ಸ್ವರ್ಣಗೌರೀ ವ್ರತದ ಸಂಪೂರ್ಣ ಮಾಹಿತಿ
ಶ್ರೀ ಸ್ವರ್ಣ ಗೌರಿ ವ್ರತ ಹೆಸರೇ ಸೂಚಿಸುವಂತೆ ಸ್ವರ್ಣ ಅಂದರೆ ಬಂಗಾರ ; ಅಂದರೆ ಬಂಗಾರ ಬಣ್ಣದಂತೆ ಹೊಳೆಯುವ ಗೌರಿ ಎಂದು ಅರ್ಥ. ಅಂತಹ ಜಗನ್ಮಾತೆಯಾದ ಗೌರಿಯನ್ನು ಭಾದ್ರಪದ ಮಾಸ ಕೃಷ್ಣ ಪಕ್ಷ ತೃತೀಯ ತಿಥಿಯಂದು ಷೋಡಶೋಪಚಾರದಿಂದ ಪೂಜಿಸಬೇಕು .ಈ ಹಬ್ಬವನ್ನು ಹೆಣ್ಣುಮಕ್ಕಳು ಮುತ್ತೈದೆಯರು ಪ್ರಾಚೀನ ಕಾಲದಿಂದಲೂ ಆಚರಿಸುತ್ತಾ ಬಂದಿದ್ದಾರೆ .
ಈ ಹಬ್ಬದ ಆಚರಣೆಯ ರೀತಿ ಹೀಗಿದೆ ಹೆಣ್ಣುಮಕ್ಕಳು ಮತ್ತು ಮುತ್ತೈದೆಯರು ಪಾಡ್ಯ ತಿಥಿಯಂದು ಅಭ್ಯಂಜನ ಮಾಡಿ , ಮೊರದ ಬಾಗಿನಕ್ಕೆ ಅಣಿಯಾದ ಮೊರವನ್ನು ಶುಭ್ರಗೊಳಿಸಿ
ಅದಕ್ಕೆ ಅರಿಶಿನ,ಕುಂಕುಮ ಹಚ್ಚಿ ಚೆನ್ನಾಗಿ ಆರಿಸಿ ನಂತರ ಧಾನ್ಯಗಳು ,ತೆಂಗಿನಕಾಯಿ,ಬಳೆಬಿಚ್ಚೋಲೆ,ಕನ್ನಡಿ ,ಬಳೆಗಳು ,೫ ಬಗೆಯ ಹಣ್ಣುಗಳು ,ರವಿಕೆ ಕಣ ,ತಾಯಿಗೆ ಹಾಗೆ ಅತ್ತಿಗೆ ,ನಾದಿನಿಯರಿಗೆ ಸೀರೆಯನ್ನು ಹಾಕಿ,
ಸುಮಂಗಲಿಯರು ಉಪಯೋಗಿಸುವ ವಸ್ತುಗಳು ,ಭಕ್ಷ್ಯಗಳು (ಯಥಾ ಶಕ್ತಿ ಏನಾದರು ಕೊಡಬಹುದು ) ಹಾಕಿ ಮೊರದ ಬಾಗಿನ ಸಿದ್ಧ ಪಡಿಸಬೇಕು .ನಂತರ ಮನೆಯನ್ನು ಶುಚಿಗೊಳಿಸಿ ರಂಗವಲ್ಲಿ ಹಾಕಿ ,ದೇವಿಯನ್ನು ಸ್ಥಾಪನೆ ಮಾಡುವ ಸ್ಥಳವನ್ನು ಶುಭ್ರವಾಗಿ ಅಲಂಕರಿಸಿ ,
ಗೌರಿ ಮೂರ್ತಿಯನ್ನು ಶೃಂಗರಿಸಿ ,ತೋರಣದಿಂದ ಮಂಟಪವನ್ನು ಹಾಗೆ ಮನೆಯ ಮುಂಬಾಗಿಲನ್ನು ಅಲಂಕರಿಸಬೇಕು .
ಪತ್ರೆಗಳನ್ನು ,ಹೂವುಗಳನ್ನು ,ಹೂವಿನ ಮಾಲೆಗಳನ್ನು ಕಟ್ಟಿ , ೫ ತೆಂಗಿನಕಾಯಿ ಪೂಜೆಗಾಗಿ ಅರಿಶಿನ ಕುಂಕುಮ, ಚಂದ್ರ,ಚಂದನ,ಅಡಿಕೆ,ದಶಾಂಗಂ ,೫ ಬಗೆಯ ಹಣ್ಣುಗಳನ್ನು, ದೀಪದ ಕಂಬಕ್ಕೆ ದೀಪದ ಬತ್ತಿಗಳನ್ನು ತುಪ್ಪದಲ್ಲಿ ನೆನಸಿ,ಗೆಜ್ಜೆವಸ್ತ್ರಗಳು ,೧೬ ಎಳೆಯ ಗೆಜ್ಜೆವಸ್ತ್ರ ಹಾಗೆ ೧೬ ಎಳೆ ದೋರ ಗ್ರಂಥಿಗಳನ್ನು ತಯಾರಿಸಬೇಕು
ಅದಕ್ಕೆ ೧೬ ಗಂಟನ್ನು ಹಾಕಿ ದೋರವನ್ನು ಸಿದ್ಧ ಪಡಿಸಬೇಕು . ಪಂಚಾಮೃತ ಅಭಿಷೇಕ ,ಮಧುಪರ್ಕ ,ಮಂಗಳಾರತಿ ಬತ್ತಿಗಳು . ಒಂದು ತಟ್ಟೆಯಲ್ಲಿ ಉಪಾಯನ ದಾನಕ್ಕಾಗಿ ೨ ತೆಂಗಿನಕಾಯಿಗಳು ನಾಲ್ಕು ವಿಳ್ಳೆ ದೆಲೆ ,ಅಡಿಕೆಗಳು ,ದಕ್ಷಿಣೆ, ಸ್ವಲ್ಪ ಅಕ್ಕಿ ಅದನ್ನು ಮುಚ್ಚಲು ಒಂದು ತಟ್ಟೆ ಅಥವಾ ಬಾಳೆಯೆಲೆ ಉಪಯೋಗಿಸಬೇಕು .
