ಭಕ್ತಿ ಎಂದರೆ ವ್ಯಾಪಾರವಲ್ಲ, ಅದು ಸಂಪೂರ್ಣ ಸಮರ್ಪಣೆ, ಸಂಪೂರ್ಣವಾಗಿ ನಮ್ಮನ್ನು ಅರ್ಪಿಸುವುದಷ್ಟೇ ನಮ್ಮ ಕೆಲಸ’
ಒಮ್ಮೆ ತಮ್ಮಂದಿರನ್ನು ಕರೆದ ಯುಧಿಷ್ಠಿರ,
‘ನಾಳೆ ಧನುರ್ಮಾಸದ
ಕೊನೆಯ ದಿನ. ನನಗೆ ಶ್ರೀಕೃಷ್ಣನೊಂದಿಗೆ,ಊಟ ಮಾಡಿ ವ್ರತ ಪೂರ್ಣಗೊಳಿಸಬೇಕೆಂಬ ಬಯಕೆ. ನಿಮ್ಮಲ್ಲಿ ಯಾರಾದರೂ ದ್ವಾರಕೆಗೆ ಹೋಗಿ ಸೂರ್ಯೋದಯಕ್ಕೂ ಮೊದಲು ಆತನನ್ನು ಕರೆತರುವಿರಾ?’
ಎಂದು ಕೇಳಿದ.
ತಮ್ಮಂದಿರಿಗೆ ಅಚ್ಚರಿಯಾಯಿತು.ಕಾರಣ, ಹಸ್ತಿನಾವತಿಯಿಂದ ದ್ವಾರಕೆಗೆ ಹೋಗಿ ,ಕೃಷ್ಣನನ್ನು ಕರೆತರಲು ಕನಿಷ್ಠ ಹತ್ತು ದಿನಗಳಾದರೂ ಬೇಕಿತ್ತು!
ಸೂರ್ಯೋದಯವಾಗುವುದರೊಳಗೆ ಅದು ಹೇಗೆ ಸಾಧ್ಯ? ಅಷ್ಟರಲ್ಲಿ ಅಲ್ಲಿಗೆ ಬಂದ ಭೀಮನಿಗೆ ವಿಷಯ ತಿಳಿದು ‘ನೀವು ಶ್ರೀ ಕೃಷ್ಣನನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಿ,. ಸೂರ್ಯೋದಯಕ್ಕೂ ಮೊದಲು ಆತನನ್ನು ಕರೆತರುವ ಜವಾಬ್ದಾರಿ ನನ್ನದು’ ಎಂದ.
ಆದರೆ ಧರ್ಮರಾಯನಿಗೆ ಆ ರಾತ್ರಿ ನಿದ್ರೆ ಬಾರದಾಯಿತು. ಭೀಮ ದ್ವಾರಕೆಗೆ ಹೋಗಿದ್ದಾನೆಯೇ ಇಲ್ಲವೇ? ಎಂಬುದನ್ನು ತಿಳಿಯಲು ಸೇವಕನೊಬ್ಬನನ್ನು ಮಧ್ಯರಾತ್ರಿಯಲ್ಲೇ, ಅವನ ಬಿಡಾರಕ್ಕೆ ಕಳಿಸಲಾಯಿತು. ಹಿಂದಿರುಗಿ ಬಂದ ಸೇವಕ, ಭೀಮ ನಿಶ್ಚಿಂತನಾಗಿ ಮಲಗಿದ್ದ. ವಿಷಯವನ್ನು ಯುಧಿಷ್ಠಿರನಿಗೆ ತಿಳಿಸಿದ. ಚಿಂತಿತನಾದ ಯುಧಿಷ್ಠಿರ ತಾನೇ ಬಂದು ಭೀಮನನ್ನು ಎಬ್ಬಿಸಿದ. ಸ್ನಾನ ಸಂಧ್ಯಾವಂದನಾದಿಗಳನ್ನು