ಮನೆಯಲ್ಲಿ ಶಾಂತಿ ಮೂಡಲು ದೌರ್ಜನ್ಯ ಎಸಗುವ ಪತಿಯನ್ನ ಮನೆಯಿಂದ ಹೊರಹಾಕುವುದೇ ಏಕೈಕ ಮಾರ್ಗವಾದ್ರೆ, ಆತನನ್ನ ಹೊರ ಹಾಕಬೋದು ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ಆರ್ ಎನ್ ಮಂಜುಳಾ ಅವ್ರು 'ಪತಿಯನ್ನ ಮನೆಯಿಂದ ಹೊರಹಾಕುವುದ್ರಿಂದ ಮಾತ್ರ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಅನ್ನೋದು ಏಕೈಕ ಮಾರ್ಗವಾಗಿದ್ದರೆ, ಆತ ತನ್ನದೇ ಆದ ಇತರ ವಸತಿ ಸೌಕರ್ಯ ಹೊಂದಿದ್ದಾನೆಯೇ ಅಥವಾ ಇಲ್ಲವೇ ಅನ್ನೋದನ್ನೂ ಪರಿಗಣಿಸದೇ ನ್ಯಾಯಾಲಯಗಳು ಆದೇಶ ನೀಡಬೇಕು.ಅವರಿಗೆ ಪರ್ಯಾಯ ವಸತಿ ವ್ಯವಸ್ಥೆ ಇದ್ದರೆ ಒಳ್ಳೆಯದು. ಆದ್ರೆ, ಇಲ್ಲದಿದ್ದರೆ ಅಂತಹ ವಸತಿ ವ್ಯವಸ್ಥೆ ಮಾಡಿಕೊಳ್ಳುವುದು ಅವರಿಗೆ ಬಿಟ್ಟದ್ದು' ಎಂದರು.
ಇನ್ನು 'ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯಾಲಯ ನೀಡುವ ತೀರ್ಪು, ಮಹಿಳೆಯರಿಗೆ ರಕ್ಷಣೆ ನೀಡಬೇಕು. ಮಹಿಳೆ ತನ್ನ ಮನೆಯೊಳಗೆ ಸುರಕ್ಷಿತವಾಗಿದ್ದಾಳೆ ಅಂತಾ ಖಚಿತಪಡಿಸಿಕೊಳ್ಳೋಕೆ ಸಾಮಾನ್ಯವಾಗಿ ಇಂತಹ ರಕ್ಷಣಾ ಆದೇಶಗಳನ್ನ ರವಾನಿಸಲಾಗುತ್ತೆ. ಮಹಿಳೆ ಗಂಡನ ಇರುವಿಕೆಯಿಂದ ಹೆದರಿ ಚೀರುವಂತಹ ಸನ್ನಿವೇಶವಿದ್ರೆ ನ್ಯಾಯಾಲಯಗಳು ಹೆಂಡತಿಗೆ ಕಿರುಕುಳ ಕೊಡದಂತೆ ಆತನಿಗೆ ಹೇಳಿದರಷ್ಟೇ ಸಾಲದು. ಬದಲಿಗೆ, ಆತ ಮನೆಯಲ್ಲಿರಲು ಅವಕಾಶ ನೀಡಬಾರದು' ಎಂದು ನ್ಯಾಯಮೂರ್ತಿಯವರು ಹೇಳಿದರು.
ಅಂದ್ಹಾಗೆ, ಜಿಲ್ಲಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ವಕೀಲೆಯೊಬ್ಬರು 'ತನ್ನ ಕೆಲಸದ ಬಗ್ಗೆ ಗಂಡನ ವರ್ತನೆ ಉತ್ತಮವಾಗಿಲ್ಲ. ಆತ ಆಗಾಗ್ಗೆ ತನ್ನನ್ನ ನಿಂದಿಸುತ್ತಾನೆ ಮತ್ತು ಮನೆಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸುತ್ತಾನೆ 'ಎಂದು ಆರೋಪಿಸಿದ್ದರು.
Post a Comment