ಕಲಶದ ವಿಧಾನ :
ಇನ್ನು ಕೆಲವರು ಮರಳಗೌರಿಯನ್ನು ,ಕೆಲವರು ಅರಿಶಿನ ಗೌರಿಯನ್ನು ಇಡುವ ಪದ್ಧತಿ ವಾಡಿಕೆಯಲ್ಲಿ ಇರುತ್ತೆ . ಅವರವರ ಸಂಪ್ರದಾಯದಂತೆ ಜಗನ್ಮಾತೆಯನ್ನು ಸ್ಥಾಪಿಸಿ ಪೂಜೆ ಮಾಡಬೇಕು . ಹಾಗೆಯೇ ಕಲಶದಲ್ಲಿ ಗಂಗೆಯನ್ನು ಅದಕ್ಕೆ ೫ ವಿಳ್ಳೆದೆಲೆಯನ್ನು ಇಟ್ಟು ಹಾಗೆ ಯಾವುದಾದರು ಹಣ್ಣನ್ನು ಕಳಸದಲಿ ಇಡಬೇಕು
ಕಲಶದ ಸುತ್ತ ಬಿಳಿ ಸುಣ್ಣ ಹಚ್ಚಿ
ಅದಕ್ಕೆ ೪ ಕಡೆ ಅರಿಶಿನ ಕುಂಕುಮ ಹಚ್ಚಬೇಕು . ಒಂದು ತಟ್ಟೆಯಲ್ಲಿ ಹಳದಿ ( ಅರಿಶಿನ ಹಾಕಿ ವಸ್ತ್ರವನ್ನು ಸಿದ್ಧಪಡಿಸಬಹುದು ) ವಸ್ತ್ರವನ್ನು ಹಾಸಿ , ಎರೆಡು ವಿಳ್ಳೆದೆಲೆಯ ಜೊತೆ ಎರೆಡು ಬಟ್ಳಡಿಕೆ ಇಟ್ಟು ಗೌರಿಯ ಮೂರ್ತಿ,ಅರಿಶಿನಗೌರಿ ಅಥವಾ ಮರಳ ಗೌರಿಯನ್ನು ಅದರ ಮೇಲೆ ಇಡಬೇಕು ಜೊತೆಯಲ್ಲಿ ಸಿದ್ಧಪಡಿಸಿದ ಕಲಶವನ್ನು ಸ್ಥಾಪನೆ ಮಾಡಬೇಕು .
ಇನ್ನು ಉಪ್ಪಕ್ಕಿ ಇಡುವ ಸಂಪ್ರದಾಯವಿದ್ದರೆ ತೊಗರಿಬೇಳೆ ಮತ್ತೆ ಅಕ್ಕಿಯನ್ನು ಬಳಸಿ ೩ ಬಾರಿ ಈ ಕೆಳಕಂಡ ಮಂತ್ರದಿಂದ ಉಪ್ಪಕ್ಕಿ ಇಡಬೇಕು - " ಅತ್ತೆ ಆಜ್ಞೆ ಇರಲಿ ,ಮಾವನ ಆಜ್ಞೆ ಇರಲಿ ,ಗಂಡನ ಆಜ್ಞೆ ಇರಲಿ ಸ್ವರ್ಗಕ್ಕೆ ಹೋದರು ಸವತಿ ಕಾಟ ಬೇಡ ( ಇಲ್ಲದಿರಲಿ )".
ಮೊರದ ಬಾಗಿನ ಕೊಡುವಾಗ ಈ ಕೆಳಕಂಡ ಮಂತ್ರವನ್ನು ಶ್ರದ್ಧಾಪೂರ್ವಕವಾಗಿ ಹೇಳಿ ಬಾಗಿನ ಕೊಟ್ಟರೆ ಬ್ರಹ್ಮಾಂಡ ದಾನ ಮಾಡಿದ ಪುಣ್ಯ ಲಭಿಸುವುದೆಂದು ಹೇಳಿಕೆಯಿದೆ .
"ರಾಮಪತ್ನಿ ಮಹಾಭಾಗಿ ಪುಣ್ಯಮೂರ್ತಿ ನಿರಾಮುಖಿ ಮಯಾದತ್ತಾಣಿ ಸೂರ್ಪಾಣಿ ಗೃಹಾಣೇಮಾನಿ ಜಾನಕಿ '.
ದೇವರನ್ನು ವಿಸರ್ಜನೆ ಮಾಡುವ ಮುಂಚೆ ದೇವರನ್ನು ಕದಲಿಸಿ ಸೋಬಲಕ್ಕಿ ಇಡಬೇಕು . ಅದಕ್ಕೆ ಬೇಕಾಗುವ ಸಾಮಾಗ್ರಿಗಳು : ತೆಂಗಿನಕಾಯಿ,(ತೆಂಗಿನಕಾಯಿ ಇಲ್ಲದಿದ್ದಲ್ಲಿ ಒಣಕೊಬ್ಬರಿ ಬಟ್ಟಲನ್ನು ಉಪಯೋಗಿಸಿ )ಬೆಲ್ಲದಚ್ಚು ,ಬಳೆ ಬಿಚ್ಚೋಲೆ , ವಿಳ್ಳೆ ದೆಲೆಗಳು ,ಅಡಿಕೆಗಳು,ದಕ್ಷಿಣೆ,ಸೀರೆ ,ಎರೆಡು ರವಿಕೆ ಕಣಗಳು ,ಹಣ್ಣುಗಳಾದ ದಾಳಿಂಬೆ ,ಛೇಪೆ ಹಣ್ಣು ,ಸೀತಾ ಫಲ ,ಸಪೋಟ ,ಮೂಸಂಬಿ ,ಕಿತ್ತಳೆ ಫಲ .
