿ ಅತ್ತೆಗೆ ಶಿವನ ಮೇಲೆ ತುಂಬಾ ನಂಬಿಕೆ ಬಂದಿತು. ಶ್ರಾವಣ ಮಾಸದಲ್ಲಿ ಸೋಮವಾರ  ಪರಶಿವನ ಪೂಜೆ ಮಾಡುವುದರಿಂದ ಆ ಶಿವನು ನಮಗೆ ಒಲಿಯುತ್ತಾನೆ. ಇಷ್ಟೆಲ್ಲಾ ಕೊಡುತ್ತಾನೆ. ಎಂದು ತಿಳಿದ ಮೇಲೆ ನಾನು ಮುಂದಿನ ವರ್ಷದಿಂದ ಪ್ರತಿದಿನವೂ ಶಿವನ ಪೂಜೆಯನ್ನು ಮಾಡುತ್ತೇನೆ ಎಂದಳು. 

ಹಾಗೂ ಮುಂದಿನ ವರ್ಷ ಶ್ರಾವಣ ಮಾಸ ಬಂದಾಗ ಅತ್ತೆ  ಸೊಸೆ ಇಬ್ಬರು ಸೇರಿ ಮನೆಯಲ್ಲಿ ಶಿವ ಪೂಜೆ ಮಾಡಿ, ಶಿವಮಂದಿರಕ್ಕೆ ಹೋಗಿ ದರ್ಶನ ಮಾಡಿ  ಶಿವನನ್ನು ಶ್ರದ್ಧಾ ಭಕ್ತಿ ಯಿಂದ   ಆರಾಧಿಸಿದರು.

 ಕೆಲವೇ ದಿನಗಳಲ್ಲಿ ಅವರ ಮನೆಯಲ್ಲಿ  ಧನ- ಧಾನ್ಯ- ಸಂಪತ್ತು  ತುಂಬಿ ತುಳುಕಿತು ಮತ್ತೆ ಕೆಲವೇ ತಿಂಗಳುಗಳ ಒಳಗೆ ಸೊಸೆಗೆ ಮಗು ಆಯಿತು. ಅಂದು ಶ್ರಾವಣ ಮಾಸದಲ್ಲಿ ಆರಂಭಿಸಿದ ಶಿವಪೂಜೆ ಯನ್ನು ನಂದಿನಿಂದಲೂ  ನಡೆಸುತ್ತಾ  ಬಂದರು. 

ಶ್ರಾವಣ ಮಾಸದ ವ್ರತದ ಕಥೆ ಓದಿದವರಿಗೆ ಶುಭವಾಗಲಿ

ಲಿಂಗಾಷ್ಟಕಮ್ ಸ್ತೋತ್ರದ ಕುರಿತು:

ಶಿವ ಲಿಂಗಾಷ್ಟಕಮ್ ಸ್ತೋತ್ರವು ಶಿವನಿಗೆ ಸಮರ್ಪಿಸಿದ ಸುಪ್ರಸಿದ್ದ ಭಜನೆ. ಈ ಸ್ತೋತ್ರದಲ್ಲಿ ಭಗವಾನ್ ಶಂಕರನ ಚಿನ್ಹೆಯಾದ ಲಿಂಗದ ಶ್ರೇಷ್ಟತೆಯನ್ನು ವೈಭವೀಕರಿಸಲಾಗಿದೆ. 

ಒಂದು ನಂಬಿಕೆಯ ಪ್ರಕಾರ ಭಗವಾನ್ ಶಂಕರನು ಆದಿ - ಅಂತ್ಯವಿಲ್ಲದ ಒಂದು ಅಗಾಧವಾದ ಬೆಂಕಿಯ ಕಂಭದ ರೂಪದಲ್ಲಿ ಕಾಣಿಸಿಕೊಂಡ ಎಂದು ವಿವರಿಸಲ್ಪಟ್ಟಿದೆ. ಲಿಂಗವು ನಿರಾಕಾರ ಶಿವನಿಗೆ ಒಂದು ಆಕಾರವನ್ನು ನೀಡುವ ಒಂದು ಪ್ರಯತ್ನ. ಹೇಗೆ ಶಂಖ, ಚಕ್ರಗಳು ವಿಷ್ಣುವಿನ ಚಿನ್ಹೆಯೋ ಹಾಗೇ ಲಿಂಗವೂ ಶಂಕರನ ಚಿನ್ಹೆ.

