ತ್ರಿಸ್ಸೂರ್: ಆಲೂಗೆಡ್ಡೆ ಚಿಪ್ಸ್ ತಿನ್ನುವ ಬಹುತೇಕರು ಅದರ ಪ್ಯಾಕೆಟ್ ನೋಡಿ ಚಿಪ್ಸ್‌ಗಿಂತ ಅದರಲ್ಲಿರುವ ಗಾಳಿಯೇ ಜಾಸ್ತಿ ಇದೆ ಎಂದು ಗೊಣಗಿಕೊಂಡಿರುತ್ತಾರೆ. ಆದರೂ, ಚಿಪ್ಸ್ ತಿನ್ನುವುದರಲ್ಲಿ ಯಾರೂ ಹಿಂದಿ ಬಿದ್ದಿಲ್ಲ. ಹೀಗಾಗಿಯೇ ಅನೇಕ ಬ್ರ್ಯಾಂಡ್ ಹೆಸರಿನ ಚಿಪ್ಸ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.ಅದರಲ್ಲಿ ಮುಂಚೂಣಿಯಲ್ಲಿರುವ ಬ್ರ್ಯಾಂಡ್ ಅಂದರೆ 'ಲೇಸ್'.
ಪ್ರಮುಖ ಆಲೂಗೆಡ್ಡೆ ಚಿಪ್ಸ್ ಬ್ರ್ಯಾಂಡ್ 'ಲೇಸ್' ನ ಪೋಷಕ ಕಂಪನಿ ಪೆಪ್ಸಿಕೋಗೆ ತ್ರಿಸ್ಸೂರ್ ಲೀಗಲ್ ಮೆಟ್ರೊಲಜಿ ಆಫೀಸ್ 85 ಸಾವಿರ ರೂಪಾಯಿ ದಂಡ ವಿಧಿಸಿದೆ. ಮೇಲಿನ ಸಾಲುಗಳಲ್ಲಿ ಹೇಳಿದಂತೆ ಪ್ಯಾಕೆಟ್‌ನಲ್ಲಿ ಹೆಚ್ಚಿನ ಗಾಳಿ ಇದೆ ಎಂಬ ಕಾರಣದ ಜತೆಗೆ ಮತ್ತೊಂದು ಆಘಾತಕಾರಿ ವಿಚಾರವೇನೆಂದರೆ, ಪ್ಯಾಕೆಟ್ ಮೇಲೆ ಬರೆಯಲಾದ ಆಹಾರದ ಪ್ರಮಾಣಕ್ಕೂ ಮತ್ತು ಪ್ಯಾಕೆಟ್ ಒಳಗಿರುವ ಆಹಾರ ಪ್ರಮಾಣಕ್ಕೂ ತಾಳೆ ಇಲ್ಲ.
ತ್ರಿಸ್ಸೂರ್ ಮೂಲದ ಸಾಮಾಜಿಕ ನ್ಯಾಯ ಸಂರಕ್ಷಣಾ ಕೇಂದ್ರದ ಅಧ್ಯಕ್ಷರಾದ ಪಿ.ಡಿ. ಜಯಶಂಕರ್ ಅವರು ನೀಡಿದ ದೂರಿನ ಆಧಾರದ ಮೇಲೆ ಪೆಪ್ಸಿಕೋ ಕಂಪನಿಗೆ ತ್ರಿಸ್ಸೂರ್ ಲೀಗಲ್ ಮೆಟ್ರೊಲಜಿ ಆಫೀಸ್ ದಂಡ ವಿಧಿಸಿದೆ.
ಜಯಶಂಕರ್ ಅವರು ತೆಗೆದುಕೊಂಡಿದ್ದ ಲೇಸ್ ಪ್ಯಾಕೆಟ್‌ನಲ್ಲಿ ಅವರು ಬರೆದಿದ್ದ ಆಹಾರದ ಪ್ರಮಾಣಕ್ಕಿಂತ ಪ್ಯಾಕೆಟ್ ಒಳಗಿದ್ದ ಚಿಪ್ಸ್ ಪ್ರಮಾಣ ತುಂಬಾ ಕಡಿಮೆ ಇತ್ತು. ಜಯಶಂಕರ್ ತೆಗೆದುಕೊಂಡಿದ್ದ ಪ್ಯಾಕೆಟ್ ಮೇಲೆ 115 ಗ್ರಾಂ ಎಂದು ಬರೆಯಲಾಗಿತ್ತು. ಆದರೆ, ಅದರ ಒಳಗಿದ್ದ ಚಿಪ್ಸ್ ಪ್ರಮಾಣ ಅರ್ಧಕರ್ಧ ವ್ಯತ್ಯಾಸವಿತ್ತು ಎಂದು ಜಯಶಂಕರ್ ಹೇಳಿದ್ದಾರೆ.