ನಂತರ ಮಂಗಳಾರತಿ ಮಾಡಿ ದೇವಿಯ ಜೊತೆ ಗಣೇಶನನ್ನು ವಿಸರ್ಜನೆ ಮಾಡಬೇಕು . ಮೊಸರನ್ನವನ್ನು ಮೂರ್ತಿಯ ಜೊತೆ ವಿಸರ್ಜಿಸಿ ಸ್ವಲ್ಪ ಪ್ರಸಾದವಾಗಿ ಮನೆಯವರೆಲ್ಲಾ ಸೇವಿಸಬೇಕು .
ಶ್ರೀ ಸ್ವರ್ಣಗೌರಿ ವ್ರತ ಮತ್ತು ಕಥಾ ಶ್ರವಣ -
*********
ಮುತೈದೆ ದೇವತೆಯರು ೧೬ ಜನರು
ಇವರನ್ನು ಷೋಡಶಲಕ್ಷ್ಮೀಯರು ಎಂದು ಕರೆಯುತ್ತಾರೆ..
ಗೌರಿ, ಪದ್ಮ, ಶುಚಿ, ಮೇಧಾ, ಸಾವಿತ್ರಿ, ವಿಜಯಾ, ಜಯಾ, ದೇವಸೇನಾ, ಸಾಹಾ, ಮಾತರಲೋಕಾ, ಮಾತಾರಾ, ಶಾಂತೀ, ಪೃಥ್ವಿ, ಧೃತೀ, ತುಷ್ಟೀ, ಸ್ವಧಾದೇವಿ..
ಸೀರೆ ಸೆರಗಿನಲ್ಲಿಮಹಾಲಕ್ಷ್ಮೀಯು ಸೌಭಾಗ್ಯ ರೂಪದಲ್ಲಿರುವುದರಿಂದ ಸೆರಗು ಹಿಡಿದು ಮರದ ಬಾಗಿಣ ಕೊಡುತ್ತಾರೆ.
ಮರದ ಬಾಗಿಣಕ್ಕೆ ಸಂಸ್ಕೃತದಲ್ಲಿ ವೇಣುಪಾತ್ರ ಎಂದು ಹೇಳುತ್ತಾರೆ..
ಮರದಬಾಗಿಣದಲ್ಲಿ ನಾರಾಯಣನ ಅಂಶ ಇರುತ್ತದೆ..
ಮರವೆಂಬ ನಾರಾಯಣ ಮತ್ತು ಒಳಗಿರುವ ಲಕ್ಷ್ಮಿಯರು ತರಹ ಜೊತೆಯಲ್ಲಿ,
ದಂಪತಿಗಳು ಲಕ್ಷ್ಮೀ-ನಾರಾಯಣರ ತರಹ ಇರಲಿ ಅನ್ನೋ ಕಾರಣಕ್ಕೆ ಮತ್ತು ಸುಮಂಗಲಿ ತನ ಯಾವಾಗಲೂ ಇರಲಿ ಅನ್ನೋ ಕಾರಣಕ್ಕೆ ೧೬ ಸುಮಂಗಲೀ ದೇವತೆಗಳ ಸಾಕ್ಷಿಯಾಗಿ, ಬಾಗಿಣ ಕೊಡುತ್ತಾರೆ.
ಈ ೧೬ ದೇವತೆಗಳು ನಿತ್ಯಸುಮಂಗಲಿಯರು
ಈ ೧೬ ದೇವತೆಗಳು ಸಂಸಾರದಲ್ಲಿ ಯಾವುದೇ ತರಹದ ಕಷ್ಟ,ನೋವು,ದುಃಖ ಬಂದರೂ ನಮ್ಮನ್ನು ರಕ್ಷಿಸಲಿ ಎಂದು ನೆನೆದು ಬಾಗಿಣ ಕೊಡಬೇಕು.
ಈ ೧೬ ದೇವತೆಗಳನ್ನು ಸ್ಮರಿಸುತ್ತಾ ಸ್ವರ್ಣಗೌರೀ ಹಬ್ಬದಲ್ಲಿ ಮಾಡುವ ಹೋರಾಪೂಜೆ, ಎಂದರೆ ದಾರಕ್ಕೆ ಮಾಡುವ ಪೂಜೆ.
೧೬ ಅರಿಸಿನ ದಾರ,
೧೬ ಗಂಟುಗಳು,
೧೬ ಬಾಗಿನ,
೧೬ ಎಳೆ ಗೆಜ್ಜೆವಸ್ತ್ರ, ಪೂಜಿಸಬೇಕೆಂದು ಗ್ರಂಥಗಳಲ್ಲಿ ಹೇಳಿದ್ದಾರೆ.
ಸ್ವರ್ಣಗೌರೀ ವ್ರತದಲ್ಲಿ ಹದಿನಾರು ಎಳೆ ಹಾಗೂ ಗ್ರಂಥಿ(ಗಂಟು)ಗಳಿಂದ ಕೂಡಿದ ದಾರವನ್ನು ಸ್ತ್ರೀಯರು ಧರಿಸುವ ರೂಢಿ ಇದೆ.
ಇದಕ್ಕೆ ಕಾರಣವೇನು? ಏನು ಈ ಹದಿನಾರು ಸಂಖ್ಯೆಯ ವಿಶೇಷ?