ಲಿಂಗವನ್ನು ಪುರುಷ ರೂಪದ ಚಿನ್ಹೆಯಾಗಿ, ಶಿವನು ಆದಿಪುರುಷನಾದ್ದರಿಂದ ಅವನ ಚಿನ್ಹೆಯಾಗಿರುವುದು. ಪರಬ್ರಹ್ಮನು, ನಿರ್ಗುಣನೆಂದು ಪರಿಗಣಿಸಿದರೂ, ಆ ಶಕ್ತಿಯು ಸಗುಣ ರೂಪದಲ್ಲಿ ಕಾಣಿಸಿಕೊಳ್ಳಬೇಕೆಂದು ನಿರ್ಧರಿಸಿದಾಗ (ಕಾರಣವು ಸಾಮಾನ್ಯ ಮಾನವನ ಕಲ್ಪನೆಗೆ ದೂರವಾದದ್ದು) ನಮಗೆ ಪುರುಷ ಮತ್ತು ಪ್ರಕೃತಿ (ಸ್ತ್ರೀ ) ರೂಪದಲ್ಲಿ ಕಂಡುಬರುವುದು ಮತ್ತು ಇದರೊಂದಿಗೆ ತ್ರಿಮೂರ್ತಿಗಳಾದ (ಸೃಷ್ಟಿ, ಸ್ಥಿತಿ ಹಾಗೂ ವಿನಾಶಗಳೂ) ಬ್ರಹ್ಮ, ವಿಷ್ಣು, ಮಹೇಶ್ವರ ಹಾಗೂ ದೇವಿಯರಾದ ಸರಸ್ವತಿ, ಲಕ್ಷ್ಮಿ, ಪಾರ್ವತಿಯರು, ಕಂಡುಬರುವರು.

ಭೌತವಿಜ್ಞಾನಿಯ ದೃಷ್ಟಿಯಲ್ಲಿ ಪರಿಶುದ್ಧ ಶಕ್ತಿಯು ( ಒಂದೇ ಬಣ್ಣದ್ದಲ್ಲ, ಆದರೆ ಪರಿಪೂರ್ಣವಾದ Electromagnetic spectrum, ಅಂದರೆ, ಪರಿಶುದ್ಧವಾದ ಬಿಳೀ ಬೆಳಕು) ನಿರ್ಗುಣ ಪರಬ್ರಹ್ಮನಿಗೆ ಹತ್ತಿರವಾದದ್ದು. ಅದೇರೀತಿ ಭೌತವಸ್ತುವು, ಸಗುಣ ರೂಪದ್ದು. ಬಿಳಿ ಬೆಳಕು ವಿಭಜನೆಗೊಂಡು ಅನೇಕ ಬಣ್ಣಗಳಾದಾಗ ನಮಗೆ ದೊರಕುವುದು ಗುಣಗಳು. ಈ ವಿಧದ ಬಣ್ಣದ ಬೆಳಕಿನಲ್ಲಿ ಸಕಾರಾತ್ಮಕ ಕಣಗಳು (ಪುರುಷ ಎಂದು ಅರಿಯಬಹುದು), ನಕಾರಾತ್ಮಕ ಕಣಗಳು ( ಸ್ತ್ರೀ ಎಂದು ಭಾವಿಸಬಹುದು ) ಹಾಗೂ ಅಲಿಪ್ತ ಕಣಗಳು, ಪುರುಷ-ಪ್ರಕೃತಿಯ ಜೋಡಿ ಅಂದರೆ ಅರ್ಧನಾರೀಶ್ವರ ತತ್ವ.

