ಭಿನ್ನಮತ ಹಾಗೂ ಸಮರ್ಥ ನಾಯಕತ್ವದ ಕೊರತೆಯಿಂದ ನೆಲಕಚ್ಚಲಿದೆ .... BJP...ಅರುಣ್ ಸಿಂಗ್ ಅವರ ರಾಜ್ಯ ಪ್ರವಾಸ ವಿವರ


 ಕಾಂಗ್ರೆಸ್ಸಿಗರ ‘ಭಾರತ ಬಿಟ್ಟು ಓಡೋ ಯಾತ್ರೆ’: ನಳಿನ್‍ಕುಮಾರ್ ಕಟೀಲ್ 
ಬೆಂಗಳೂರು: ಕಾಂಗ್ರೆಸ್ ಪಕ್ಷದ್ದು ಭಾರತ ಜೋಡೋ ಯಾತ್ರೆಯಲ್ಲ; ಅದು ‘ಭಾರತ ಬಿಟ್ಟು ಓಡೋ ಯಾತ್ರೆ’ಯಾಗಿ ಪರಿವರ್ತನೆ ಹೊಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ತೊರೆದು ಹೊಸ ಪಕ್ಷ ಸ್ಥಾಪಿಸಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕತ್ವದ ವಿರುದ್ಧ ಕೋಪದಿಂದಿರುವ ನಾಯಕರು ಜೊತೆಗೂಡಿ ಜಿ-23 ಗುಂಪು ರಚಿಸಿದ್ದರು. ಕಾಂಗ್ರೆಸ್ ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವ ಇಲ್ಲ; ಅದು ಚೇತರಿಕೆ ಕಾಣಲಾರದು ಎಂಬುದನ್ನು ಮನಗಂಡ ನಾಯಕರನೇಕರು ಒಬ್ಬೊಬ್ಬರಾಗಿ ಈಗಾಗಲೇ ಆ ಪಕ್ಷಕ್ಕೆ ವಿದಾಯ ಹೇಳಿದ್ದಾರೆ. ಸ್ವಜನಪಕ್ಷಪಾತ, ಕುಟುಂಬ ರಾಜಕಾರಣದ ಮೂಲಕ ಗುರುತಿಸಿಕೊಂಡ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಪಕ್ಷದೊಳಗಿನ ಭಿನ್ನಮತ ಹಾಗೂ ಸಮರ್ಥ ನಾಯಕತ್ವದ ಕೊರತೆಯಿಂದ ನೆಲಕಚ್ಚಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ತೊರೆಯುವ ನಾಯಕರನ್ನು ಒಂದೆಡೆ ಸೇರಿಸಿ ಕಾಂಗ್ರೆಸ್ ಜೋಡೋ ಮಾಡಬೇಕಿದ್ದ ರಾಹುಲ್ ಗಾಂಧಿಯವರು ತಮ್ಮ ಮುತ್ತಾತ ನೆಹರೂ ಅವರು ದೇಶವನ್ನು ಇಬ್ಭಾಗ ಮಾಡಿದ್ದನ್ನು ಮರೆತಿದ್ದಾರೆ. ಇದು ಜಾಣಮರೆವಲ್ಲದೆ ಮತ್ತೇನಲ್ಲ. ಆದರೆ, 130 ಕೋಟಿ ಜನರ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿ ಅವರು ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದು ಮಾಡಿ ದೇಶ ಜೋಡಿಸುವ ಕಾರ್ಯ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಶಾಶ್ವತವಾಗಿ ಮೂಲೆಗುಂಪು
ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದ ಪಕ್ಷ. ಹಿಂದೂ ವಿರೋಧಿ; ಜಾತಿ- ಜಾತಿಗಳ ನಡುವೆ, ಮತೀಯ ಸಂಘರ್ಷ ಹೆಚ್ಚಿಸುವ ಪಕ್ಷವಾದರೆ, ಬಿಜೆಪಿ ಸದಾ ಜನಹಿತ ಮತ್ತು ಅಭಿವೃದ್ಧಿಗಾಗಿ ಶ್ರಮಿಸುವ ಪಕ್ಷ ಎಂಬುದು ಜನರಿಗೆ ಅರಿವಾಗಿದೆ. ಕಾಂಗ್ರೆಸ್ ಪಕ್ಷದ ಆರು ದಶಕಗಳ ಭ್ರಷ್ಟಾಚಾರ, ಸಾಲು ಸಾಲು ಹಗರಣಗಳನ್ನು ಗಮನಿಸಿದ ಮಹಾಜನತೆ ಕಾಂಗ್ರೆಸ್ ಪಕ್ಷವನ್ನು ಶಾಶ್ವತವಾಗಿ ಮೂಲೆಗುಂಪು ಮಾಡುವ ನಿರ್ಧಾರ ಮಾಡಿದ್ದಾರೆ ಎಂದು ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.

