ಸಾಕೇತರಾಜನ್ ನಿಂದ ರಾಮಾನುಜರತನಕ .....
ಕ್ರಾಂತಿಕಾರಿ ಕವಿ ಗದ್ದರ್ ಇಹಲೋಕದ ವ್ಯಾಪಾರ ಮುಗಿಸಿದ್ದಾರೆ .
ಅದು 2005 ಇರಬೇಕು . ದೂರದ ಶೃಂಗೇರಿಯ ದಟ್ಟ ಕಾಡಿನಲ್ಲಿ ಬೆಳಗಿನ ಜಾವದ ಗುಂಡಿನ ಚಕಮಕಿಯಲ್ಲಿ ನಕ್ಸಲ್ ಚಳವಳಿಯ ಭೂಗತ ನಾಯಕ ' ಪ್ರೇಮ್ ' ಎಂದೇ ಗುರುತಿಸಿಕೊಂಡಿದ್ದ ಸಾಕೇತ್ ರಾಜನ್ ಪ್ರಾಣ ಬಿಟ್ಟಿದ್ದ . ಶ್ರೀನಿಧಿ ಎಂಬ ಪೋಲಿಸ್ ಅಧಿಕಾರಿಯೂ ಚಕಮಕಿಯಲ್ಲಿ ಗುಂಡೇಟು ತಿಂದಿದ್ದರು . ಕೆಲ ತಿಂಗಳ ಹಿಂದಷ್ಟೇ ಒಂದಿಷ್ಟು ನಕ್ಸಲ್ ಚಳವಳಿಯ ಬಗ್ಗೆ ಸಹಾನುಭೂತಿಯಿದ್ದ ಪತ್ರಕರ್ತರು ಕಾಡಿನೊಳಗಿದ್ದ ಪ್ರೇಮ್ ನ ಸಂದರ್ಶನಗಳನ್ನು ಚಿತ್ರಸಮೇತ ಪ್ರಕಟಿಸಿದ್ದರು . ಸಾಕೇತ್ ರಾಜನ್ ಎನಕೌಂಟರ್ ನಲ್ಲಿ ಜೀವಕಳೆದುಕೊಂಡಿದ್ದು ದೊಡ್ಡ ಸುದ್ದಿಯಾಯಿತು . ಎರಡು ದಿನಗಳ ತರುವಾಯವೇನೋ ? ಸಾಕೇತ್ ನ ಶವವನ್ನು ಬೆಂಗಳೂರಿನ ಬೋರಿಂಗ್ ಆಸ್ಪತ್ರೆಗೆ ಪೋಲೀಸ್ ವ್ಯಾನ್ ನಲ್ಲಿ ತರುವಾಗ ನೆರೆದವರಲ್ಲಿ ನಾನೂ ಒಬ್ಬ . ವ್ಯಾನು ನಿಲ್ಲುತ್ತದೆ . ಅಂತಿಮ ದರ್ಶನಕ್ಕೆ ಅವಕಾಶ ಕೊಡುತ್ತಾರೆ ಎಂದೆ ಕಾದವರು ಹಲವರು . ರಭಸದಲ್ಲಿ ಬಂದ ಪೊಲೀಸ್ ವಾಹನಗಳು ಕ್ಷಣವೂ ನಿಲ್ಲದೆ ಆಸ್ಪತ್ರೆಯ ಒಳಗೆ ನುಗ್ಗಿದವು . ಧಡಕ್ಕನೆ ಗೇಟೆಳೆದು ಆವರಿಸಿದ ಪೋಲಿಸ್ ಪಡೆ ಇಲ್ಲಿ ಯಾರು ನಿಲ್ಲುವಂತಿಲ್ಲ , ಜಾಗ ಖಾಲಿ ಮಾಡಿ ಎಂಬಂತೆ ಸೂಚಿಸಿದರು . ಆಗ ಅಂತಿಮ ದರ್ಶನಕ್ಕೆಂದೇ ಆಂಧ್ರದಿಂದ ಬಂದಿದ್ದ ಗದ್ದರ್ ಸಾಹೇಬರು ' ಇನ್ನು 48 ತಾಸಿನಲ್ಲಿ ಪ್ರತಿಕಾರ ನೋಡುತ್ತೀರಿ ' ಎಂದು ದೊಡ್ಡ ಗಂಟಲಲ್ಲಿ ಘೋಷಿಸಿದರು .