ಶೈವ ಸಂಪ್ರದಾಯದಲ್ಲಿ ಶಿವನನ್ನು ಅತ್ಯುನ್ನತ ದೈವವೆಂದು ಪರಿಗಣಿಸಿ ಪೂಜಿಸಲ್ಪಡುತ್ತಾನೆ. ಸ್ಮಾರ್ತ  ಸಂಪ್ರದಾಯದಲ್ಲಿ ಶಿವನು ದೈವದ ಐದು ರೂಪಗಳಲ್ಲೊಂದು. ಶಿವನನ್ನು ಸಾಮಾನ್ಯವಾಗಿ ತೀವ್ರ ಧ್ಯಾನಾಸಕ್ತ ನಾಗಿರುವಂತೆಯೋ ಅಥವಾ ಅಜ್ಞಾನವನ್ನು ಪ್ರತಿನಿಧಿಸುವ ಮಾಯ ದೈತ್ಯನ ಮೇಲೆ ನಿಂತು ನಟರಾಜ ಭಂಗಿಯಲ್ಲಿ ನಾಟ್ಯವಾಡುತ್ತಿರುವಂತೆಯೋ ಅನೇಕ ಮಂದಿರಗಳಲ್ಲಿ ತೋರ್ಪಟ್ಟರೂ ಅವನನ್ನು ಅಭಿಷೇಕ, ಪತ್ರ, ಪುಷ್ಪಗಳಿಂದ ಪೂಜಿಸುವುದು ಲಿಂಗರೂಪದಲ್ಲಿ ಮಾತ್ರ.  

ಹೆಸರೇ ಹೇಳುವಂತೆ ಈ ಸ್ತೋತ್ರವು ಎಂಟು ಶ್ಲೋಕಗಳಿಂದ ಕೂಡಿದ್ದು  ಭಕ್ತಿಯಿಂದ ಭಜಿಸಿದಲ್ಲಿ ಮೋಕ್ಷ ಪ್ರಾಪ್ತಿಯಾಗುವುದೆಂಬ ನಂಬಿಕೆ.

ಶ್ಲೋಕ - 1 -  ಸಂಸ್ಕೃತದಲ್ಲಿ:
ಬ್ರಹ್ಮಮುರಾರಿಸುರಾರ್ಚಿತ ಲಿಂಗಂ
ನಿರ್ಮಲಭಾಸಿತ ಶೋಭಿತ ಲಿಂಗಮ್
ಜನ್ಮಜ ದುಃಖವಿನಾಶಕ ಲಿಂಗಂ
ತತ್ ಪ್ರಣಮಾಮಿ ಸದಾಶಿವ ಲಿಂಗಮ್    
ಕನ್ನಡದಲ್ಲಿ :
ಕಮಲಜ ಹರಿಸುರ ಪೂಜಿತ ಲಿಂಗಕೆ
ವಿಮಲತೆ ಬೆಳಗುತ ಶೋಭಿಪ ಲಿಂಗಕೆ
ಜನುಮದ ದುಃಖ ನಿವಾರಿಪ ಲಿಂಗಕೆ
ಎರಗುವೆನದಕೆ ಸದಾಶಿವ ಲಿಂಗಕೆ

ವಿವರಣೆ :
ಬ್ರಹ್ಮ, ವಿಷ್ಣು ಹಾಗೂ ಎಲ್ಲ ದೇವಾನುದೇವತೆಗಳೂ ಪೂಜಿಸುವ ಹಾಗೂ ಪರಿಶುದ್ಧವಾದ, ಜಾಜ್ವಲ್ಯಮಾನವಾದ ಮತ್ತು ಜನನದ ನಂತರ ಎದುರಾಗುವ ಎಲ್ಲ ವ್ಯಸನಗಳನ್ನು ಸಂಪೂರ್ಣವಾಗಿ ನಾಶಮಾಡುವ ಚಿರಂತನವಾದ ಲಿಂಗರೂಪಿ ಶಿವನಿಗೆ ನಾನು ಶಿರಸಾ ನಮಸ್ಕರಿಸುವೆ.

