ಬೆಳಗಾವಿ: ಭಾರೀ ಮಳೆಯಾದರೂ ಹೆಚ್ಚಿನ ಅನಾಹುತಗಳು ಸಂಭವಿಸದಂತೆ ಆಲಮಟ್ಟಿ ಜಲಾಶಯದಿಂದ ನೀರು ಬಿಡುಗಡೆ ವಿಷಯದಲ್ಲಿ ಕರ್ನಾಟಕದ ಅಧಿಕಾರಿಗಳು ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಮಹಾರಾಷ್ಟ್ರದಲ್ಲಿ ನೆರೆ ಹಾವಳಿಗೆ ಕರ್ನಾಟಕದ ಆಲಮಟ್ಟಿ ಜಲಾಶಯದಲ್ಲಿ ನೀರು ನಿರ್ವಹಣೆಯೇ ಕಾರಣ ಎಂದು ಮಹಾರಾಷ್ಟ್ರದಲ್ಲಿದ್ದ ಹಿಂದಿನ ಸರಕಾರಗಳು ಮಾಡುತ್ತಿದ್ದ ಆರೋಪಗಳಿಗೆ ವ್ಯತಿರಿಕ್ತವಾಗಿ ಮಹಾರಾಷ್ಟ್ರದ ಸಿಎಂ ಏಕನಾಥ ಶಿಂಧೆ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.
ಅಧಿಕಾರಿಗಳ ಸಮನ್ವಯತೆ
ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಹಾಪುರ ಮತ್ತಿತರ ಕಡೆಗಳಲ್ಲಿ ಉಂಟಾಗುವ ಪ್ರವಾಹಕ್ಕೆ ಆಲಮಟ್ಟಿಯಿಂದ ಬಿಡಲಾಗುವ ನೀರು ಕಾರಣವಲ್ಲ ಎಂದು ಮಹಾರಾಷ್ಟ್ರ ಸರಕಾರದ ನೀರಾವರಿ ತಜ್ಞರ ನೇತೃತ್ವದ ಸಮಿತಿ ಕಳೆದ ವರ್ಷವಷ್ಟೇ ವರದಿ ನೀಡಿತ್ತು. ಈಗ ಅಲ್ಲಿನ ಮುಖ್ಯಮಂತ್ರಿಗಳೇ ಆಲಮಟ್ಟಿ ಅಧಿಕಾರಿಗಳ ಕಾರ್ಯನಿರ್ವಹಣೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದು ಗಮನಾರ್ಹವಾಗಿದೆ.
ಆಲಮಟ್ಟಿಯಲ್ಲಿ ಸದ್ಯ ಮುಖ್ಯ ಎಂಜಿನಿಯರ್ ಆಗಿರುವ ಸುರೇಶ ಹಾಗೂ ಅಧೀಕ್ಷಕ ಎಂಜಿನಿಯರ್ ಬಸವರಾಜ ನೇತೃತ್ವದ ಎಂಜಿನಿಯರ್‌ಗಳ ತಂಡ ಮಹಾರಾಷ್ಟ್ರದ ನೀರಾವರಿ ಅಧಿಕಾರಿಗಳ ಸಮನ್ವಯದೊಂದಿಗೆ ಆಲಮಟ್ಟಿ ಜಲಾಶಯದ ನೀರು ನಿರ್ವಹಣೆ ಮಾಡುತ್ತಿದೆ.
ನೀರು ಬಿಡುಗಡೆ- ಯೋಜನ ಬದ್ಧ
ಕೊಲ್ಹಾಪುರದಲ್ಲಿ ಪ್ರವಾಹ ಪರಿಸ್ಥಿತಿ ಪರಿಶೀಲನ ಸಭೆ ನಡೆಸಿದ ಏಕನಾಥ ಶಿಂಧೆ, ಭಾರೀ ಮಳೆಯಾಗಿದ್ದರೂ, ಆಲಮಟ್ಟಿ ಜಲಾಶಯದಿಂದ ನೀರು ಬಿಡುಗಡೆ ಮಾಡುವಲ್ಲಿ ಅಲ್ಲಿನ ಅಧಿಕಾರಿಗಳು ಯೋಜನ ಬದ್ಧವಾಗಿ ಕೆಲಸ ಮಾಡಿದ್ದಾರೆ ಎಂದರು.
ಮಹಾರಾಷ್ಟ್ರದ ಹಿಂದಿನ ಸರಕಾರಗಳು ಕೃಷ್ಣಾ ನದಿಗೆ ಪ್ರವಾಹ ಬಂದಾಗಲೊಮ್ಮೆ ಕರ್ನಾಟಕದ ಮೇಲೆ ಅರೋಪ ಮಾಡುತ್ತ ಬಂದಿದ್ದವು. ಆದರೆ ಈಗ ಸ್ವತಃ ಮಹಾರಾಷ್ಟ್ರ ಮುಖ್ಯಮಂತ್ರಿಗಳೇ ವಾಸ್ತವ ಪರಿಸ್ಥಿತಿ ಒಪ್ಪಿಕೊಂಡಿದ್ದು, ಆಲಮಟ್ಟಿ ಅಧಿಕಾರಿಗಳ ಯೋಜಿತ ಕಾರ್ಯನಿರ್ವಹಣೆಗೆ ಸಾಕ್ಷಿಯಾಗಿದೆ.
– ಅಶೋಕ ಚಂದರಗಿ, ಕನ್ನಡ ಸಂಘಟನೆ ಮುಖಂಡ
Post a Comment