ಎರಡೇ ದಿನ . ಪಾವಗಡ ತಾಲೂಕಿನ ಗಡಿಯಂಚಿನ ಗ್ರಾಮ ವೆಂಕಟಮ್ಮನಹಳ್ಳಿ . ಸರ್ಕಾರಿ ಶಾಲೆಯನ್ನೇ ಪೊಲೀಸ್ ಚೆಕ್ ಪೋಸ್ಟ್ ಮಾಡಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದವರ ಮೇಲೆ ಮಧ್ಯರಾತ್ರಿ ಅಂಧ್ರದಿಂದ ಬಂದೆರೆಗಿದ ದೊಡ್ಡ ನಕ್ಸಲ್ ದಂಡು ನೆಡಸಿದ ಗುಂಡಿನ ದಾಳಿಯಲ್ಲಿ ಆರು ಆಮಾಯಕ ಪೋಲೀಸರು , ಒಬ್ಬ ಅಡಿಗೆಯವ ಪ್ರಾಣ ಬಿಟ್ಟಿದ್ದರು . ಇದು ಗದ್ದರ್ ಸಾಹೇಬರ ಪ್ರತಿಕಾರ !
ಆಗ ಧರ್ಮಸಿಂಗ್ ಮುಖ್ಯಮಂತ್ರಿ , ಎಮ್ ಪಿ ಪ್ರಕಾಶ್ ಉಪ ಮುಖ್ಯಮಂತ್ರಿ . ವೆಂಕಟಮ್ಮನಹಳ್ಳಿಗೆ ಮೊದಲು ಹೋಗಿದ್ದು ಆಗ ಜೆಡಿಯೂ ಶಾಸಕರಾಗಿದ್ದ ಮಾಧುಸ್ವಾಮಿ !
ಸರ್ಕಾರ ಗದ್ದರ್ ಸೇರಿದಂತೆ ನೂರಾರು ಜನರ ಮೇಲೆ ಕೇಸು ಜಡಿಯಿತು . ಆಂಧ್ರದಿಂದ ಬಂದು ದಾಳಿ ಮಾಡಿದವರು ಎಷ್ಟು ಜನ ಸಿಕ್ಕರೋ ಗೊತ್ತಿಲ್ಲ . ಆದರೆ ವೆಂಕಟಮ್ಮನಹಳ್ಳಿ ಸುತ್ತಮುತ್ತಲಿನ ನೂರಾರು ಜನರ ಮೇಲೆ ಕೇಸು ಬಿತ್ತು . ಹಲವರು ಊರುಬಿಟ್ಟು ತಲೆಮರೆಸಿಕೊಂಡರು . ಎರಡು ಸಲ ನಾನು ವೆಂಕಟಮ್ಮನಹಳ್ಳಿಗೆ ಹೋಗಿದ್ದೆ . ಚಳ್ಳಕೆರೆಯ Srinivasa Suranahlly ಜೊತೆಗಿದ್ದರು . ಕೇಸು ಹಾಕಿಸಿಕೊಂಡವರಲ್ಲಿ ಹಲವರು ವಾಲ್ಮೀಕಿ , ಮಾದಿಗ ಸಮುದಾಯದವರು . 2013 ರಲ್ಲಿ ಸಿದ್ಧರಾಮಯ್ಯ ಸರ್ಕಾರ ಶರಣಾಗುವ ನಕ್ಸಲ್ಲರಿಗೆ ಕೊಟ್ಟ ಪ್ಯಾಕೇಜಿಗೆ ಈ ಬಡಪಾಯಿಗಳಾರು ಅರ್ಹರಾಗಲಿಲ್ಲ .!
ಈ ನಡುವೆ ಚಿತ್ರದುರ್ಗದ ಮುರುಘಾಶರಣರು ಯಾರದೋ ಮಾತು ಕೇಳಿ ಗದ್ದರ್ ಗೆ ಬಸವ ಶ್ರೀ ಪ್ರಶಸ್ತಿ ಕೊಟ್ಟು ವಿವಾದದಲ್ಲಿ ಸಿಲುಕಿದರು . ಗದ್ದರ್ ಬೆಂಬಲಿತ ನಕ್ಸಲ್ ಹಿಂಸಾಚಾರದಲ್ಲಿ ಆಂಧ್ರದಲ್ಲಿ ಆರೆಸ್ಸೆಸ್ , ಎಬಿವಿಪಿ ಹಲವು ಕಾರ್ಯಕರ್ತರನ್ನು ಕಳೆದುಕೊಂಡಿತ್ತು . ಹೀಗಾಗಿ ಚಿತ್ರದುರ್ಗದ ಶರಣರು ಹಲವೆಡೆ ಪ್ರತಿಭಟನೆಯ ಬಿಸಿ ಎದುರಿಸಬೇಕಾಯಿತು .