ಶ್ಲೋಕ  - 2 -  ಸಂಸ್ಕೃತದಲ್ಲಿ:
ದೇವಮುನಿಪ್ರವರಾರ್ಚಿತ ಲಿಂಗಂ
ಕಾಮದಹಂ ಕರುಣಾಕರ ಲಿಂಗಮ್
ರಾವಣದರ್ಪವಿನಾಶನ ಲಿಂಗಂ
ತತ್ ಪ್ರಣಮಾಮಿ ಸದಾಶಿವ ಲಿಂಗಮ್   
ಕನ್ನಡದಲ್ಲಿ :
ಸುರಮುನಿ ಗಡಣವು ಪಾಡುವ ಲಿಂಗಕೆ
ಸ್ಮರಹರ ಕರುಣೆಯ ಹರಿಸುವ ಲಿಂಗಕೆ
ದಶಶಿರ ಗರ್ವವ ಮುರಿಸಿದ ಲಿಂಗಕೆ
ಎರಗುವೆನದಕೆ ಸದಾಶಿವ ಲಿಂಗಕೆ

ವಿವರಣೆ :
ಎಲ್ಲ ಮಹರ್ಷಿಗಳು ಮತ್ತು ದೇವತೆಗಳು ಪೂಜಿಸುವ, ಪ್ರೇಮ - ದೇವತೆಯನ್ನು ನಾಶಪಡಿಸಿದ, ದಯೆ, ಕರುಣೆಗಳ ವರ್ಷಧಾರೆಯನ್ನೇ ಹರಿಸುವ, ದಶಕಂಠ ರಾವಣನ ಅಹಂಕಾರವನ್ನು ನಾಶಮಾಡಿದ, ಚಿರಂತನವಾದ ಲಿಂಗರೂಪಿ ಶಿವನಿಗೆ ನಾನು ಶಿರಸಾ ನಮಸ್ಕರಿಸುವೆ.

ಶ್ಲೋಕ - 3 -  ಸಂಸ್ಕೃತದಲ್ಲಿ:
ಸರ್ವ ಸುಗಂಧಿ ಸುಲೇಪಿತ ಲಿಂಗಂ
ಬುದ್ಧಿ ವಿವರ್ಧನ ಕಾರಣ ಲಿಂಗಮ್
ಸಿದ್ಧಸುರಾಸುರ ವಂದಿತ ಲಿಂಗಂ
ತತ್ ಪ್ರಣಮಾಮಿ ಸದಾಶಿವ ಲಿಂಗಮ್    
ಕನ್ನಡದಲ್ಲಿ :
ಎಲ್ಲ ಸುಗಂಧವ ಪೂಸಿದ ಲಿಂಗಕೆ
ಬುದ್ಧಿಯ ಬೆಳೆಸುವ ಕಾರಣ ಲಿಂಗಕೆ
ಸಿದ್ಧ ಸುರಾಸುರ ವಂದಿತ ಲಿಂಗಕೆ
ಎರಗುವೆನದಕೆ ಸದಾಶಿವ ಲಿಂಗಕೆ

ವಿವರಣೆ :
ದಿವ್ಯ ಪರಿಮಳ ಸುಗಂಧ ದ್ರವ್ಯಗಳಿಂದ ಅಭಿಷೇಕ ಮಾಡಲ್ಪಟ್ಟ ಹಾಗೂ ಜ್ಞಾನದ ಬೆಳವಣಿಗೆಗೆ ಕಾರಣವಾದ, ದೇವಾನುದೇವತೆಗಳು, ಋಷಿಮುನಿಗಳು, ಸಿದ್ಧ, ಗಂಧರ್ವ, ಕಿನ್ನರ ಹಾಗೂ ಕಿಂಪುರುಷರಿಂದ ಪೂಜಿಸಲ್ಪಡುವ ಚಿರಂತನವಾದ ಲಿಂಗರೂಪಿ ಶಿವನಿಗೆ ನಾನು ಶಿರಸಾ ನಮಸ್ಕರಿಸುವೆ.