ಮುಗಿಸಿದ ಭೀಮ ಅಲ್ಲಿ ದ್ರೌಪದಿ ಮತ್ತು ಯುಧಿಷ್ಠಿರರು ಗಮನಿಸುತ್ತಿರುವಂತೆಯೇ, ದ್ವಾರಕೆಯ ಕಡೆಗೆ ತಿರುಗಿದ ಭೀಮ, ಮನದಲ್ಲೇ ಶ್ರೀಕೃಷ್ಣನನ್ನು ನೆನೆದು ಸಾಷ್ಟಾಂಗ ನಮಸ್ಕಾರ ಮಾಡಿ, ಎದ್ದು ತನ್ನ ಗದೆಯನ್ನು ಆಕಾಶಕ್ಕೆ ಎಸೆದು ಭಕ್ತಿಪರವಶನಾಗಿ, ‘ಪರಮಾತ್ಮ, ಈ ಗದೆ ನನ್ನ ತಲೆಯ ಮೇಲೆ ಬಿದ್ದು ಪ್ರಾಣ ಹೋಗುವುದರೊಳಗಾಗಿ, ನೀನು ಇಲ್ಲಿರಬೇಕು. "ನಿನ್ನ ಭಕ್ತನ ರಕ್ಷಣೆ ಮಾಡುವ ಹೊಣೆ ನಿನ್ನದು ತಂದೆ’ ಎಂದ.
ಮುಂದೇನಾಗುವುದೋ? ಎನ್ನುವಷ್ಟರಲ್ಲಿ ಶ್ರೀಕೃಷ್ಣ ಆಕಾಶದಲ್ಲಿ ಪ್ರತ್ಯಕ್ಷನಾಗಿ ಗದೆಯನ್ನು ಹಿಡಿದು ಕೆಳಗಿಳಿದು ಬಂದು ಭೀಮನನ್ನು ಆಲಿಂಗಿಸಿಕೊಂಡ! ಅಲ್ಲಿಗೆ ಯುಧಿಷ್ಠಿರನ ಅಭೀಷ್ಠೆಯೂ ಈಡೇರಿತ್ತು!
ಹೌದು, ಭಗವಂತ ಭಕ್ತಿಗೆ ಒಲಿಯುತ್ತಾನೆ, ಭಕ್ತನ ಇಚ್ಛೆ ಈಡೇರಿಸುತ್ತಾನೆ. ಆದರೆ ಆತನ ಬಗೆಗೆ ನಮಗೆ ಸಂಪೂರ್ಣ ನಂಬಿಕೆ ಇರಬೇಕಷ್ಟೇ.!ಕಣ್ತುಂಬಿ ಮೊರೆಯಿಟ್ಟಾಗ,ಕರುಣಾ ಸಿಂಧುವಾದ ಆತ ಆಪ್ತಮಿತ್ರನಂತೆ ಕಷ್ಟದಲ್ಲಿ ನಮ್ಮ ಕೈಹಿಡಿದು ನಡೆಸುತ್ತಾನೆ. ಭಕ್ತಿ ಎಂಬುದು ಭಕ್ತ ಮತ್ತು ಭಗವಂತನ ನಡುವೆ ಇರುವ ಒಡಂಬಡಿಕೆ. ಭಕ್ತಿಯ ಅಭಿವ್ಯಕ್ತಿಯೇ ಪ್ರಾರ್ಥನೆ. ಈ ದೃಷ್ಟಿಯಿಂದಲೇ ನಮ್ಮ ಪ್ರಾಚೀನ ಋಷಿಗಳು, ‘ಭಕ್ತಿ ಎಂದರೆ ವ್ಯಾಪಾರವಲ್ಲ, ಅದು ಸಂಪೂರ್ಣ ಸಮರ್ಪಣೆ, ಸಂಪೂರ್ಣವಾಗಿ ನಮ್ಮನ್ನು ಅರ್ಪಿಸುವುದಷ್ಟೇ ನಮ್ಮ ಕೆಲಸ’
ಎಂದಿದ್ದಾರೆ.
Post a Comment