ವೆಂಕಟಮ್ಮನಹಳ್ಳಿ ಪ್ರಕರಣದಲ್ಲಿ ಗದ್ದರ್ ತುಮಕೂರು ಕೋರ್ಟಿಗೆ ಅಲೆಯಬೇಕಾಯಿತು . ತೀರಾ ಇತ್ತೀಚಿಗೆ ಗೆಳೆಯ Srinivas Patapat ಸಂಪರ್ಕಕ್ಕೆ ಬಂದ ಗದ್ದರ್ ಸಾಹೇಬರು ದೂರವಾಣಿಯಲ್ಲಿ ಮಾತನಾಡಿದರು . ಅವರ ಮೊದಲ ವಾಕ್ಯ ' ನಾನೀಗ ಹಿಂದಿನ ಹಾಗಿಲ್ಲ , ಬದಲಾಗಿದ್ದೇನೆ '
ಅವರಿಗೆ ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪರವರನ್ನು ಭೇಟಿ ಮಾಡಿ ತಮ್ಮ ಮೇಲಿದ್ದ ಕೇಸಿನ ಬಗ್ಗೆ ಹೇಳಿಕೊಳ್ಳಬೇಕಿತ್ತು . - ಅಗಲ್ಲ ಸ್ವಾಮಿ ನಮ್ಮ ವಲಯದವರ್ಯಾರು ನಿಮ್ಮನ್ನು ಒಪ್ಪಲ್ಲ - ಎಂದು ಹೇಳಿದ್ದೆ .
ಎರಡು ವರ್ಷಗಳ ಹಿಂದೆ ಸಾಮಾಜಿಕ ಸಂತ ರಾಮಾನುಜರ ಜನ್ಮ ಸಹಸ್ರಮಾನೋತ್ಸವ . ನದಿಯ ಸ್ನಾನಕ್ಕೆ ಹೋಗುವಾಗ ಬ್ರಾಹ್ಮಣರ ಹೆಗಲ ಮೇಲೆ ಕೈಹಾಕಿಕೊಂಡು ಹೋಗಿ , ಸ್ನಾನ ಮುಗಿಸಿ ಬರುವಾಗ ದಲಿತರ ಹೆಗಲನ್ನು ಆಶ್ರಯಿಸಿ ಸಾವಿರ ವರ್ಷದ ಹಿಂದೆಯೇ ಸಾಮರಸ್ಯದ ಸಂದೇಶ ಕೊಟ್ಟವರು ರಾಮಾನುಜ . ಹೀಗೇಕೆ ಎಂದು ಪ್ರಶ್ನಿಸಿದ ಸ್ವಜಾತಿಗರಿಗೆ ನಾನು ರಾಮಾನುಜ ! ರಾಮ ವನವಾಸಿ ಮಹಿಳೆ ಶಬರಿ ಕೊಟ್ಟ ಎಂಜಲು ಹಣ್ಣನ್ನು ತಿನ್ನಲಿಲ್ಲವೇ ? ನದಿಯ ಸ್ನಾನದಲ್ಲಾದದ್ದು ಬಹಿರಂಗ ಶುದ್ಧಿ , ಸ್ನಾನದ ನಂತರ ದಲಿತರ ಹೆಗಲಿನ ಆಶ್ರಯದಲ್ಲಿ ಸಿಕ್ಕಿದ್ದು ಅಂತರಂಗ ಶುದ್ಧಿ ಎಂದಿದ್ದರು ಕ್ರಾಂತಿಕಾರಿ ರಾಮಾನುಜ .
ಇದನ್ನು ತಮ್ಮ ಕೊನೆಗಾಲದಲ್ಲಿ ಗದ್ದರ್ ಸರಿಯಾಗಿಯೇ ಗುರುತಿಸಿದರು . ಹೈದ್ರಾಬಾದಿನಲ್ಲಿ ತಲೆಯೆತ್ತಿರುವ ರಾಮಾನುಜರ ಭವ್ಯ ಸ್ಮಾರಕದೆದುರು ಧ್ವನಿ ಎತ್ತಿ ಹಾಡಿದರು . ಮನಸಾರೆ ಕುಣಿದರು . ಈ ಹೊಸ ದೃಶ್ಯ ನೋಡಲು ಸಾಕೇತನ ಹೆತ್ತಮ್ಮ ಇರಬೇಕಿತ್ತು ಅಂತ ಅನ್ನಿಸಿದ್ದು ಸುಳ್ಳಲ್ಲ ....
ನಿಮ್ಮ ಗುರಿಯ ಬಗ್ಗೆ ನಮ್ಮದೇನೂ ತಕರಾರಿಲ್ಲ . ಆದರೆ ನೀವು ಆರಿಸಿಕೊಂಡ ದಾರಿ ರಕ್ತ ಹರಿಸಿತು .ಕೊನೆಗದು ನಿಮಗೂ ಅರಿವಾಯಿತು .
ನಮನಗಳು .
Post a Comment