ಶ್ಲೋಕ - 4 -  ಸಂಸ್ಕೃತದಲ್ಲಿ:
ಕನಕ ಮಹಾಮಣಿ ಭೂಷಿತ ಲಿಂಗಂ
ಫಣಿಪತಿವೇಷ್ಟಿತ ಶೋಭಿತ ಲಿಂಗಮ್
ದಕ್ಷಸುಯಜ್ಞ ವಿನಾಶನ ಲಿಂಗಂ
ತತ್ ಪ್ರಣಮಾಮಿ ಸದಾಶಿವ ಲಿಂಗಮ್    
ಕನ್ನಡದಲ್ಲಿ :
ಹೊನ್ನಲಿ ರನ್ನದಿ ಹೊಳೆಯುವ ಲಿಂಗಕೆ
ಪನ್ನಗ ಶಿರದಲಿ ನಲಿಯುವ ಲಿಂಗಕೆ
ದಕ್ಷನ ಯಜ್ಞವನಳಿಸಿದ ಲಿಂಗಕೆ
ಎರಗುವೆನದಕೆ ಸದಾಶಿವ ಲಿಂಗಕೆ

ವಿವರಣೆ
ಯಾರನ್ನು ಬಂಗಾರ ಮತ್ತು ವಜ್ರ , ವೈಢೂರ್ಯಗಳಿಂದ ಕೂಡಿದ ಆಭರಣಗಳಿಂದ ಅಲಂಕರಿಸಲ್ಪಟ್ಟಿದೆಯೋ, ಯಾರ ಬಳಿ ಸರ್ಪವು ಪ್ರಜ್ವಲಿಸುತ್ತಿದೆಯೋ, ಹಾಗೂ ಯಾರು ದಕ್ಷನ ಯಜ್ಞವನ್ನು ನಾಶಮಾಡಿದನೋ ಆ ಚಿರಂತನವಾದ ಲಿಂಗರೂಪಿ ಶಿವನಿಗೆ ನಾನು ಶಿರಸಾ ನಮಸ್ಕರಿಸುವೆ.

ಶ್ಲೋಕ - 5 -  ಸಂಸ್ಕೃತದಲ್ಲಿ:
ಕುಂಕುಮ ಚಂದನ ಲೇಪಿತ ಲಿಂಗಂ
ಪಂಕಜಹಾರ ಸುಶೋಭಿತ ಲಿಂಗಮ್
ಸಂಚಿತಪಾಪ ವಿನಾಶನ ಲಿಂಗಂ
ತತ್ ಪ್ರಣಮಾಮಿ ಸದಾಶಿವ ಲಿಂಗಮ್   
ಕನ್ನಡದಲ್ಲಿ :
ಕುಂಕುಮ ಚಂದನ ತಳೆದಿಹ ಲಿಂಗಕೆ
ಪಂಕಜ ಹಾರದಿ ಶೋಭಿಪ ಲಿಂಗಕೆ
ಸಂಚಿತ ಪಾಪವನುರಿಸುವ ಲಿಂಗಕೆ
ಎರಗುವೆನದಕೆ ಸದಾಶಿವ ಲಿಂಗಕೆ

ವಿವರಣೆ :
ಯಾರನ್ನು ಸುಗಂಧ ಮತ್ತು ಕೇಸರಿಯಿಂದ ಅಲಂಕರಿಸಲ್ಪಟ್ಟಿದೆಯೋ, ಯಾರು ಪದ್ಮ ಪುಷ್ಪಗಳಿಂದ ಕೂಡಿದ ಸುಗಂಧ-ಪರಿಮಳಯುಕ್ತ ಮಾಲೆಯನ್ನು ಧರಿಸಿರುವನೋ, ಯಾರು ಸಂಚಿತ ಕರ್ಮಗಳನ್ನು ಸಂಪೂರ್ಣವಾಗಿ ನಾಶಮಾಡುವನೋ, ಆ ಚಿರಂತನವಾದ ಲಿಂಗರೂಪಿ ಶಿವನಿಗೆ ನಾನು ಶಿರಸಾ ನಮಸ್ಕರಿಸುವೆ.

