ಬೆಂಗಳೂರು, ಬೆಳಗಾವಿ, ಕಲಬುರಗಿ, ಮೈಸೂರು, ರಾಮನಗರ, ವಿಜಯನಗರ, ದಕ್ಷಿಣಕನ್ನಡ, ರಾಯಚೂರು ಮುಂತಾದೆಡೆ ನಿಷೇಧಾಜ್ಞೆ ವಿಧಿಸಲಾಗಿದೆ. ಹಿಜಾಬ್ ತೀರ್ಪು ಹಿನ್ನೆಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ನಾಳೆ ನಿಷೇಧಾಜ್ಞೆ ಜಾರಿ ಇರಲಿದ್ದು, ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಈಗಾಗಲೇ ನಿಗದಿಯಾಗಿರುವ ಪರೀಕ್ಷೆಗಳು ಎಂದಿನಂತೆ ಮುಂದುವರಿಯಲಿದ್ದು, ಆಂತರಿಕ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯಾದ್ಯಂತ ಈಗಿನಿಂದಲೇ ಜಾರಿಗೆ ಬರುವಂತೆ ಮಾ. 19ರ ಬೆಳಗಿನ 6 ಗಂಟೆಯವರೆಗೆ ನಿಷೇಧಾಜ್ಞೆ ವಿಧಿಸಿರುವ ಜಿಲ್ಲಾಡಳಿತ, ಹೈಕೋರ್ಟ್ ತೀರ್ಪು ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡದಂತೆ ಎಚ್ಚರಿಕೆ ನೀಡಿದೆ. ಅಲ್ಲದೆ ಹೈಕೋರ್ಟ್ ತೀರ್ಪು ಏನೇ ಬಂದರೂ ಸಂಭ್ರಮಾಚರಣೆ ಮಾಡುವಂತಿಲ್ಲ. ಶಾಲೆ-ಕಾಲೇಜುಗಳಲ್ಲೂ ಸಂಭ್ರಮಾಚರಣೆ ನಿಷೇಧಿಸಲಾಗಿದೆ. ಅಲ್ಲದೆ ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಯಶವಂತದ ಗುರಕರ್ ಆದೇಶ ಹೊರಡಿಸಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ ನಾಳೆ ನಿಷೇಧಾಜ್ಞೆ ಜಾರಿ ಇರಲಿದ್ದರೂ ಎಂದಿನಂತೆ ಶಾಲಾ-ಕಾಲೇಜುಗಳು ನಡೆಯಲಿವೆ. ಆದರೆ ಶಾಲಾ-ಕಾಲೇಜುಗಳ ಸುತ್ತಮುತ್ತ 200 ಮೀಟರ್ ವರೆಗೆ ನಿಷೇಧಾಜ್ಞೆ ಇರಲಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಡಾ. ಅನಿರುದ್ಧ್ ಶ್ರವಣ್ ಆದೇಶ ಹೊರಡಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯಾದ್ಯಂತ ನಾಳೆ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ತೀರ್ಪಿನ ಬಳಿಕ ಯಾವುದೇ ಸಂಭ್ರಮಾಚರಣೆ ಇಲ್ಲವೇ ಪ್ರತಿಭಟನೆ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮೈಸೂರಿನಲ್ಲಿ ನಾಳೆಯಿಂದ 6 ದಿನ ಅಂದರೆ ಮಾ. 20ರ ವರೆಗೂ ನಿಷೇಧಾಜ್ಞೆ ಇರಲಿದೆ ಮೈಸೂರು ನಗರ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ನಾಳೆಯಿಂದ ಮಾ. 18ರವರೆಗೂ ಸೆಕ್ಷನ್ 144 ಜಾರಿಯಲ್ಲಿ ಇರಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ಕುಮಾರ್ ಆದೇಶ ಹೊರಡಿಸಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ನಾಳೆ ಬೆಳಗ್ಗೆ 6ರಿಂದ ಮಾ. 19ರ ಬೆಳಗ್ಗೆ 6ರ ವರೆಗೂ ಅನ್ವಯಿಸುವಂತೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ನಾಳೆಯಿಂದ ಮಾ. 19ರವರೆಗೆ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು, ಜಿಲ್ಲೆಯ ಎಲ್ಲ ತಹಸೀಲ್ದಾರ್, ಎ.ಸಿ.ಗಳಿಗೆ ಕೇಂದ್ರ ಸ್ಥಾನದಲ್ಲಿ ಇರುವಂತೆ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ಸೂಚಿಸಿದ್ದಾರೆ. ಉಳಿದಂತೆ ಚಾಮರಾಜನಗರ, ರಾಯಚೂರು, ಉತ್ತರಕನ್ನಡ ಜಿಲ್ಲೆಗಳಲ್ಲೂ ನಾಳೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.
Post a Comment