ವಾರಾಣಸಿ (ಉತ್ತರ ಪ್ರದೇಶ): ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಇರುವ ಶೃಂಗಾರ ಗೌರಿ ಹಾಗೂ ಶಿವಲಿಂಗಕ್ಕೆ ಪೂಜೆ ಸಲ್ಲಿಸಿಕೆ ವಾರಣಾಸಿ ಕೋರ್ಟ್ ಅನುಮತಿ ನೀಡಿದೆ. ಮಸೀದಿ ಆವರಣದಲ್ಲಿ ಸಿಕ್ಕಿರುವ ಶೃಂಗಾರ ಗೌರಿ ಹಾಗೂ ಶಿವಲಿಂಗಕ್ಕೆ ಪ್ರತಿನಿತ್ಯ ಪೂಜೆ ಸಲ್ಲಿಸಲು ಅವಕಾಶ ಕೋರಿ ರಾಖಿಸಿಂಗ್ ಸೇರಿ ನಾಲ್ವರು ಮಹಿಳೆಯರು ಸಲ್ಲಿಸಿರುವ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿದೆ.
ಜ್ಞಾನವಾಪಿ ಮಸೀದಿಯಲ್ಲಿ ಉತ್ಖನನ ನಡೆಸಲು ಕೆಳ ಹಂತದ ನ್ಯಾಯಾಲಯ ಅನುಮತಿ ನೀಡಿತ್ತು. ಪರಿಶೀಲನೆ ವೇಳೆ ಮಸೀದಿಯ ಆವರಣದಲ್ಲಿದ್ದ ವಝುಖಾನದಲ್ಲಿ ಶಿವಲಿಂಗ ಪತ್ತೆಯಾಗಿದೆ ಹಾಗೂ ಮಂಗಳ ಗೌರಿಯ ದೇವಸ್ಥಾನ ಇದೆ ಎಂದು ಅಧಿಕಾರಿಗಳು ಕೋರ್ಟ್‍ಗೆ ವರದಿ ನೀಡಿದ್ದರು. ಈ ವರದಿಯ ಬೆನ್ನಲೆ ದೊಡ್ಡ ಪ್ರಮಾಣ ಸಂಚಲನ ಸೃಷ್ಟಿಯಾಗಿತ್ತು.
ಮಸೀದಿಯ ಜಾಗದಲ್ಲಿ ಮಂದಿರ ಇದೆ ಎಂದು ಕೆಲವರು ವಾದಿಸಿದ್ದರು. ಇದು ಕಾಶಿ ವಿಶ್ವನಾಥನಿಗೆ ಸೇರಿರುವ ಜಾಗ ಎಂದು ಹಿಂದೂಗಳ ವಾದವಾಗಿದೆ. ಆದರೆ ಈ ವಾದದಲ್ಲಿ ಅರ್ಥವಿಲ್ಲ, ಇದು ಕೇವಲ ಮಸೀದಿ ಎನ್ನುವುದು ಮುಸ್ಲಿಮರ ಪ್ರತಿವಾದ.
ಈ ವಾದ-ವಿವಾದ- ಪ್ರತಿವಾದಗಳ ನಡುವೆಯೇ ತಮಗೆ ಪೂಜೆಗೆ ಅವಕಾಶ ನೀಡುವಂತೆ ಕೋರಿ ಮಹಿಳೆಯರು ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಮೂರು ತಿಂಗಳಿಗೂ ಹೆಚ್ಚು ಕಾಲ ವಾದ-ಪ್ರತಿವಾದ ನಡೆದಿತ್ತು. ನಂತರ ಈ ಅರ್ಜಿಯ ತೀರ್ಪನ್ನು ಕೋರ್ಟ್ ಕಾಯ್ದಿರಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಅವರು ಇಂದು ತೀರ್ಪು ಪ್ರಕಟಿಸಿದ್ದಾರೆ.
ಈ ಅರ್ಜಿಯನ್ನು ವಜಾ ಮಾಡಬೇಕು ಇದು ವಿಚಾರಣೆಗೆ ಯೋಗ್ಯವಾಗಿಲ್ಲ ಎಂದು ಮಸೀದಿ ಪರ ವಕೀಲರು ಮಾಡಿದ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.
ಈ ಹಿನ್ನೆಲೆಯಲ್ಲಿ ಮಹಿಳೆಯರು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಯೋಗ್ಯವಾಗಿದೆಯೇ, ಇಲ್ಲವೇ ಎನ್ನುವ ಬಗ್ಗೆ ಕೋರ್ಟ್ ವಿಚಾರಣೆ ನಡೆಸಿದ್ದು, ಇದೀಗ ತೀರ್ಪು ಪ್ರಕಟಗೊಂಡಿದೆ. ಈ ತೀರ್ಪಿಗೂ ಮುನ್ನ ಕೋರ್ಟ್ ಆವರಣದಲ್ಲಿ ಜಮಾಯಿಸಿದ್ದ ಹಿಂದೂ ಭಕ್ತರು ಪೂಜೆ ಸಲ್ಲಿಸಿದ ಘಟನೆ ಕೂಡ ನಡೆದಿದೆ. ಅರ್ಜಿದಾರ ಮಹಿಳೆಯರಿಗೆ ಶಾಲು ಹಾಕಿ ಸನ್ಮಾನ ಕೂಡ ಮಾಡಲಾಯಿತು.
Post a Comment