ಶ್ಲೋಕ  - 6 - ಸಂಸ್ಕೃತದಲ್ಲಿ:
ದೇವಗಣಾರ್ಚಿತ ಸೇವಿತ ಲಿಂಗಂ
ಭಾವೈರ್ಭಕ್ತಿಭಿರೇವ ಚ ಲಿಂಗಮ್
ದಿನಕರ ಕೋಟಿ ಪ್ರಭಾಕರ ಲಿಂಗಂ
ತತ್ ಪ್ರಣಮಾಮಿ ಸದಾಶಿವ ಲಿಂಗಮ್    
ಕನ್ನಡದಲ್ಲಿ :
ಸುರಗಣ ಪೂಜೆಯ ಸಲ್ಲುವ ಲಿಂಗಕೆ
ಭಕುತಿಯ ಭಾವವ ಸ್ಫುರಿಸುವ ಲಿಂಗಕೆ
ಅಗಣಿತ ಸೂರ್ಯರ ಪ್ರಭೆಯಿಹ ಲಿಂಗಕೆ
ಎರಗುವೆನದಕೆ ಸದಾಶಿವ ಲಿಂಗಕೆ

ವಿವರಣೆ :
ಯಾರು ದೇವತೆಗಳು ಶಿವಗಣಗಳು ಹಾಗೂ ಉಳಿದೆಲ್ಲರಿಂದ ಸೇವಿಸಲ್ಪಡುವನೋ, ಯಾರು ಭಕ್ತಿ, ಜ್ಞಾನ, ವೈರಾಗ್ಯಗಳಿಗೆ ಮಾರ್ಗದರ್ಶಕನೋ, ಯಾರು ಕೋಟಿ ಸೂರ್ಯರ ಬೆಳಕಿನಂತೆ ಪ್ರಜ್ವಲಿಸುವರೋ, ಆ ಚಿರಂತನವಾದ ಲಿಂಗರೂಪಿ ಶಿವನಿಗೆ ನಾನು ಶಿರಸಾ ನಮಸ್ಕರಿಸುವೆ.

ಶ್ಲೋಕ  - 7 -  ಸಂಸ್ಕೃತದಲ್ಲಿ:
ಅಷ್ಟದಲೋಪರಿವೇಷ್ಟಿತ ಲಿಂಗಂ
ಸರ್ವಸಮುದ್ಭವ ಕಾರಣ ಲಿಂಗಮ್
ಅಷ್ಟದರಿದ್ರವಿನಾಶನ ಲಿಂಗಂ
ತತ್ ಪ್ರಣಮಾಮಿ ಸದಾಶಿವ ಲಿಂಗಮ್    
ಕನ್ನಡದಲ್ಲಿ :
ಎಂಟೆಸಳಿನ ಆವರಣದ ಲಿಂಗಕೆ
ಎಲ್ಲದರುಧ್ಬವ ಕಾರಣ ಲಿಂಗಕೆ
ಎಂಟು ದರಿದ್ರವ ತೊಲಗಿಪ ಲಿಂಗಕೆ
ಎರಗುವೆನದಕೆ ಸದಾಶಿವ ಲಿಂಗಕೆ

ವಿವರಣೆ :
ಯಾರು ಎಂಟು ದಳ ಪುಷ್ಪಗಳಿಂದ ಸುತ್ತುವರಿದಿರುವರೋ, ಯಾರು ಎಲ್ಲ ಭೋಗ ಭಾಗ್ಯಗಳಿಗೆ ಪ್ರಮುಖ ಕಾರಣವೋ, ಯಾರು ತನ್ನ ಭಕ್ತರ ಎಂಟು ವಿಧದ ದಾರಿದ್ರ್ಯವನ್ನು ನಾಶಮಾಡುವರೋ, ಆ ಚಿರಂತನವಾದ ಲಿಂಗರೂಪಿ ಶಿವನಿಗೆ ನಾನು ಶಿರಸಾ ನಮಸ್ಕರಿಸುವೆ.

