ಹರಿದಾಸ ಕೀರ್ತನಾ ಶಿರೋಮಣಿ.. ಸಂಗೀತ ಆಚಾರ್ಯ ಮಾನ್ಯ ಶ್ರೀ ಅನಂತಾಚಾರ್ಯ ಬಾಳಾಚಾರ್ಯ ಕಟಗೇರಿ ದಾಸರು..

ಹರಿದಾಸ ಕೀರ್ತನಾ ಶಿರೋಮಣಿ.. ಸಂಗೀತ ಆಚಾರ್ಯ ಮಾನ್ಯ ಶ್ರೀ ಅನಂತಾಚಾರ್ಯ ಬಾಳಾಚಾರ್ಯ ಕಟಗೇರಿ ದಾಸರು.. 
ಸದ್ಯ ರಾಮದುರ್ಗ ನಿವಾಸಿ. ಮಂತ್ರಾಲಯದ ಗುರು ಸಾರ್ವಭೌಮ ಪೂಜ್ಯ ಶ್ರೀ ರಾಘವೇಂದ್ರ ಸ್ವಾಮಿಗಳ ಆಸ್ಥಾನ ವಿದ್ವಾನ್ ಗೌರವ ಸಂಪಾದಿಸಿದವರು..

ದಾಸ ಸಾಹಿತ್ಯ ಹಾಗೂ ಗಮಕ ಹಗಲು ರಾತ್ರಿ ಎನ್ನದೇ ಹಾಡುವಷ್ಟು ಸಾಮರ್ಥ್ಯ! ದಾಸರ ಪದ ಹಾಡುವುದು ಮಾತ್ರವಲ್ಲ ಅದರ ಅರ್ಥ, ಸಂದರ್ಭ, ಔಚಿತ್ಯ ಮತ್ತು ಪೌರಾಣಿಕ, ಪಾರಮಾರ್ಥಿಕ ಹಿನ್ನೆಲೆ, ಕತೆ-ಉಪಕತೆ ಸಹ ವಿವರಿಸಬಲ್ಲ ಆಳ ಜ್ಞಾನ.. 
ಸೈಕಲ್ ಏರಿ, ಮನೆ ಮನೆಗೆ ಹೋಗಿ ದಾಸರ ಪದ ಮಕ್ಕಳಿಗೆ ಕಲಿಸುತ್ತ, ನೀಡಿದಷ್ಟು ಪಡೆಯುತ್ತ ಬಂದ ಮಹಾನುಭಾವರು ಕಟಗೇರಿ ದಾಸರು..

೯೪ ವರ್ಷಗಳ ಜ್ಞಾನವೃದ್ಧ ಮತ್ತು ವಯೋವೃದ್ಧ ದಾಸರು ಸುಮಾರು ೧೯ ಪ್ರಕಾರಗಳ ದಾಸ ಸಾಹಿತ್ಯದ, ೪ ಸಾವಿರಕ್ಕೂ ಮಿಕ್ಕಿದ ದಾಸರ ಪದಗಳ ಭಂಡಾರ! ಅವರೇ ಹಾಡಿದ ದಾಸರ ಪದಗಳ ಎರಡು ಸಿ.ಡಿ.ಗಳು ಕೂಡ ಬಿಡುಗಡೆಯಾಗಿವೆ. 

ವಯೋ ಸಹಜ ಮರೆವು ಅವರಿಗಾಗಿದ್ದರೆ, ನಮ್ಮ ಸಮಾಜ ಮರೆವಿನಲ್ಲೇ ಅಮೃತತ್ವವಿದೆ ಎಂದು ನಂಬಿರುವಂಥದ್ದು! ಹಾಗಾಗಿ, ದಾಸರು ಆಳುವ ಸರ್ಕಾರಗಳಿಗೆ ಸಾಂಸ್ಕೃತಿಕ ರಾಯಭಾರಿ, ನಮ್ಮ ನಾಡನ್ನು ಶ್ರೀಮಂತಗೊಳಿಸಿದ ಮಹಾನುಭಾವ ಎನಿಸಿಲ್ಲ. 

ಸಾವಿರಾರು ಜನ ಸಂಗೀತಾಸಕ್ತರಿಗೆ ತಮ್ಮ ಜ್ಞಾನ ಪರಂಪರೆಯನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಧಾರೆ ಎರೆದವರು. ತೊಲಗಾಚೆ ಕೀರ್ತಿ ಶನಿ ಎಂಬಂತೆ ನಿರ್ಲಿಪ್ತ ಜೀವನ.. ತುಂಬು ಬಡತನದಲ್ಲೇ ದಾಸರು ಧಾರವಾಡದ ಮಾಳಮಡ್ಡಿಯ ಕಟಗೇರಿ ಕಂಪೌಂಡ್ ನಲ್ಲಿ ತಮ್ಮ ಧರ್ಮ ಪತ್ನಿಯೊಂದಿಗೆ ೮ ವರ್ಷ ಕಳೆದವರು. ಅದಕ್ಕೂ ಮೊದಲು ಮದಿಹಾಳದ ಮಾರುತಿ ದೇವಸ್ಥಾನದ ಪೌರೋಹಿತ್ಯದೊಂದಿಗೆ ೫೦ ವರ್ಷಗಳನ್ನು ದಾಸರ ಪದಗಳನ್ನು ಪ್ರಚುರ ಪಡಿಸಲು ದುಡಿದವರು.. ನಿಸ್ವಾರ್ಥ..

