ಸಂಪುಟ ಸಭೆ ಮಹತ್ವದ ನಿರ್ಧಾರ

 ಬಿಜೆಪಿ ಅವಧಿಯಲ್ಲಿ ಮಾಡಿದ್ದ 
ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿ ರದ್ದು: ಸಂಪುಟ ಸಭೆ ಮಹತ್ವದ ನಿರ್ಧಾರ 

ಬೆಂಗಳೂರು: ಬಿಜೆಪಿ ಅವಧಿಯಲ್ಲಿ ಮಾಡಿದ್ದ  ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿ ರದ್ದು ಮಾಡಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ 2022 ತಿದ್ದುಪಡಿ  ರದ್ದು ಮಾಡಲು ಸಂಪುಟ ನಿರ್ಧಾರ ಕೈಗೊಂಡಿದೆ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಹೇಳಿದರು. 

ಬಿಜೆಪಿ ಅವಧಿಯಲ್ಲಿ ಜಾರಿಗೆ ತಂದಿದ್ದ, ಮತಾಂತರ ನಿಷೇಧ ಕಾಯ್ದೆ  ತಿದ್ದುಪಡಿ ಸಾಕಷ್ಟು ವಿವಾದವನ್ನು‌ ಹುಟ್ಟು ಹಾಕಿತ್ತು. ಮತಾಂತರ ತಡೆಯುವ ನಿಟ್ಟಿನಲ್ಲಿ ಈ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ ಎಂದು ಬಿಜೆಪಿ ಸರ್ಕಾರ ಸಮರ್ಥಿಸಿಕೊಂಡಿತ್ತು. ಆದರೆ ಸದನದಲ್ಲಿ ಕಾಂಗ್ರೆಸ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. 

ಆದರೆ ಇದೀಗ ಮೂರನೇ ಕ್ಯಾಬಿನೆಟ್ ಸಭೆಯಲ್ಲೇ ಮತಾಂತರ ನಿಷೇಧ ಕಾಯ್ದೆಗೆ ಕೊಕ್ ಕೊಡಲಾಗಿದೆ.  ಈ ಕುರಿತಾದ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡನೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಕಾನೂನು‌‌ ಸಚಿವ ಎಚ್ ಕೆ ಪಾಟೀಲ್ ತಿಳಿಸಿದರು.

ಎಪಿಎಂಸಿ ಕಾಯ್ದೆ ರದ್ದು! 

ಬಿಜೆಪಿ ಅವಧಿಯಲ್ಲಿ ಜಾರಿಗೆ ತಂದಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರ ರದ್ದು ಮಾಡಲು ನಿರ್ಧಾರ ಮಾಡಿದೆ. ಇದರಿಂದ ರೈತರಿಗೆ ನಷ್ಟವಾಗಿದೆ ಹಾಗೂ ಅವಲಂಭಿತರಿಗೆ ನಷ್ಟವಾಗಿದೆ. ಈ‌ ಹಿನ್ನಲೆಯಲ್ಲಿ ಹಳೆ ಎಪಿಎಂಸಿ ಕಾಯ್ದೆಯನ್ನು ಕೆಲವೊಂದು ಮಾರ್ಪಾಡುಗಳ ಮಾಡಿ ಮುಂಬರುವ ಅಧಿವೇಶನದಲ್ಲಿ ಮಸೂದೆ ಮಂಡನೆ ಮಾಡಲು ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ.
 ಶಾಲಾ ಪಠ್ಯದಲ್ಲಿ ಹೆಡ್ಗೆವಾರ್,‌ ಸಾವರ್ಕರ್ ಪಠ್ಯಕ್ಕೆ, ಚಕ್ರವರ್ತಿ ಸೂಲಿಬೆಲೆ ಪಾಠಕ್ಕೆ ಕೊಕ್: ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ 

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಪಠ್ಯ ಪರಿಷ್ಕರಣೆಯಲ್ಲಿ ಸೇರ್ಪಡೆ ಮಾಡಲಾಗಿದ್ದ ಆರ್ ಎಸ್ ಎಸ್ ಸ್ಥಾಪಕ ಹೆಡ್ಗೆವಾರ್,‌ ವೀರ  ಸಾವರ್ಕರ್ ಪಠ್ಯಕ್ಕೆ ಕೊಕ್ ನೀಡಲಾಗಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಸಂಪುಟ ಸಭೆಯ ಬಳಿಕ ಈ ವಿಚಾರವಾಗಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, 6 ರಿಂದ ಹತ್ತನೇ ತರಗತಿಯವರೆಗೆ ಸಮಾಜ ವಿಜ್ಞಾನ ಹಾಗೂ ಕನ್ನಡ ಪಠ್ಯದಲ್ಲಿ ಕೆಲವೊಂದು ಬದಲಾವಣೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು

ಬಿಜೆಪಿ ಅವಧಿಯಲ್ಲಿ ಪರಿಷ್ಕರಣೆ ಮಾಡಿದ ಪಠ್ಯ ಈಗಾಗಲೇ  ಮಕ್ಕಳ ಕೈಗೆ ಹೋಗಿದೆ. ಮತ್ತೆ ಪ್ರಿಂಟ್ ಮಾಡಲು ಅಗಲ್ಲ. ಖರ್ಚು ಜಾಸ್ತಿ ಅಗುತ್ತದೆ. ಈ‌ ಹಿನ್ನಲೆಯಲ್ಲಿ ಪಠ್ಯದಲ್ಲಿ  ಯಾವುದು ಅವಶ್ಯಕತೆ ಇಲ್ಲ ಅದನ್ನು ತೆಗೆದಿದ್ದೇವೆ. ಯಾವುದು ಸೇರ್ಪಡೆ ಮಾಡಬೇಕು ಅದನ್ನು ಮಾಡಿದ್ದೇವೆ ಎಂದು‌ ತಿಳಿಸಿದರು.

ಇದಕ್ಕಾಗಿ ಐದು ಜನರ ಸಮಿತಿಯನ್ನು ರಚನೆ ಮಾಡಲಾಗಿತ್ತು. ಆರಂಭದಲ್ಲಿ 45 ಬದಲಾವಣೆ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಅದರೆ ಇದೀಗ ಸಾವಿತ್ರಿ ಭಾಯಿ ಪುಲೆ ಪಾಠ ಪಠ್ಯದಲ್ಲಿ  ಸೇರ್ಪಡೆ ಮಾಡಲಾಗಿದೆ.
ಅಂಬೇಡ್ಕರ್ ಕುರಿತಾದ ಕವನ ಸೇರ್ಪಡೆ ಮಾಡಲಾಗಿದೆ. ಅಷ್ಟೇ ಅಲ್ಲದೆ, ಜವಹರಲಾಲ್ ನೆಹರೂ ಅವರು, ಪುತ್ರಿ ಇಂದಿರಾ ಗಾಂಧಿಗೆ  ಬರೆದ ಪತ್ರವನ್ನು ಪಠ್ಯ ವಾಗಿ ಸೇರ್ಪಡೆ ಮಾಡಲಾಗಿದೆ.

ಹೆಡ್ಗೆವಾರ್ ಪಾಠದ‌ ಜೊತೆಗೆ ಚಕ್ರವರ್ತಿ ಸೂಲಿಬೆಲೆ ಬರೆದ ಪಠ್ಯಕ್ಕೂ ಕೊಕ್ ಕೊಡಲಾಗಿದೆ ಎಂದರು. ಪಠ್ಯ ಪರಿಷ್ಕರಣೆ ಮಾಡಲು ಮುಂದಿನ 15 ದಿನಗಳಲ್ಲಿ ಸಮಿತಿ ರಚನೆ ಮಾಡಲಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
 ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದು ಕಡ್ಡಾಯ

ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದು ಕಡ್ಡಾಯ ಮಾಡಿ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್ ಸಿ ಮಹಾದೇವಪ್ಪ ಮಾತನಾಡಿ, ಸರ್ಕಾರಿ ಕಚೇರಿಯಲ್ಲಿ ಸಂವಿಧಾನದ ಪೀಠಿಕೆ ಫೋಟೋ ಇಡಬೇಕು ಎಂದು ಸಂಪುಟದಲ್ಲಿ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.