ದೂರು ನೀಡಿದ ಬಳಿಕ ತನಿಖೆಯ ವೇಳೆ ಮೂರು ಲೇಸ್ ಪ್ಯಾಕೆಟ್ಗಳನ್ನು ಪರಿಶೀಲಿಸಿದಾಗ ಆಘಾತಕಾರಿ ಅಂಕಿ-ಅಂಶದ ಜತೆಗೆ ಗ್ರಾಹಕರಿಗೆ ಯಾವ ರೀತಿಯಲ್ಲಿ ವಂಚನೆ ಮಾಡುತ್ತಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. 115 ಗ್ರಾಂ ಎಂದು ಬರೆದಿದ್ದ ಮೂರು ಚಿಪ್ಸ್ ಪ್ಯಾಕೆಟ್‌ನಲ್ಲಿ ಒಂದರಲ್ಲಿ 50.930 ಗ್ರಾಂ, ಮತ್ತೊಂದರಲ್ಲಿ 72.730 ಗ್ರಾಂ ಮತ್ತು ಇನ್ನೊಂದು ಪ್ಯಾಕೆಟ್‌ನಲ್ಲಿ 86.380 ಗ್ರಾಂ ಲೇಸ್ ಇರುವುದು ಕಂಡುಬಂದಿತು.
ಇದರ ಬೆನ್ನಲ್ಲೇ ತ್ರಿಸ್ಸೂರ್ನ ಕಂಜನಿ ಏರಿಯಾದ ಸೂಪರ್ ಮಾರ್ಕೆಟ್ನಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ವೇಳೆಯು ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ತ್ರಿಸ್ಸೂರ್ ಲೀಗಲ್ ಮೆಟ್ರೊಲಜಿ ಆಫೀಸ್ ಕ್ರಮ ಕೈಗೊಂಡಿದೆ.
ಇನ್ನು ಲೇಸ್ ಪ್ಯಾಕೆಟ್‌ನಲ್ಲಿ ಚಿಪ್ಸ್‌ಗಿಂತ ಹೆಚ್ಚು ಗಾಳಿ ಇದೆ ಎಂಬ ಆರೋಪ ಪ್ರಪಂಚದಾದ್ಯಂತ ಕೇಳಿಬರುತ್ತಲೇ ಇದೆ. ಆದರೆ, ಅದರ ತೂಕವನ್ನು ಪರೀಕ್ಷಿಸಲು ಅಥವಾ ಅದರ ಪ್ರಮಾಣದ ಬಗ್ಗೆ ದೂರು ನೀಡಲು ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಇದನ್ನೇ ಕಂಪನಿ ಬಂಡವಾಳ ಮಾಡಿಕೊಳ್ಳುತ್ತಿದೆ. ಸರಿಯಾದ ತಪಾಸಣೆಯ ಕೊರತೆಯಿಂದಾಗಿ ಇದು ಭಾರತದಲ್ಲಿ ವ್ಯಾಪಕವಾಗಿ ಸಂಭವಿಸುತ್ತದೆ. ಭಾರತದಲ್ಲಿ ತಯಾರಾಗುವ ಲೇಸ್‌ನಂತಹ ಇತರ ಹಲವು ಪ್ರಮುಖ ಬ್ರಾಂಡ್‌ಗಳ ಉತ್ಪನ್ನಗಳು ಕಡಿಮೆ ಗುಣಮಟ್ಟದ್ದಾಗಿವೆ ಎಂದು ಹಲವರು ಆರೋಪಿಸಿದ್ದಾರೆ.
Post a Comment