ಸಮಾಧಾನ:-
ಇಡೀ ಸೃಷ್ಟಿಯು ಪುರುಷ ಹಾಗೂ ಪ್ರಕೃತಿ ಸ್ವರೂಪವಾದುದು.
ಶ್ರೀಸ್ವರ್ಣಗೌರೀಯು ಪ್ರಕೃತಿ ಮಾತೆ. ಇವಳ ಅನುಗ್ರಹದಿಂದಲೇ ಸಮಸ್ತ ಸೃಷ್ಟಿಯೂ ವಿಸ್ತಾರವಾಗಿ ಬೆಳೆಯುವುದು.
ಹೀಗೆ ಸೃಷ್ಟಿ ವಿಸ್ತಾರವಾಗುವ ಕೊನೆ ಕೊನೆಯ ಹಂತಗಳಾದ ಸೂಕ್ಷ್ಮರೂಪವಾದ ಪಂಚತನ್ಮಾತ್ರೆಗಳು (ಶಬ್ದ, ಸ್ಪರ್ಶ, ರೂಪ, ರಸ, ಗಂಧ) ಇವುಗಳು ವ್ಯಕ್ತವಾಗುವ ಪೃಥ್ವಿ, ಅಪ್ಪು(ನೀರು), ತೇಜಸ್ಸು(ಅಗ್ನಿ), ವಾಯು, ಆಕಾಶಗಳೆಂಬ ಪಂಚಭೂತಗಳು ಹಾಗೂ ಪಂಚಕರ್ಮೇಂದ್ರಿಯಗಳು ಇವಿಷ್ಟೂ ಸೇರಿ 15 ತತ್ತ್ವಗಳು ಹಾಗೂ ಮನಸ್ಸು ಸೇರಿ 16 ತತ್ತ್ವಗಳಿಗೂ ಶ್ರೀದೇವೀಯೇ ಅಧಿಷ್ಟಾತ್ರಿ.
ದಾರದಲ್ಲಿರುವ 16 ಎಳೆಗಳು ನಮ್ಮನ್ನು ಪರಮಾತ್ಮ ತತ್ತ್ವದತ್ತ ಕರೆದೊಯ್ಯುವ ನಾಡೀಮಾರ್ಗಗಳ ಪ್ರತೀಕ. ಗ್ರಂಥಿ(ಗಂಟು)ಗಳು ಮೇಲೆ ಹೇಳಿರುವ ತತ್ತ್ವಗಳ ಪ್ರತೀಕವಾದುವು.
ಪ್ರಕೃತಿ ಮಾತೆಯಾದ ಸ್ವರ್ಣಗೌರೀಯು ಮೂಲದಲ್ಲಿ ಸ್ವರ್ಣ(ಬಂಗಾರ)ವರ್ಣದಲ್ಲಿ ಬೆಳಗುವವಳಾದ್ದರಿಂದ ಅವಳ ಅನುಗ್ರಹವನ್ನು ಬಯಸಿ ಧರಿಸುವ 16 ಎಳೆಗಳುಳ್ಳ ದಾರಕ್ಕೆ ಅರಿಷಿಣವನ್ನು ಹಚ್ಚಿ ಧರಿಸುವ ರೂಢಿಯಿದೆ.
**********
ಮರದ ಬಾಗಿಣದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳು.
೧. ಅರಿಸಿನ: ಗೌರಿದೇವೀ.
೨. ಕುಂಕುಮ:ಮಹಾಲಕ್ಷ್ಮೀ
೩. ಸಿಂಧೂರ: ಸರಸ್ವತೀ
೪. ಕನ್ನಡಿ: ರೂಪಲಕ್ಷ್ಮೀ.
೫. ಬಾಚಣಿಗೆ:ಶೃಂಗಾರಲಕ್ಷ್ಮೀ.
೬. ಕಾಡಿಗೆ:ಲಜ್ಜಾಲಕ್ಷ್ಮೀ.
೭. ಅಕ್ಕಿ:ಶ್ರೀ ಲಕ್ಷ್ಮೀ.
೮. ತೊಗರಿಬೇಳೆ :ವರಲಕ್ಷ್ಮೀ
೯. ಉದ್ದಿನಬೇಳೆ:ಸಿದ್ದಲಕ್ಷ್ಮೀ
೧೦ ತೆಂಗಿನಕಾಯಿ:ಸಂತಾನಲಕ್ಷ್ಮೀ
೧೧. ವೀಳ್ಯದ ಎಲೆ:ಧನಲಕ್ಷ್ಮೀ
೧೨. ಅಡಿಕೆ:ಇಷ್ಟಲಕ್ಷ್ಮೀ
೧೩. ಫಲ(ಹಣ್ಣು): ಜ್ಞಾನಲಕ್ಷ್ಮೀ
೧೪. ಬೆಲ್ಲ:ರಸಲಕ್ಷ್ಮೀ
೧೫. ವಸ್ತ್ರ:ವಸ್ತ್ರಲಕ್ಷ್ಮೀ
೧೬. ಹೆಸರುಬೇಳೆ: ವಿದ್ಯಾಲಕ್ಷ್ಮೀ
*******
ದಾನಗಳು ಮತ್ತು ಫಲಗಳು
೧. ಅರಿಸಿನ ದಾನ :
ಅರಿಸಿನ ದಾನ ಮಾಡಿದಷ್ಟು ರೋಗ ನಿವಾರಣೆ ಆಗುತ್ತದೆ..
ಸುಮಂಗಲಿಯರಿಗೆ ಸೌಭಾಗ್ಯತನ ವೃದ್ಧಿಸುತ್ತದೆ..
ಸುಮಂಗಲಿಯರಿಗೆ ಸುಮಂಗಲಿತನ ಯಾವಾಗಲೂ ಇರಲಿ ಎಂಬ ಉದ್ದೇಶಕ್ಕೆ ಮೊದಲು ಅರಿಸಿನ ಕೊಡುತ್ತಾರೆ..
