ಜು 19 ರಂದು ದಸರಾ ಹೈಪವರ್ ಕಮಿಟಿ ಸಭೆ; ಸಚಿವ ಎಸ್.ಟಿ.ಸೋಮಶೇಖರ್

ಜು 19 ರಂದು ದಸರಾ ಹೈಪವರ್ ಕಮಿಟಿ ಸಭೆ; ಸಚಿವ ಎಸ್.ಟಿ.ಸೋಮಶೇಖರ್
ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಆಚರಣೆ ಕುರಿತು ರೂಪುರೇಷೆ ಕುರಿತು ನಿರ್ಧರಿಸಲು ಜುಲೈ 19ರಂದು ದಸರಾ ಹೈಪರ್ ಕಮಿಟಿ ಮೀಟಿಂಗ್ ಕರೆಯಲಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು. 
ಜುಲೈ 19ರಂದು ಸಂಜೆ 4 ಗಂಟೆಗೆ ಸಿಎಂ ನೇತೃತ್ವದಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ಸಭೆ ಆಯೋಜನೆ ಮಾಡಲಾಗಿದ್ದು, ಮೈಸೂರು ಭಾಗದ ಎಲ್ಲಾ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಈ ಬಾರಿ ಯಾವ ರೀತಿಯಾಗಿ ದಸರಾ ಮಹೋತ್ಸವ ಆಚರಿಸಬೇಕು ಎಂಬುದರ ರೂಪುರೇಷೆ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದರು.
---------------------------------------
ಜು.25ರಿಂದ ಕಬಿನಿ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಬಿಡಲು ತೀರ್ಮಾನ 
ಮೈಸೂರು: ಕೇರಳದ ವಯನಾಡು,ಕೊಡಗು ಹಾಗೂ ಪಶ್ಚಿಮಘಟ್ಟ ಅರಣ್ಯ ಪ್ರದೇಶಗಳಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕಬಿನಿ ಜಲಾಶಯ ಭರ್ತಿಯಾಗಿರುವ ಕಾರಣ, ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಗೆ ಬರುವ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲೆಂದು ಕಬಿನಿ ನದಿಯಿಂದ ಅವಳಿ ಜಿಲ್ಲೆಗಳ 129 ಕೆರೆಗಳಿಗೆ ಜು.15ರಿಂದ 10ದಿನಗಳ ಕಾಲ ಪ್ರತಿನಿತ್ಯ ಒಂದು ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ಮಂಗಳವಾರ ನಗರದಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. 
ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಬಿನಿ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಿಗೆ ಮುಂಗಾರು ಹಂಗಾಮಿಗೆ ನೀರು ಒದಗಿಸುವ ಕುರಿತ ಸುದೀರ್ಘವಾಗಿ ಸಮಾಲೋಚನೆ ನಡೆಸಿದ ಬಳಿಕ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಕಬಿನಿ ಜಲಾಶಯದಲ್ಲಿ ಒಟ್ಟಾರೆ ಸಂಗ್ರಹಣೆಯು 18.55 ಟಿಎಂಸಿ ಇದ್ದು, ಉಪಯುಕ್ತ ಸಂಗ್ರಹಣೆಗೆ 8.74 ಟಿಎಂಸಿ ನೀರು ಇರುತ್ತದೆ. ಪ್ರಸಕ್ತ ಸಾಲಿನ ಡಿಸೆಂಬರ್ ಅಂತ್ಯದವರೆಗೆ ಕನಿಷ್ಠ ಒಳಹರಿವನ್ನು ಆಧರಿಸಿ 22 ಟಿಎಂಸಿ ನೀರು ಜಲಾಶಯಕ್ಕೆ ಹರಿದುಬರಬಹುದೆಂದು ಅಂದಾಜಿಸಿ ನೀರು ಹರಿಸಲು ತೀರ್ಮಾನಿಸಲಾಗಿದೆ. ಜು.15ರಿಂದ 25ರವರೆಗೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ 129 ಕೆರೆಗಳಿಗೆ ಪ್ರತಿನಿತ್ಯ ಒಂದು ಸಾವಿರ ಕ್ಯೂಸೆಕ್ಸ್ ನೀರು ಹರಿಸಲಾಗುವುದು. ಜು.25ರಿಂದ ಹತ್ತು ದಿನಗಳ ಕಾಲ ಕಬಿನಿ ಎಡ ಮತ್ತು ಬಲದಂಡೆ ನಾಲೆಗಳಿಗೆ ನೀರು ಹರಿಸಲಾಗುವುದು. ಹತ್ತು ದಿನಗಳ ಬಿಡುವು ಬಿಟ್ಟು ಮತ್ತೆ ನೀರು ಹರಿಸಲಾಗುವುದು ಎಂದು ಹೇಳಿದರು. ತಿಂಗಳಿAದ ಸುರಿಯುತ್ತಿರುವ ಮಳೆಯಿಂದಾಗಿ ಶೇ.30ರಷ್ಟು ಕೆರೆಗಳು ತುಂಬಿದ್ದು, ನಿತ್ಯ ಒಂದು ಸಾವಿರ ಕ್ಯೂಸೆಕ್ಸ್ ನೀರು ಹರಿಸಿದರೆ ತುಂಬಲಿದೆ. ಅದೇ ರೀತಿ ಕಳೆದ ಬಾರಿ ಕೊಳ್ಳೇಗಾಲ ತಾಲ್ಲೂಕಿನ ಕೊನೆಯ ಭಾಗಗಳಿಗೆ ನೀರು ತಲುಪಿರುವುದಿಂದ ಈ ಬಾರಿ ಯಾವುದೇ ಸಮಸ್ಯೆಯಾಗಲ್ಲ. ಮೈಸೂರು ಜಿಲ್ಲೆಯ 53,374 ಎಕರೆ, ಚಾಮರಾಜನಗರ ಜಿಲ್ಲೆಯ 53,898 ಎಕರೆ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. 
ಕಬಿನಿ ಜಲಾಶಯದಲ್ಲಿ 1,08,060, ಹುಲ್ಲಹಳ್ಳಿ ಅಣೆಕಟ್ಟು ನಾಲೆ ಭಾಗದಲ್ಲಿ 14,309 ಎಕರೆ ಪ್ರದೇಶ ಸೇರಿದಂತೆ 1,22,369 ಎಕರೆ ಪ್ರದೇಶವಿದೆ. ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ 120ಕ್ಕೂ ಹೆಚ್ಚು ಕೆರೆಗಳಿವೆ. ಕೊನೆಭಾಗದ ಕೆರೆಗಳು ಭರ್ತಿಯಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.