ರಾಹುಲ್ ಗಾಂಧಿಯವರು ಭಾರತ್ ಜೋಡೋ ಮೂಲಕ ಕರ್ನಾಟಕಕ್ಕೆ ಪ್ರವೇಶ ಮಾಡುವ ಸಂದರ್ಭದಲ್ಲೇ ಇಲ್ಲಿನ ಕಾಂಗ್ರೆಸ್ ಮುಖಂಡರು ಎರಡು ತಂಡಗಳಾಗಿ ಸ್ವಾಗತ ಮಾಡಿದ್ದಾರೆ. ಮುಖ್ಯಮಂತ್ರಿ ಕುರ್ಚಿಯ ಹಗಲುಕನಸು ಕಾಣುವ ಸಿದ್ದರಾಮಯ್ಯ ಒಂದೆಡೆ ಸ್ವಾಗತ ಕೋರಿದರೆ, ಜೈಲಿನತ್ತ ಮುಖ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಮತ್ತು ಹಗರಲಿರುಳೂ ಸಿಎಂ ಕುರ್ಚಿಯ ತಿರುಕನ ಕನಸು ಕಾಣುವ ಡಿ.ಕೆ.ಶಿವಕುಮಾರ್ ಮತ್ತೊಂದೆಡೆ ರಾಹುಲ್ ಗಾಂಧಿಯವರನ್ನು ಸ್ವಾಗತಿಸಿದ್ದಾರೆ. ಇದು ಕಾಂಗ್ರೆಸ್ ಭಿನ್ನಮತಕ್ಕೆ ಸ್ಪಷ್ಟ ನಿದರ್ಶನ. ಇದನ್ನು ಜನತೆ ಗಮನಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಂವಿಧಾನದ ಕರ್ತೃ, ಮಹಾನ್ ನಾಯಕ ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರಿಗೆ ಸದಾ ಅನ್ಯಾಯ- ಅವಹೇಳನ ಮಾಡಿದ ಪಕ್ಷ ಕಾಂಗ್ರೆಸ್. ಅವರನ್ನು ಕೇವಲ ಮತಬ್ಯಾಂಕಾಗಿ ಅದು ಬಳಸಿಕೊಂಡಿತ್ತು. ಆದರೆ, ಬಿಜೆಪಿ ಅವರ ಪ್ರಮುಖ ಸ್ಥಳಗಳನ್ನು ಪಂಚಕ್ಷೇತ್ರಗಳನ್ನಾಗಿ ಅಭಿವೃದ್ಧಿ ಪಡಿಸಿದೆ. ರಾಜ್ಯದಲ್ಲೂ ಅವರು ಭೇಟಿ ಕೊಟ್ಟ ಸ್ಥಳಗಳನ್ನು ಅಭಿವೃದ್ಧಿ ಪಡಿಸಲು ಬಿಜೆಪಿಯ ಬಸವರಾಜ ಬೊಮ್ಮಾಯಿಯವರ ನೇತೃತ್ವದ ರಾಜ್ಯ ಸರಕಾರ ಮುಂದಾಗಿದೆ ಎಂದು ಅವರು ವಿವರಿಸಿದ್ದಾರೆ.
‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಚಿಂತನೆಯೊಂದಿಗೆ ಮುನ್ನಡೆಯುತ್ತಿರುವ ಜಗದ್ವಂದ್ಯ ನಾಯಕ ನರೇಂದ್ರ ಮೋದಿಜಿ ಮತ್ತು ರಾಜ್ಯದ ಕಾಮನ್ ಮ್ಯಾನ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೇಂದ್ರ- ರಾಜ್ಯದಲ್ಲಿ ಮತ್ತೊಮ್ಮೆ ಅವಕಾಶ ನೀಡಲು ಪ್ರಜ್ಞಾವಂತ ಮತದಾರರು ಡಬಲ್ ಎಂಜಿನ್ ಅಭಿವೃದ್ಧಿಯ ಸರಕಾರಗಳಿಗೆ ಮತ್ತೆ ಸ್ಪಷ್ಟ ಬಹುಮತ ಕೊಡಲು ಈಗಾಗಲೇ ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್ಸಿಗರು ಭಾರತ್ ಜೋಡೋದಂಥ ನಾಟಕದ ಮೂಲಕ ಜನರಿಗೆ ರಂಜನೆಯನ್ನಷ್ಟೇ ನೀಡಬಲ್ಲರು ಎಂದು ಅವರು ತಿಳಿಸಿದ್ದಾರೆ.
2023ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಗೆದ್ದು ರಾಜ್ಯವನ್ನು ‘ಕಾಂಗ್ರೆಸ್ ಪಾರ್ಟಿ ಎಟಿಎಂ’ ಮಾಡಿಕೊಳ್ಳಲು ಕಾಂಗ್ರೆಸ್‍ನ ನಕಲಿ ಗಾಂಧಿ ಕುಟುಂಬ ಯೋಚಿಸಿದೆ. ಅದು ಈಡೇರುವ ಸಾಧ್ಯತೆ ಇಲ್ಲ ಎಂಬುದು ಅರಿವಾದ ಬಳಿಕ ಡಿಕೆ ಶಿವಕುಮಾರ್- ಸಿದ್ದರಾಮಯ್ಯರವರು ಬಿಜೆಪಿ ಸರಕಾರದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ತಮ್ಮ ಅವಧಿಯ ಶಿಕ್ಷಕರ ನೇಮಕಾತಿ ಹಗರಣ, ಪೊಲೀಸ್ ಇಲಾಖೆಯ ನೇಮಕಾತಿ ಹಗರಣ, ದಿಂಬು- ಹಾಸಿಗೆ ಖರೀದಿ ಹಗರಣ, ಅರ್ಕಾವತಿ ರೀಡೂ ಹಗರಣಗಳ ತನಿಖೆ ಸಾಧ್ಯತೆಯ ವಿಚಾರ ತಿಳಿದ ಬಳಿಕ ಸಿದ್ದರಾಮಯ್ಯರಿಗೆ ನಿದ್ರೆ ಬರುತ್ತಿಲ್ಲ; ಜೈಲುರಾಮಯ್ಯ ಆಗುವ ಆತಂಕ ಅವರನ್ನು ಕಾಡುತ್ತಿದೆ. ‘ತಾನು ಕಳ್ಳ ಪರರನ್ನು ನಂಬಲಾರ’ ಎಂಬ ಸ್ಥಿತಿ ಈ ಮುಖಂಡರದು ಎಂದು ತಿಳಿಸಿದ್ದಾರೆ.
ಪಿಎಫ್‍ಐ ಮತ್ತು ಎಸ್‍ಡಿಪಿಐಯ ಸಾವಿರಾರು ಮುಖಂಡರು ಮತ್ತು ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನು ರದ್ದು ಮಾಡಿದ್ದ ಸಿದ್ದರಾಮಯ್ಯರ ಹಿಂದಿನ ಸರಕಾರವು ಜನರಿಗೆ ‘ಪಿಎಫ್‍ಐ ಭಯೋತ್ಪಾದನಾ ಭಾಗ್ಯ’ ನೀಡಿತ್ತು. ಪಿಎಫ್‍ಐ ಮತ್ತು ಸಹ ಸಂಘಟನೆಗಳ ನಿಷೇಧ ಸಿದ್ದರಾಮಣ್ಣನಿಗೆ ನುಂಗಲಾರದ ಬಿಸಿ ತುಪ್ಪದಂತಾಗಿದೆ. ಓಲೈಕೆ, ತುಷ್ಟೀಕರಣ ಮತ್ತು ಹಿಂದೂ ವಿರೋಧಿ ರಾಜಕಾರಣ ಮಾಡುತ್ತಲೇ ಬಂದಿರುವ ಸಿದ್ದರಾಮಣ್ಣ ಮತ್ತು ಡಿ.ಕೆ.ಶಿವಕುಮಾರ್ ಕುತಂತ್ರಗಳು ಮುಂದಿನ ಚುನಾವಣೆಯಲ್ಲಿ ಫಲ ಕೊಡುವುದಿಲ್ಲ ಎಂದು ವಿಶ್ವಾಸದಿಂದ ನುಡಿದಿದ್ದಾರೆ.