೨. ಕುಂಕುಮ ದಾನ :
ಕುಂಕುಮವನ್ನು ಯಾರು ಧರಿಸುತ್ತಾರೋ ಅವರು ಬಹಳ ತೇಜಸ್ಸು ಮತ್ತ ನಂಬಿಕೆ ಜಾಸ್ತಿ ಆಗುತ್ತೆ..
ಕುಂಕುಮ ಧಾರಣೆಯಿಂದ ದೈವಶಕ್ತಿ ಜಾಸ್ತಿಯಾಗುತ್ತದೆ..
ದೃಷ್ಟಿದೋಷ ನಿವಾರಣೆ ಆಗುತ್ತದೆ..
ಕೋಪ, ಹಠ,ಕಮ್ಮಿ ಆಗುತ್ತದೆ..
೩. ಸಿಂಧೂರ ದಾನ:
ಸತಿ ಪತಿ ಕಲಹ ನಿವಾರಣೆ.., ರೋಗಭಾಧೆ,ಋಣಭಾದೆ, ನಿವಾರಣೆ..
ಮನೆಯಲ್ಲಿ ಸಂದೇಹ, ಒಳಜಗಳ, ಮಾಂತ್ರಿಕ ದೋಷಗಳು ನಿವಾರಣೆಯಾಗುತ್ತದೆ ..
೪. ಕನ್ನಡೀ(ರೂಪಲಕ್ಷ್ಮೀ) :
ಕನ್ನಡಿಯನ್ನು ದಾನ ಮಾಡಿದರೆ ಸಮಸ್ತ ವಾಸ್ತು ದೋಷ, ದೃಷ್ಟಿದೋಷ ನಿವಾರಣೆಯಾಗುತ್ತದೆ..
೫. ಬಾಚಣಿಗೆ :
ಬಾಚಣಿಗೆ ದಾನ ಮಾಡಿದರೆ, ತಲೆಗೆ ಸಂಭಂದಿಸಿದ ಖಾಯಿಲೆಗಳು , ಯೋಚನೆಗಳು ಕಡಿಮೆಯಾಗುತ್ತವೆ, ಮತ್ತು ರೂಪವತಿಯಾಗುತ್ತಾರೆ..
೬. ಕಾಡಿಗೆ :
ದೃಷ್ಟಿ ಆಗೋದು, ಕಣ್ಣಿನ ಕೆಳಗೆ ಕಪ್ಪಾಗೋದು ಕಮ್ಮಿಯಾಗುತ್ತದೆ..
ಪೂರ್ಣ ಸ್ತ್ರೀ ತತ್ವ ಹೆಚ್ಚಾಗುತ್ತದೆ..
೭. ಅಕ್ಕಿ :
ಯಾರು ಅಕ್ಕಿಯನ್ನು ದಾನ ಮಾಡುತ್ತಾರೋ ಅವರಿಗೆ ಮನಸ್ಸಿಗೆ ಸಂಭಂದಪಟ್ಟಂತಹ ಸರ್ವ ರೋಗಗಳು, ಯೋಚನೆಗಳು ನಿವಾರಣೆಯಾಗುತ್ತವೆ.
ಆರೋಗ್ಯಭಾಗ್ಯವಾಗುತ್ತದೆ..
ಮನೆಯಲ್ಲಿ ಕಲಹಗಳು ನಿವಾರಣೆಯಾಗುತ್ತದೆ..
೮. ತೊಗರಿಬೇಳೆ :
ತೊಗರೀಬೇಳೆ ದಾನದಿಂದ ಕುಜದೋಷ ನಿವಾರಣೆಯಾಗುತ್ತದೆ..
ವಂಶಪಾರಂಪರ್ಯವಾಗಿ ಬಂದಿರುವ ಕುಜದೋಷಗಳು , ಸರ್ಪದೋಷಗಳು ನಿವಾರಣೆಯಾಗುತ್ತದೆ..
ರಜಸ್ವಲಾ ದೋಷಗಳು ನಿವಾರಣೆಯಾಗುತ್ತದೆ..
ರಕ್ತದೊತ್ತಡ (B.P) normal ಆಗಿ ಆರೋಗ್ಯವಂತರಾಗುತ್ತಾರೆ..
ಮನೆಯಲ್ಲಿ ಇರುವ ವಿವಾಹ ದೋಷಗಳು ನಿವಾರಣೆಯಾಗುತ್ತವೆ..
೯. ಉದ್ದಿನ ಬೇಳೆ :
ಪಿತೃಶಾಪ ನಿವಾರಣೆಯಾಗುತ್ತದೆ..
ನೀವು ಶ್ರಾಧ್ಧಗಳಲ್ಲಿ ಮಾಡಿರುವ ತಪ್ಪುಗಳ ಫಲ ಕಡಿಮೆಯಾಗುತ್ತದೆ..
ಅಪಮೃತ್ಯುಗಳು ನಿವಾರಣೆಯಾಗುತ್ತದೆ..
ಅಗೋಚರ ರೋಗಗಳು ನಿವಾರಣೆಯಾಗುತ್ತದೆ..
ಪತಿಯಲ್ಲಿರುವ ಸರ್ವ ದೋಷಗಳು ನಿವಾರಣೆಯಾಗುತ್ತವೆ..
೧೦. ತೆಂಗಿನಕಾಯಿ :
ಇಷ್ಟಾರ್ಥಸಿದ್ಧಿಯಾಗುತ್ತದೆ.. ,
ತೆಂಗಿನಕಾಯಿ ಗೆ "ಇಷ್ಟಾರ್ಥ ಪ್ರದಾಯಿನಿ" ಅಂತನೂ ಹೆಸರಿದೆ..
ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ..