 ಬೆಂಗಳೂರು : ಅನ್ನಭಾಗ್ಯ ಯೋಜನೆಗೆ ಬೇಕಾದ ಅಕ್ಕಿಯನ್ನು ಹೊರರಾಜ್ಯಗಳಿಂದ ತರಲು ಖುದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸಜ್ಜಾಗಿದ್ದಾರೆ.
ಯೋಜನೆಗೆ ಅಗತ್ಯವಾದ ಅಕ್ಕಿಯನ್ನು ತೆರೆದ ಮಾರುಕಟ್ಟೆಯಲ್ಲಿ ಒದಗಿಸಲು ಕೇಂದ್ರ ಸರ್ಕಾರ ನಿರಾಕರಿಸಿದ ಹಿನ್ನೆಲೆಯಲ್ಲಿ ಇದನ್ನು ಪ್ರತಿಷ್ಟೆಯಾಗಿ ತೆಗೆದುಕೊಂಡಿರುವ ಸಿದ್ಧರಾಮಯ್ಯ ತಮ್ಮ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯನ್ನು ಜುಲೈ ಒಂದರಂದೇ ಜಾರಿಗೆ ತರಲು ಎಲ್ಲ ಕಸರತ್ತು ನಡೆಸಿದ್ದಾರೆ.
ವಿಧಾನಸೌಧದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ,ಅನ್ನಭಾಗ್ಯ ಯೋಜನೆಗೆ ಅಗತ್ಯವಾದ ಅಕ್ಕಿ ಯಾವ ಯಾವ ರಾಜ್ಯಗಳಿಂದ ತರಬಹುದು ಎಂಬ ಕುರಿತು ಮಾಹಿತಿ ಪಡೆದಿದ್ದಲ್ಲದೆ,ಈ ಅಕ್ಕಿಯನ್ನು ಪಡೆಯಲು ಹೊರರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಸಿದ್ಧ ಎಂಬ ಸಂದೇಶ ರವಾನಿಸಿದರು.
ಈ ಮಧ್ಯೆ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಅವರು, ಅನ್ನಭಾಗ್ಯ ಯೋಜನೆಗೆ ಅಗತ್ಯವಾದ ಅಕ್ಕಿಯನ್ನು ನೀಡಲು ಕೇಂದ್ರ ಸರ್ಕಾರ ಹಿಂಜರಿದ ಬೆಳವಣಿಗೆಯನ್ನು ಖಂಡಿಸಿದರು.
ತೆರೆದ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಅಕ್ಕಿಯನ್ನು 34  ರೂ. ದರದಲ್ಲಿ ಖರೀದಿಸಲು ನಾವು ಸಿದ್ಧರಿದ್ದರೂ ಕೇಂದ್ರ ಸರ್ಕಾರ ನಮಗೆ ಅಕ್ಕಿ ನೀಡಲು ತಯಾರಿಲ್ಲ ಎಂದಿದೆ. ಆದರೆ ಅದೇ ಕಾಲಕ್ಕೆ ಟೆಂಡರ್ ಮೂಲಕ 15 ಲಕ್ಷ ಟನ್ ಅಕ್ಕಿಯನ್ನು ವಿಲೇವಾರಿ ಮಾಡಲು ತಯಾರಿ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಶುರುವಿನಲ್ಲಿ ನಮಗೆ ಅಕ್ಕಿ ಕೊಡುವುದಾಗಿ ಹೇಳಿದವರು ಇದ್ದಕ್ಕಿದ್ದಂತೆ ಅಕ್ಕಿ ಕೊಡುವುದಿಲ್ಲ ಎಂದಿರುವುದು ರಾಜಕೀಯವೇ ಹೊರತು ಇನ್ನೇನಲ್ಲ. ಬಡವರ ಪರ ಕಾರ್ಯಕ್ರಮಗಳಿಗೆ ಅದು ವಿರುದ್ಧವಾಗಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ ಎಂದರು.
ಕೇಂದ್ರ ಸರ್ಕಾರದ ಈ ಧೋರಣೆಯ ಹಿನ್ನೆಲೆಯಲ್ಲಿ ನಾವು ತೆಲಂಗಾಣ,ಛತ್ತೀಸ್ ಘಡದ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿದ್ದು,ಅವರು ರಾಜ್ಯಕ್ಕೆ ಅಕ್ಕಿ ನೀಡಲು ಒಪ್ಪಿಕೊಂಡಿದ್ದಾರೆ.ಆದರೆ ಯಾವ ರೀತಿ ರಾಜ್ಯಕ್ಕೆ ಸರಬರಾಜು ಮಾಡಬೇಕು ಎಂಬ ಸಂಬಂಧ ಚರ್ಚಿಸಲು ಬರುವಂತೆ ಹೇಳಿದ್ದಾರೆ. ಅದರ ಪ್ರಕಾರ, ನಮ್ಮ ಅಧಿಕಾರಿಗಳ ತಂಡ ತೆಲಂಗಾಣಕ್ಕೆ ತೆರಳಿದ್ದು,ಆದಷ್ಟು ಬೇಗ ಹೊರರಾಜ್ಯಗಳಿಂದ ಅಗತ್ಯದಷ್ಟು ಅಕ್ಕಿ ಪಡೆಯಲು ಕ್ರಮ ಕೈಗೊಳ್ಳುತ್ತೇವೆ. ಸಾಧ್ಯವಾದ ಮಟ್ಟಿಗೆ ಜುಲೈ 1 ರಿಂದಲೇ ಈ ಯೋಜನೆಯನ್ನು ಜಾರಿಗೊಳಿಸಲು ತಯಾರಿ ನಡೆಸಿದ್ದೇವೆ ಎಂದರು.