   
ಅರುಣ್ ಸಿಂಗ್ ಅವರ ರಾಜ್ಯ ಪ್ರವಾಸ ವಿವರ
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರು ಅಕ್ಟೋಬರ್ 6ರಂದು ಸಂಜೆ 5.00 ಗಂಟೆಗೆ ಬೆಂಗಳೂರು ವಿಮಾನನಿಲ್ದಾಣಕ್ಕೆ ಆಗಮಿಸುವರು. ಸಂಜೆ 6.00 ಗಂಟೆಗೆ ಅವರು ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ಭಾಗವಹಿಸುವರು. ರಾತ್ರಿ ಅವರು ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ವಾಸ್ತವ್ಯ ಇರುವರು.
ಅಕ್ಟೋಬರ್ 7ರಂದು ಬೆಳಿಗ್ಗೆ ಅವರು ಅರಮನೆ ಮೈದಾನದಲ್ಲಿ ಪಕ್ಷದ ರಾಜ್ಯ ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸುವರು. ರಾತ್ರಿ 8 ಗಂಟೆಗೆ ರಾಜ್ಯ ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ಕೊಡುವ ಅವರು ಬಳಿಕ ಬೆಂಗಳೂರು ವಿಮಾನನಿಲ್ದಾಣದಿಂದ ದೆಹಲಿಗೆ ಪ್ರಯಾಣಿಸಲಿದ್ದಾರೆ.


                                                                   
 (ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
 ಬಿಜೆಪಿ ಕರ್ನಾಟಕ

Post a Comment

Previous Post Next Post