ಕಾರ್ಯಗಳು ಪೂರ್ಣಫಲ ಕೊಡಬೆರಕಾದರೆ " ತೆಂಗಿನಕಾಯಿ " ಮಾಡಲೇಬೇಕು..
ಸರ್ವಕಾರ್ಯ ವಿಜಯವಾಗುತ್ತದೆ..
ಆರೋಗ್ಯಭಾಗ್ಯ, ನೆಮ್ಮದಿ, ಸಂತೋಷ ದೊರೆಯುತ್ತದೆ..
ಸರ್ವ ಸಂತಾನ ಸಮಸ್ಯೆಗಳು ನಿವಾರಣೆಯಾಗುತ್ತದೆ..
ಉದರ ಸಂಭಂದಿ ರೋಗಗಳು ನಿವಾರಣೆಯಾಗುತ್ತದೆ..
೧೧. ವೀಳ್ಯದೆಲೆ :
ವೀಳ್ಯದೆಲೆಗೆ ದೇವತೆ "ಧನಲಕ್ಷ್ಮೀ".!
ತಾಂಬೂಲ ದಾನವನ್ನು ಮಾಡುವದರಿಂದ ಧನಲಕ್ಷ್ಮೀ ಅನುಗ್ರಹವಾಗಿ, ಧನಪ್ರಾಪ್ತಿಯಾಗುತ್ತದೆ..
ಮಹಾಲಕ್ಷ್ಮೀ ಪ್ರಸನ್ನಳಾಗುತ್ತಾರೆ..
ಹಣದ ಸಮಸ್ಯೆ ನಿವಾರಣೆಯಾಗುತ್ತದೆ.
೧೨. ಅಡಿಕೆ :
ಅಡಿಕೆಗೆ ಸಂಸ್ಕೃತದಲ್ಲಿ " ಪೂಗೀಫಲ" ಎಂದು ಹೆಸರು..
ಅಡಿಕೆಗೆ ಅಭಿಮಾನ ದೇವತೆ "ಇಷ್ಟಲಕ್ಷ್ಮೀ".!
ಯಾರು ವೀಳ್ಯದೆಲೆ-ಅಡಿಕೆ ತಾಂಬೂಲವನ್ನು ಪ್ರತಿದಿನ ಹಾಕಿಕೊಳ್ಳುತ್ತಾರೋ ಅವರ ಇಷ್ಟಾರ್ಥ ಹಾಗೂ ಬಯಕೆಗಳು ಬೇಗನೇ ನೆರವೇರುತ್ತದೆ..
ಬರೀ ಅಡಿಕೆಯನ್ನು ತಿಂದರೆ " ಬ್ರಹ್ಮಹತ್ಯಾ" ದೋಷ ಬರುವುದು.
ಆದ್ದರಿಂದ ಬರೀ ಅಡಿಕೆ ತಿನ್ನಬಾರದು..
೧೩. ಫಲದಾನ :
ಫಲದಾನಕ್ಕೆ ಜ್ಞನಲಕ್ಷ್ಮೀ ಅಧಿಪತಿ..
ಫಲದಾನ ಮಾಡಿದರೆ ನಿಮ್ಮ ಮನೆಯಲ್ಲಿ ಸಕಲ ಕಾರ್ಯಗಳೂ ಸುಗಮವಾಗಿ, ಸುಲಲಿತವಾಗಿ ಯಾವುದೇ ತೊಂದರೆಯಿಲ್ಲದೆ, ಯಶಸ್ವಿಯಾಗಿ, ಲಾಭವಾಗಿ ನಡೆಯುತ್ತದೆ..
ದೇವಿ ದೇವಾಲಯಗಳಲ್ಲಿ ಹಣ್ಣು ನೈವೇದ್ಯ ಮಾಡಿಸಿ ಸುಮಂಗಲಿಯರಿಗೆ ದಾನ ಮಾಡಿದರೆ , ಸ್ತ್ರೀ ಶಾಪಗಳು ನಿವಾರಣೆಯಾಗುತ್ತದೆ..
೧೪. ಬೆಲ್ಲ (ರಸಲಕ್ಷ್ಮೀ) :
ಬೆಲ್ಲದ ಅಭಿಮಾನ ದೇವತೆ "ರಸಲಕ್ಷ್ಮೀ"..
ಬೆಲ್ಲದಲ್ಲಿ " ಬ್ರಹ್ಮದೇವರು" , ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾಗಣಪತಿ ದೇವರ ಸಾನಿಧ್ಯ ಇರುತ್ತದೆ..
ಬೆಲ್ಲದಾನ ಮಾಡಿದರೆ ಬಹಳಷ್ಟು ಯೋಚನೆಗಳು ನಿವಾರಣೆಯಾಗುತ್ತದೆ..
ನಿತ್ಯದಾರಿದ್ರ್ಯ ನಿವಾರಣೆಯಾಗುತ್ತದೆ..
ಜೀವನದಲ್ಲಿ ಉತ್ತಮ ಮಟ್ಟಕ್ಕೆ ಅಭಿವೃದ್ಧಿ ಆಗುತ್ತಾರೆ..
೧೫. "ವಸ್ತ್ರಲಕ್ಷ್ಮೀ" :
ಸುಮಂಗಲಿಯರು ಪ್ರತ್ಯಕ್ಷ "ಸ್ತ್ರೀದೇವತೆ" ಗಳ ಸ್ವರೂಪ ಹಾಗೂ ಕುಲದೇವತೆಯ ಸ್ವರೂಪ..
ಆದಿಶಕ್ತಿಯ ಸ್ವರೂಪ ಎಂದು ತಿಳಿದು ಬಾಗಿನ ಕೊಡುವಾಗ ವಸ್ತ್ರದಾನ ಮಾಡಬೇಕು..