ಅನ್ನಭಾಗ್ಯ ಯೋಜನೆಗೆ ಬೇಕಾದ ಅಕ್ಕಿಯನ್ನು ಪಡೆಯಲು ಹೊರರಾಜ್ಯದ ಮುಖ್ಯಮಂತ್ರಿಗಳ ಜೊತೆ ಮಾತನಾಡಲು ನಾನೇ ಸಿದ್ಧ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಕೇಂದ್ರ ಸರ್ಕಾರದ ಅಸಹಕಾರದ ಹಿನ್ನೆಲೆಯಲ್ಲಿ ಹೊರರಾಜ್ಯಗಳಿಂದ ಅಕ್ಕಿ ತರುವುದು ಅನಿವಾರ್ಯ. ಈ  ಸಂದರ್ಭದಲ್ಲಿ ಅಕ್ಕಿಯನ್ನು ಸಾಗುವಳಿ ಮಾಡಲು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ವೆಚ್ಚವಾಗಬಹುದು. ಆದರೆ ಸಾಧ್ಯವಾದ ಮಟ್ಟಿಗೆ ಖರ್ಚನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ತೆಲಂಗಾಣದಿಂದ ಅಕ್ಕಿ ತರುವಾಗ ಕಲಬುರಗಿ ಸೇರಿದಂತೆ ರಾಜ್ಯದ ಹಲವು ಪ್ರದೇಶಗಳಿಗೆ ಕಡಿಮೆ  ವೆಚ್ಚವಾಗುತ್ತದೆ. ಆದರೆ ಛತ್ತೀಸ್ ಘಡದಿಂದ ಅಕ್ಕಿ ತರುವಾಗ ಹೆಚ್ಚು ವೆಚ್ಚವಾಗುತ್ತದೆ. ಹೀಗಾಗಿ ಎಲ್ಲ ಸಾಧಕ ಭಾದಕಗಳನ್ನು ಪರಿಶೀಲಿಸಿಯೇ ಮುಂದುವರಿಯುವುದಾಗಿ ಅವರು ತಿಳಿಸಿದರು. 
10 ವರ್ಷ ಯುಪಿಎ ಆಡಳಿತದಲ್ಲಿ ತಾರತಮ್ಯ ಮಾಡಿರಲಿಲ್ಲ. ಪಕ್ಕದ ರಾಜ್ಯಗಳಿಂದ ಅಕ್ಕಿ ತಂದು 10 ಕೆಜಿ ಕೊಟ್ಟು ಮಾತು ಉಳಿಸಿಕೊಳ್ಳುತ್ತೇವೆ. ನಾವು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳ ಅಕ್ಕಿಯನ್ನು ಖರೀದಿಸಿ ಹೆಚ್ಚಿನ ಹೊರೆಯಾಗದಂತೆ ಬಡವರಿಗೆ ನೀಡಲು ಉದ್ದೇಶಿಸಿದ್ದೇವೆ ಎಂದರು.
ಅಕ್ಕಿ ಅಲ್ಲದೆ, ರಾಗಿ, ಜೋಳ ಕೂಡ ಪಡಿತರ ವ್ಯವಸ್ಥೆಯಲ್ಲಿ ನೀಡಲಾಗುತ್ತಿದೆ. ನಾವು ಅಕ್ಕಿ ಕೊಡುವುದಾಗಿ ಮಾತು ಕೊಟ್ಟಿದ್ದೇವೆ. ಸಮಯಕ್ಕೆ ಸರಿಯಾಗಿ ನೀಡಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ  ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಅವರು ಮಾತನಾಡಿ,ಸಾರಿಗೆ ಇಲಾಖೆ ಹೊಸತಾಗಿ ಹತ್ತು ಡಬಲ್ ಡೆಕ್ಕರ್ ಬಸ್ಸುಗಳು ಮತ್ತು ಎಲೆಕ್ಷ್ಟಿಕ್ ವಾಹನಗಳನ್ನು ಖರೀದಿಸಲು 28   ಕೋಟಿ ರೂ. ಕೊಡಲಾಗುವುದು ಎಂದು ನುಡಿದರು.
ಪ್ರಕೃತಿ ವಿಕೋಪಕ್ಕೆ ಸಂಬಂಧಪಟ್ಟಂತೆ ಸಂಪುಟ ಉಪಸಮಿತಿಯನ್ನು ರಚಿಸಬೇಕಿದ್ದು,ಈ ಸಂಬಂಧದ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ನೀಡಲು ಸಂಪುಟ ಸಭೆ ತೀರ್ಮಾನಿಸಿದೆ ಎಂದರು.

Post a Comment

Previous Post Next Post