ಶ್ಲೋಕ  - 8 - ಸಂಸ್ಕೃತದಲ್ಲಿ:
ಸುರಗುರು ಸುರವರ ಪೂಜಿತ ಲಿಂಗಂ
ಸುರವನ ಪುಷ್ಪ ಸದಾರ್ಚಿತ ಲಿಂಗಮ್
ಪರಮಪದಂತ್ಪರಂ ಪರಮಾತ್ಮಕ ಲಿಂಗಂ
ತತ್ ಪ್ರಣಮಾಮಿ ಸದಾಶಿವ ಲಿಂಗಮ್    
ಕನ್ನಡದಲ್ಲಿ :
ಸುರಗುರು ಸುರಗಣ ಪೂಜಿಪ ಲಿಂಗಕೆ
ಸುರವನ ಕುಸುಮದಲರ್ಚಿತ ಲಿಂಗಕೆ
ಪರಮನೆಲೆಯಹ ಪರಮಾತ್ಮ ಲಿಂಗಕೆ
ಎರಗುವೆನದಕೆ ಸದಾಶಿವ ಲಿಂಗಕೆ

ವಿವರಣೆ :
ಯಾರು ದೇವತೆಗಳ ಗುರುವಿನಿಂದ ಪೂಜಿಸಲ್ಪಡುತ್ತಾರೋ, ಯಾರು ದೇವೋತ್ತಮನಿಂದ ಪೂಜೆಗೊಳ್ಳುತ್ತಾರೋ, ಯಾರನ್ನು ಸದಾ ದೇವಲೋಕದ ಹೂ ತೋಟದಿಂದ ಆಯ್ದ ಪುಷ್ಪಗಳಿಂದಲೇ ಪೂಜಿಸುತ್ತಾರೋ, ಯಾರು ಪರಮ ಸತ್ಯವೋ, ಆ ಚಿರಂತನವಾದ ಲಿಂಗರೂಪಿ ಶಿವನಿಗೆ ನಾನು ಶಿರಸಾ ನಮಸ್ಕರಿಸುವೆ.

ಶಿವ ಮತ್ತು ಶಿವ ಲಿಂಗದ ವೈಶಿಷ್ಟ್ಯತೆ:
ಭಗವಾನ್ ಶಂಕರನು ಸತತವಾಗಿ ವಿಶ್ವದ ಸೃಷ್ಟಿ, ಸ್ಥಿತಿ, ವಿನಾಶ ಹಾಗೂ ಮರು-ಸೃಷ್ಟಿಯ ಆವರ್ತಕ ಪ್ರಕ್ರಿಯೆಗಳಲ್ಲಿ ತೊಡಗಿರುವ ಅತ್ಯುನ್ನತ ದೈವ.
ಬ್ರಹ್ಮಾಂಡದ ಸೃಷ್ಟಿ ಮತ್ತು ವಿಸರ್ಜನೆಯಲ್ಲಿ ತೊಡಗಿರುವ ಶಿವನಿಗೆ ಕೆಲವುಬಾರಿ ಇವನು ಕೇವಲ ವಿಶ್ವದ ವಿನಾಶವನ್ನು ಮಾತ್ರ ಮಾಡುವನೆಂದು ತಪ್ಪಾಗಿ ಅರ್ಥೈಸಲಾಗುವುದು. 

