ನಲ್ಲೂರು ಮಠಕ್ಕೆ ಸೇರಿರುವ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯದ ಆದೇಶದಂತೆ ಸರ್ವೇ ಮಾಡಲು ತಹಸೀಲ್ದಾರ್ ಕಾಂತರಾಜು, ನಗರಸಭೆ, ಪೌರಾಯುಕ್ತ, ಬಸವರಾಜು, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಹಾಗೂ ಸರ್ವೇ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್‍ನೊಂದಿಗೆ ಸರ್ವೆ ಕಾರ್ಯ... ಜಾಮೀಯ ಮಸೀದಿ ಆಡಳಿತ ಮಂಡಳಿ ಪದಾಧಿಕಾರಿಗಳು ಸರ್ವೆಗೆ ಅಡ್ಡಿ

ನಗರದ ಹೃದಯ ಭಾಗದ ಹನುಮಂತಪ್ಪ ಸರ್ಕಲ್ ಸಮೀಪದ ಭೂಮಿ ನಲ್ಲೂರು ಮಠಕ್ಕೆ ಸೇರಿರುವ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯದ ಆದೇಶದಂತೆ ಸರ್ವೇ ಮಾಡಲು ತಹಸೀಲ್ದಾರ್ ಕಾಂತರಾಜು, ನಗರಸಭೆ, ಪೌರಾಯುಕ್ತ, ಬಸವರಾಜು, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಹಾಗೂ ಸರ್ವೇ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್‍ನೊಂದಿಗೆ ಸರ್ವೆ ಕಾರ್ಯ ಆರಂಭಿಸಿದ್ದರು.

ಈ ವೇಳೆ ಸ್ಥಳಕ್ಕೆ ಧಾವಿಸಿದ ಜಾಮೀಯ ಮಸೀದಿ ಆಡಳಿತ ಮಂಡಳಿ ಪದಾಧಿಕಾರಿಗಳು ಸರ್ವೆಗೆ ಅಡ್ಡಿಪಡಿಸಿದರಲ್ಲದೆ ನಾವು ಹೈಕೋರ್ಟ್‍ಗೆ ಹೋಗುತ್ತೇವೆ. ನಮ್ಮ ಬಳಿ ದಾಖಲೆ ಇದೆ ಎಂದು ಹೇಳಿದರು. ಹಾಗಾಗಿ ಅಧಿಕಾರಿಗಳು ಸಮೀಪದಲ್ಲೇ ಇದ್ದ ತಾಲ್ಲೂಕು ಕಚೇರಿಗೆ ಬಂದು ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದರು. ಅದರಂತೆ ಕಚೇರಿಯಲ್ಲಿ ಅರ್ಧಗಂಟೆ ಸಮಯ ಅವಕಾಶ ನೀಡಿದರೂ ಯಾವುದೇ ದಾಖಲೆ ನೀಡಲಿಲ್ಲ.

ಕಳೆದ ಮೂರು ತಿಂಗಳ ಹಿಂದೆಯೇ ನೋಟಿಸ್ ನೀಡಲಾಗಿತ್ತು. ಹಾಗಿದ್ದು ಯಾವುದೇ ದಾಖಲೆ ಸಲ್ಲಿಸಿರಲಿಲ್ಲ. ಈಗ ಸರ್ವೆಗೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ನಾವೇನು ಯಾವುದೇ ಒತ್ತುವರಿ ಅಥವಾ ಡಾಮೇಜ್ ಮಾಡಲು ಬಂದಿಲ್ಲ. ಜಾಗ ಅದ್ದುಬಸ್ತು ಮಾಡಲು ಸರ್ವೆಗೆ ಬಂದಿದ್ದೇವೆ ಎಂದು ಪೊಲೀಸ್ ಭದ್ರತೆಯಲ್ಲಿ ತಮ್ಮ ಕಾರ್ಯ ಮುಂದುವರೆಸಿದರು.

ಇದನ್ನು ವಿರೋಧಿಸಿ ಜಾಮಿಯ ಮಸೀದಿ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ನೂರಾರು ಮಂದಿ ಜಮಾಯಿಸಿ ಪ್ರತಿಭಟನೆ ನಡೆಸಿದಾಗ ಗಲಭೆ ಉಂಟಾಯಿತು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರಾದರೂ ಪಟ್ಟು ಬಿಡದೆ ಮತ್ತೆ ಬಂದು ಪ್ರತಿಭಟನೆ ನಡೆಸಿದರು. ಇತ್ತ ಸರ್ವೆ ಅಧಿಕಾರಿಗಳು ಸರ್ವೆ ಕಾರ್ಯ ಮುಂದುವರೆಸಿದ್ದಾರೆ.

Post a Comment

Previous Post Next Post