ಹೀಗೆ ಮಾಡುವದರಿಂದ "ವಸ್ತ್ರ" ದಾರಿದ್ರ್ಯ ನಿವಾರಣೆಯಾಗುತ್ತದೆ..
ಕುಲದೇವತೆ ತೃಪ್ತಿಯಾಗುತ್ತದೆ..
ಸುಮಂಗಲೀ ದೋಷಗಳು ನಿವಾರಣೆಯಾಗುತ್ತದೆ..
ಮನೆಯಲ್ಲಿನ ಸ್ತ್ರೀ ದೋಷಗಳು ನಿವಾರಣೆಯಾಗುತ್ತದೆ..
೧೬. "ಹೆಸರುಬೇಳೆ" : ವಿದ್ಯಾಲಕ್ಷ್ಮೀ -
ವಿದ್ಯಾಲಕ್ಷ್ಮೀ ಹೆಸರು ಕೇಳುತ್ತಿದ್ದಂತೆ ಎಲ್ಲರಿಗೂ ಸಂತೋಷವಾಗುತ್ತದೆ.
ವಿದ್ಯೆ ಎಂದರೆ "ಸರಸ್ವತೀ", ಲಕ್ಷ್ಮೀ ಎಂದರೆ " ಶ್ರೀ ಮಹಾಲಕ್ಷ್ಮೀ" ಎಂದು ಅರ್ಥ..
ಹೆಸರುಬೇಳೆಯನ್ನು ದಾನ ಮಾಡಿದವರಿಗೂ, ತೆಗೆದುಕೊಂಡವರಿಗೂ ಸರಸ್ವತೀ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವಿಯ ಶಾಶ್ವತ ಅನುಗ್ರಹವಾಗುತ್ತದೆ..
ಹೆಸರುಬೇಳೆ ದಾನದಿಂದ ಸುಖ, ಶಾಂತಿ, ನೆಮ್ಮದಿಯ ವಾತಾವರಣ ಇರುತ್ತದೆ..
ಮನೆಯಲ್ಲಿ ಒಳಜಗಳಗಳು ನಿವಾರಣೆಯಾಗುತ್ತದೆ..
ದೇವಿಗೆ "ಹೆಸರುಬೇಳೆ" ತುಂಬಾ ಇಷ್ಟ, ಇದರಿಂದ ದೇವಿ ಸುಪ್ರಸನ್ನಳಾಗುತ್ತಾಳೆ..
ಮನೆಯಲ್ಲಿ ಎಲ್ಲರೂ ತುಂಬಾ ವಿದ್ಯಾವಂತರಾಗುತ್ತಾರೆ.
Gastric, ಗರ್ಭಕೋಶದ ತೊಂದರೆಗಳು ಕಡಿಮೆಯಾಗುತ್ತವೆ..
*********
" ಸ್ವರ್ಣಗೌರೀ ವ್ರತ ಕಥಾ "
" ಸೂತ ಉವಾಚ "
ಭಾದ್ರಪದ ಶುದ್ಧ ತೃತೀಯಾ ದಿನದಂದು ಹಸ್ತಾ ನಕ್ಷತ್ರವಿರುವ ದಿನದಂದು " ಸ್ವರ್ಣಗೌರೀ ವ್ರತ " ವನ್ನು ಆಚರಿಸಬೇಕು. ಹಸ್ತಾ ನಕ್ಷತ್ರ ಒಂದು ಮುಹೂರ್ತವಿದ್ದರೂ ಆ ದಿನವೇ ವ್ರತಾಚರಣೆಗೆ ಪ್ರಶಸ್ತ. ಹಸ್ತಾ ನಕ್ಷತ್ರವಿಲ್ಲದಿದ್ದರೂ ಪರವಾಗಿಲ್ಲ!
ಭಾದ್ರಶುಕ್ಲತೃತೀಯಾ೦ ಕುರ್ಯಾದ್ ಗೌರೀ ವ್ರತಂ ಮುನೇ ।
ಮೂಹೂರ್ತಮಾತ್ರಮಪಿ ಚೇದ್ ದಿನೇ ಗೌರೀ ವ್ರತೇ ಪರಾ ।।
ಭಾದ್ರಪದ ಶುಕ್ಲ ತೃತೀಯಾ ಚ ಹಸ್ತಾ ನಕ್ಷತ್ರ ಸಂಯುತಾ ।
ಹಸ್ತೇನ ರಹಿತಾ ಚಾsಪಿ ಸಾ ಶ್ರೇಷ್ಠಾ ವೃತಕಾರಿಣಾ ।।
ಪಾರ್ವತೀದೇವಿಯು ಶ್ರೀ ರುದ್ರದೇವರನ್ನೇ ವರಿಸಲೆಂದು ಈ ವ್ರತವನ್ನು ಮಾಡಿ ಶ್ರೀ ರುದ್ರದೇವರನ್ನು ರುದ್ರಾ೦ತರ್ಯಾಮಿಯಾದ ಶ್ರೀ ನೃಸಿಂಹದೇವರನ್ನು ಮೆಚ್ಚಿಸಿದ್ದರಿಂದ " ಗೌರೀ ವ್ರತ " ವೆಂದು ಹೆಸರಾಯಿತು.
ಶ್ರೀ ಶೌನಕ ಮಹರ್ಷಿಗಳು......
ವ್ರತವನ್ನು ಗೌರೀದೇವಿಯು ಯಾವ ಫಲಾಪೇಕ್ಷೆಯಿಂದ ಮಾಡಿದಳು?
ಈ ವ್ರತವನ್ನು ಯಾರ್ಯಾರು ಆಚರಿಸಿದರು?
ಈ ವ್ರತಕ್ಕೆ " ಸ್ವರ್ಣಗೌರೀ ವ್ರತ " ವೆಂದು ಹೆಸರು ಬರಲು ಕಾರಣವೇನು?