ವೃದ್ಧಾಪ್ಯದ ಪಿಂಚಣಿಯೊಂದೇ ಮಾನ್ಯರಿಗೆ ಇವತ್ತಿಗೂ ಜೀವನಾಧಾರ! 

ಇನಿತೂ ಜೀವನ ಪ್ರೀತಿ ಕುಂದಿಲ್ಲ. ಕಂಠ ಇಂದಿಗೂ ಕಂಚಿನ ಕಂಠ. ಸ್ವರಗಳ ಮೇಲಿನ ಹಿಡಿತ ಅತ್ಯಂತ ಕರಾರುವಾಕ್! ಸದಾ ನಗುಮೊಗ. ಮನೆ ತುಂಬ ಸನ್ಮಾನ, ಬಿನ್ನವತ್ತಳೆ, ಪುರಸ್ಕಾರಗಳು.. 

ಕಟಗೇರಿ ದಾಸರ ಜ್ಞಾನಪರಂಪರೆ ದಾಖಲಿಸುವ, ಸಾಹಿತ್ಯದ ಸಮಗ್ರ ಸಂಪುಟ ಸಂಪಾದಿಸುವ, ಅವರ ವ್ಯಕ್ತಿತ್ವ- ಕೃತಿತ್ವ ದಾಖಲಿಸುವ ಜವಾಬ್ದಾರಿ ಯಾರದ್ದು? 

ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮತ್ತು ಪದ್ಮ ಪ್ರಶಸ್ತಿ ಅನಾಯಾಸವಾಗಿ ಬರಬೇಕಿತ್ತು‌. ನಾವು ಸತತ ಮೂರು ಬಾರಿ ಅರ್ಜಿ ಗುಜರಾಯಿಸಿ, ನಾಮನಿರ್ದೇಶನ ಮಾಡಿ ಸೋತೆವು.. ನನಗಂತೂ ಕೇಳುವವನ ಮಾನವೇ ದಂಡ ಎನಿಸಿದೆ. ಅವರಿಗೆ ಅವುಗಳ ಅವಶ್ಯಕತೆ ಇಲ್ಲ. ಅವರನ್ನು ಗೌರವಿಸುವ ಮೂಲಕ ನಮ್ಮನ್ನು, ದಾಸ ಸಾಹಿತ್ಯವನ್ನು ಗೌರವಿಸುವ ವಿವೇಕ ನಮ್ಮ ಆಳುವ ಪ್ರಜಾಪ್ರತಿನಿಧಿಗಳು ತೋರಬೇಕು. 

ಯೋಗ್ಯತೆಗೆ, ಅರ್ಹತೆಗೆ ಮಣೆ ಹಾಕಬಹುದು ನಮ್ಮ ಕೇಂದ್ರ/ರಾಜ್ಯ ಸರ್ಕಾರಗಳು ಎಂಬ ವಿವೇಕದಿಂದ ಇಲ್ಲಿ ದಾಸರ ಬಗ್ಗೆ ದಾಖಲಿಸುತ್ತಿದ್ದೇನೆ. ಕನಿಷ್ಟ ಈ ಬಾರಿ ಪುರಸ್ಕಾರ ಧಾರವಾಡದ ಈ ಮಹಾನುಭಾವರಿಗೆ ಸಲ್ಲಬಹುದು ಎಂಬ ಅಪೇಕ್ಷೆಯಿಂದ, ಸಾವಿರಾರು ಜನ ಶಿಷ್ಯರ ಪರವಾಗಿ ಇಲ್ಲಿ ಕೋರಿಕೆ ಮಂಡಿಸಿದೆ. ಅವರು ಶತಾಯುಷಿಯಾಗಲಿ ಎಂದು ಶ್ರೀಮನ್ ನಾರಾಯಣನಲ್ಲಿ ಪ್ರಾರ್ಥನೆ. ನಮ್ಮ ಆಸೆ ಪೂರೈಸಲು.. 

ಅಧಿಕಾರಸ್ಥ ಮಹನೀಯರು ಪರಾಂಬರಿಸಲಿ.. ನಮ್ಮದು ಪ್ರಜಾಪ್ರಭುತ್ವ.. ಅಂತೆ! ಅವರು ಈ ವಯಸ್ಸಿನಲ್ಲಿ ಮತ ಬ್ಯಾಂಕ್ ಅಲ್ಲ..‌ ಕ್ಷಮೆ ಇರಲಿ. 

ಕೇಳಿ.. ದಾಸರ ಕಂಚಿನ ಕಂಠದಲ್ಲಿ ಈ ದಾಸ ಪದ..

ದಾಸರ ಸಂಪರ್ಕ: 90361 71582

🌾🌱🌿 

ಆಭಾರಿ, ಸರ್ವಶ್ರೀ Veeranna Pattar, ಜಿ.ಐ.‌ ಪಟ್ಟಣಕೋಡಿ, ಎಂ.ಎನ್. ಬಡಿಗೇರ ಹಾಗೂ ಭಾವಿಕಟ್ಟಿ ಅವರಿಗೆ. ರಾಮದುರ್ಗಕ್ಕೆ ಹೋಗಿ, ದಾಸರ ಯೋಗಕ್ಷೇಮ ವಿಚಾರಿಸಿಕೊಂಡು, ಈ ತುಣುಕುಗಳನ್ನು ನಮಗಾಗಿ ದಾಖಲಿಸಿಕೊಟ್ಟದ್ದಕ್ಕೆ.. 

🙏💐

Post a Comment

Previous Post Next Post