ಪಯ್ಯನ್ನೂರು ಆರ್ ಎಸ್ಎಸ್ ಕಚೇರಿಗೆ ಬಾಂಬ್ ದಾಳಿ ಘಟನೆ: ಸಮಗ್ರ ಪೊಲೀಸ್ ತನಿಖೆ ಆರಂಭ , BJP ಖಂಡನೆ,

ಪಯ್ಯನ್ನೂರು ಆರ್ ಎಸ್ಎಸ್ ಕಚೇರಿಗೆ ಬಾಂಬ್ ದಾಳಿ ಘಟನೆ: ಸಮಗ್ರ ಪೊಲೀಸ್ ತನಿಖೆ ಆರಂಭ 

ಕಾಸರಗೋಡು: ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಾಲಯಕ್ಕೆ ಮಂಗಳವಾರ ಮುಂಜಾನೆ 1.30ರ ಸುಮಾರಿಗೆ ದುಷ್ಕರ್ಮಿಗಳು ಬಾಂಬ್ ದಾಳಿ ನಡೆಸಿದ್ದು , ಈ ಬಗ್ಗೆ ಸಮಗ್ರ ಪೊಲೀಸ್ ತನಿಖೆ ಆರಂಭಗೊಂಡಿದೆ. ಪ್ರಾಥಮಿಕ ತನಿಖೆಯಂತೆ ಪರಿಸರದ ಸಿಸಿ ಟಿವಿ ದೃಶ್ಯಾವಳಿಗಳನ್ನು ಪೊಲೀಸರು ವೀಕ್ಷಿಸಿ ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಅಲ್ಲದೆ ಘಟನೆಗೆ ಸಂಬಂಧಿಸಿ ಕೆಲವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. 
ಆರ್ ಎಸ್ಎಸ್ ಕಚೇರಿಗೆ ಬಾಂಬ್ ದಾಳಿ ನಡೆಸಿದ ದುಷ್ಕೃತ್ಯವನ್ನು ಬಿಜೆಪಿ ಕಣ್ಣೂರು ಜಿಲ್ಲಾ ಘಟಕವು ಪ್ರಬಲವಾಗಿ ಖಂಡಿಸಿದೆ. ಅಲ್ಲದೆ ಅಂತಹ ಸಮಾಜಬಾಹಿರ ಕೃತ್ಯಗಳನ್ನು ಸಂಪೂರ್ಣವಾಗಿ ಮಟ್ಟಹಾಕುವಲ್ಲಿ ಗೃಹ ಹಾಗೂ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಕೇರಳ ರಾಜ್ಯ ಕಾರ್ಯದರ್ಶಿ, ವಕೀಲ ಕೆ.ಶ್ರೀಕಾಂತ್ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಜನಸಾಮಾನ್ಯರಿಗೆ ಭಯವಿಲ್ಲದೆ ಜೀವಿಸುವಂತಾಗಲು ಪಿಣರಾಯಿ ವಿಜಯನ್ ಸರಕಾರವು ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.12-07-2022
ಪ್ರಕಟಣೆಯ ಕೃಪೆಗಾಗಿ
ಕೇರಳದಲ್ಲಿ ಆರೆಸ್ಸೆಸ್ ಕಚೇರಿ ಮೇಲೆ ಬಾಂಬ್ ದಾಳಿ: 
ನಳಿನ್ ಕುಮಾರ್ ಕಟೀಲ್ ತೀವ್ರ ಖಂಡನೆ
ಬೆಂಗಳೂರು: ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನಲ್ಲಿರುವ ಆರ್‍ಎಸ್‍ಎಸ್ ಕಚೇರಿ ಮೇಲೆ ಬಾಂಬ್ ದಾಳಿ ನಡೆದಿರುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತೀವ್ರವಾಗಿ ಖಂಡಿಸಿದ್ದಾರೆ. ಇದೊಂದು ಆಘಾತಕಾರಿ ವಿಷಯ ಎಂದು ಅವರು ತಿಳಿಸಿದ್ದಾರೆ.
ಈ ದಾಳಿಯಲ್ಲಿ ಕಟ್ಟಡದ ಕಿಟಕಿ ಗಾಜುಗಳು ಮುರಿದು ಬಿದ್ದಿವೆ. ಇಂದು ಮುಂಜಾನೆ ಬಾಂಬ್ ದಾಳಿ ನಡೆದಿದೆ ಎಂದು ತಿಳಿಸಿರುವ ಅವರು, ಬಾಂಬ್ ದಾಳಿ ನಡೆಸಿದವರು ಯಾರು? ಯಾವ ಕಾರಣಕ್ಕಾಗಿ ಈ ಕೃತ್ಯ ಎಸಗಲಾಗಿದೆ? ಎಂಬುದನ್ನು ಕೂಡಲೇ ಪತ್ತೆ ಮಾಡಬೇಕು. ದುಷ್ಕರ್ಮಿಗಳನ್ನು ಬಂಧಿಸುವುದಲ್ಲದೆ ಇದರ ಹಿಂದಿರುವ ವಿಧ್ವಂಸಕ ಶಕ್ತಿಗಳನ್ನು ಶೀಘ್ರವೇ ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದ್ದಾರೆ.
ಇಂತಹ ದಾಳಿಗಳನ್ನು ತಡೆಯಲು ಕೇರಳ ಸರಕಾರ ಮುಂದಾಗಬೇಕು. ವಿಧ್ವಂಸಕ ಮತ್ತು ದೇಶದ್ರೋಹಿ ಶಕ್ತಿಗಳು ಹೆಚ್ಚು ಸಕ್ರಿಯವಾಗಿರುವ ಕಡೆ ಬಿಜೆಪಿ ಮತ್ತು ಆರೆಸ್ಸೆಸ್ ಕಚೇರಿಗಳಿಗೆ ರಕ್ಷಣೆ ಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.


                                                                   
 ಕರುಣಾಕರ ಖಾಸಲೆ
ಮಾಧ್ಯಮ ಸಂಚಾಲಕರು
 ಬಿಜೆಪಿ ಕರ್ನಾಟಕ

Post a Comment

Previous Post Next Post