ಕೃಷಿ ಇಲಾಖೆಯಿಂದ ರೈತರಿಗೆ ಬೇಕಾಗುವಷ್ಟು ಬಿತ್ತನೆ,ರಸಗೊಬ್ಬರ ಮೊದಲಾದ ಪರಿಕರಗಳನ್ನು ವಿತರಿಸಲಾಗಿದೆ. ಸಕಾಲದಲ್ಲಿ ನೀರು ಹರಿಸುವ ಕೆಲಸ ಮಾಡಿದರೆ ಉತ್ತಮ ಫಸಲು ಬರಲಿದೆ ಎಂದರು. ಪ್ರವಾಹ ಉಂಟಾಗಿ ಎಚ್.ಡಿ.ಕೋಟೆ ತಾಲ್ಲೂಕಿನ ಬಿದರಹಳ್ಳಿ ಸೇತುವೆ ಮುಳುಗಡೆಯಾಗುವ ಜತೆಗೆ 42 ಮನೆಗಳು ಹಾನಿಯಾಗುತ್ತಿದ್ದರಿಂದ ಈ ಬಾರಿ 25 ಕೋಟಿ ರೂ.ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಕಾವೇರಿ ನೀರಾವರಿ ನಿಗಮ ನಿಯಮಿತದಿಂದ 1 ಎಕರೆ ಜಮೀನು ಮಂಜೂರು ಮಾಡಲಾಗಿದ್ದು,ರಾಜೀವ್‌ಗಾಂಧಿ ವಸತಿ ನಿಗಮದಿಂದ ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು. ನಂಜನಗೂಡು,ತಿ.ನರಸೀಪುರ ತಾಲ್ಲೂಕುಗಳಿಗಿಂತ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಹೆಚ್ಚು ಹಾನಿಯಾಗಿರುವಕಾರಣ ನಾನು ಮತ್ತು ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದೇವೆ. ತಿ.ನರಸೀಪುರ ತಾಲ್ಲೂಕಿನಲ್ಲಿ ಮುಳುಗಡೆಯಾಗದಂತೆ ಮುಂಜಾಗ್ರತಾ ಕ್ರಮಕೈಗೊಂಡಿದ್ದಾರೆ ಎಂದರು.
ಸಭೆಯಲ್ಲಿ ಶಾಸಕರಾದ ಬಿ.ಹರ್ಷವರ್ಧನ,ಅಶ್ವಿನ್‌ಕುಮಾರ್, ಜಿಲ್ಲಾಧಿಕಾರಿಗಳಾದ ಡಾ.ಬಗಾದಿ ಗೌತಮ್, ಚಾರುಲತಾ ಸೋಮ್,ಜಿಪಂ ಸಿಇಒಗಳಾದ ಬಿ.ಆರ್.ಪೂರ್ಣಿಮಾ, ಕೆ.ಎಂ.ಗಾಯತ್ರಿ, ಕಾವೇರಿ ನೀರಾವರಿ ನಿಗಮ ನಿಯಮಿತದ ಅಧೀಕ್ಷಕ ಅಭಿಯಂತರ ಶಿವಮಾದಯ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಆರ್.ದಂಡಿನ ಇನ್ನಿತರರು ಉಪಸ್ಥಿತರಿದ್ದರು.

Post a Comment

Previous Post Next Post