ಈ ತಪ್ಪು ಕಲ್ಪನೆಯು ಕೆಲವರಿಗೆ ಬ್ರಹ್ಮಾಂಡದ ಚಟುವಟಿಕೆಗಳ ಬಗ್ಗೆ ಶಿವನ ಪಾತ್ರದ ಸರಿಯಾದ ಕಲ್ಪನೆ ಇರುವುದಿಲ್ಲವಾದ್ದರಿಂದ. ವಿಶ್ವದ ಸೃಷ್ಟಿಯು ಒಳ್ಳೆಯ ಹಾಗೂ ಕೆಟ್ಟ ಶಕ್ತಿಗಳ ನಡುವಿನ ಸೂಕ್ಷ್ಮ ಸಮತೋಲನವು ಏರು ಪೇರುಗಳ ಆಧಾರದ ಮೇಲೆ ಅವಲಂಬಿಸಿರುತ್ತದೆ. 

ಈ ಸಮತೋಲನವು ಕದಡಿದಾಗ ಹಾಗೂ ಅದರಿಂದಾಗಿ ವಿಶ್ವದ ಪೋಷಣೆಯು ಅಸಾಧ್ಯವಾದಾಗ ಭಗವಾನ್ ಶಂಕರನು ವಿಶ್ವವನ್ನು  ವಿಸರ್ಜಿಸಿ ಸೃಷ್ಟಿಯ ಮತ್ತೊಂದು ಆವೃತ್ತಿಯನ್ನು ಪ್ರಾರಂಬಿಸುತ್ತಾನೆ ಹಾಗೂ ಇದರಿಂದಾಗಿ ಮುಕ್ತಿಕಾಣದ ಅನೇಕ ಆತ್ಮಗಳಿಗೆ ಐಹಿಕ ಪ್ರಪಂಚದ ಬಂಧನದಿಂದ ಬಿಡುಗಡೆಯನ್ನು ಪಡೆಯಲು ಮತ್ತೊಂದು ಅವಕಾಶ ದೊರಕುತ್ತದೆ. 

ಹಾಗಾಗಿ ಭಗವಾನ್ ಶಂಕರನು ನಿಷ್ಕ್ರಿಯ ವಿಶ್ವದಿಂದಾಗಿ ಬಂಧನದಲ್ಲಿ ಸಿಲುಕಿರುವ ಆತ್ಮಗಳಿಗೆ ಉಂಟಾಗುವ ಯಾತನೆ ಹಾಗೂ ಬಳಲಿಕೆಗಳಿಂದ ರಕ್ಷಣೆಯನ್ನು ನೀಡುತ್ತಾನೆ. ಇದನ್ನೇ ಹೋಲುವ ಆವರ್ತನೆಯ ಪ್ರಕ್ರಿಯೆಯೆಂದರೆ ವಸಂತ ಕಾಲವು ಬರಬೇಕಿದ್ದರೆ ಶಿಶಿರ ಋತುವು ಬೇಕೇ ಬೇಕು ಹಾಗೇ ಹಗಲಿಗೆ ಮುಂಚೆ ರಾತ್ರೆ ಆಗಲೇಬೇಕು.

 ಇನ್ನಷ್ಟು ಸ್ಪಷ್ಟ ಪಡಿಸಬೇಕೆಂದರೆ ಹೇಗೆ ಅಕ್ಕಸಾಲಿಗನು ಹಳೇ ಬಂಗಾರದ ಒಡವೆಯನ್ನು ಕರಗಿಸಿ ಹೊಸ ಆಭರಣವನ್ನು ತಯಾರು ಮಾಡುವಾಗ ಬಂಗಾರವನ್ನು ನಾಶಮಾಡುವುದಿಲ್ಲವೋ ಹಾಗೇ ಸೃಷ್ಟಿ ಕ್ರಿಯೆಯೂ ಸಹ.

        ಓಂ ನಮಃ ಶಿವಾಯ  ಓಂ ನಮಃ ಶಿವಾಯ

▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
    ಧಮೋ೯ ರಕ್ಷತಿ ರಕ್ಷಿತ:*  ಕೃಷ್ಣಾರ್ಪಣಮಸ್ತು
         ಸರ್ವಜನಾಃ ಸುಖಿನೋಭವತು 
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬

Post a Comment

Previous Post Next Post