ಎಂದು ಪ್ರಶ್ನಿಸಿದರು.
ಆಗ ಶ್ರೀ ಸೂತ ಮಹರ್ಷಿಗಳು...
ಹಿಂದೆ ಶ್ರೀ ರುದ್ರದೇವರು, ದಕ್ಷ ಪ್ರಜಾಪತಿ ಹಾಗೂ ಪ್ರಸೂತೆಯಲ್ಲಿ ಜನಿಸಿದ 16 ಸ್ತ್ರೀ ಸಂತಾನದಲ್ಲಿ ಒಬ್ಬಳಾದ ಸತೀದೇವಿಯನ್ನು ವಿವಾಹವಾದರು.
ದಕ್ಷ ಪ್ರಜಾಪತಿಯಾದರೂ, ತಾರತಮ್ಯದಲ್ಲಿ ಜ್ಯೇಷ್ಠರಾದ ತನ್ನ ಅಳಿಯರಾದ ಶ್ರೀ ರುದ್ರದೇವರನ್ನೇ ಅವಮಾನ ಮಾಡಲು ಯಾಗವನ್ನು ಮಾಡಿದನು. ಆ ಯಾಗಕ್ಕೆ ಆಹ್ವಾನವಿರದಿದ್ದರೂ ತಂದೆಯ ಮನೆಗೆ ಸತೀದೇವಿಯು ಹೋಗಿ ತಂದೆಯಿಂದ ಅವಮಾನಿತಳಾದಳು.
ಶ್ರೀ ಮಹಾರುದ್ರದೇವರಿಗೆ ಯಜ್ಞದಲ್ಲಿ ಭಾಗವಿಲ್ಲದ್ದನು ಕಂಡು ತಂದೆಯನ್ನು ಪ್ರಶ್ನಿಸಿದಳು ಕಪಾಲಮಾಲಿ, ಸ್ಮಶಾನ ವಾಸಿಯಾದ ರುದ್ರನಿಗೆ ಮಂಗಳಕರವಾದ ಯಜ್ಞದಲ್ಲಿ ಭಾಗವಿಲ್ಲವೆಂದು ದಕ್ಷನು ನೀಡಿದ ಉತ್ತರದಿಂದ ನೊಂದು ಯೋಗಾಗ್ನಿಯಿಂದ ತನ್ನನ್ನೇ ದಹಿಸಿಕೊಂಡು ಮುಂದೆ ಪರ್ವತರಾಜನ ಮಗಳಾಗಿ " ಪಾರ್ವತೀ " ಹೆಸರಿನಿಂದ ಜನಿಸಿದಳು!!
" ಶ್ರೀಮದ್ಭಾಗವತದ ಹಿನ್ನೆಲೆಯಲ್ಲಿ ಶ್ರೀ ಪಾರ್ವತೀದೇವಿಯ ವೃತ್ತಾ೦ತ "
ಶ್ರೀ ಚತುರ್ಮುಖ ಬ್ರಹ್ಮದೇವರು ದಕ್ಷನನ್ನು ನವಪ್ರಜೇಶ್ವರಿಗಧ್ಯಕ್ಷ ಸ್ಥಾನದಲ್ಲಿ ಅಭಿಷಿಕ್ತರನ್ನಾಗಿಸಿದರು. ಆದರಿಂದ ದಕ್ಷನು ದುರಹಂಕಾರದಿಂದ ಪೂರಿತನಾದನು. ಪೂರ್ವ ವೈರವನ್ನು ಬಿಡಲಿಲ್ಲ. ಕರ್ಮರತನಾಗಿ " ವಾಜಪೇಯ " ಎಂಬ ಯಜ್ಞವನ್ನು ಮಾಡಿದನು ಮತ್ತೆ ಬೃಹಸ್ಪತೀ ಸವನವನ್ನು ಮಾಡಲೆಣಿಸಿ ಬ್ರಹರ್ಷಿ - ದೇವರ್ಷಿ ಗಣವನ್ನೂ; ಪಿತೃ ದೇವತೆಗಳನ್ನೂ ಕರೆಯಿಸಿದನು. ಸ್ವಸ್ತಿ ವಾಚನವನ್ನೋದಿ ಎಲ್ಲರೂ ಯಜ್ಞ ಪತ್ನಿಯರು ನೆರೆದಿದ್ದ ಕಾಲದಲ್ಲಿ ಯಜ್ಞಾಹುತಿಗಳನ್ನು ನೀಡುತ್ತಾ ದಕ್ಷನು ಕುಳಿತಿದ್ದನು.
ಆಕಾಶದಲ್ಲಿ ವಿಮಾನಗಳಲ್ಲಿ ಪೋಗುವ ದೇವ ಸುಂದರಿಯರು ತಮ್ಮ ಪತಿಗಳಿಂದಾಡುವ ವಚನಗಳನ್ನು ಕೇಳಿ ಪಟ್ಟು ಪೀತಾಂಬರವನ್ನುಟ್ಟು ಕಾಸಿನ ಸರವನ್ನಿಟ್ಟು ಲೋಲಲೋಚನೆಯರಾಗಿ ಮಣಿಕುಂಡಲಾಲಂಕೃತರಾದ ಅಮರಾಂಗನೆಯರ ಸಂಭ್ರವನ್ನು ನೋಡಿ ಉತ್ಸುಕದಿಂದ ಪತಿಯನ್ನು ಸೇರಿ ಸತೀದೇವಿಯು ಮಾತನಾಡಿದಳು...
ಪ್ರಜಾಪತೇ! ನಿಮ್ಮ ಮಾವನ ಮನೆಯಲ್ಲಿ ಮಖದ ಮಹೋತ್ಸವವು ನಡೆದಿದೆಯಂತೆ. ನಾವು ಪೋಗೋಣವೇ? ಅದಕ್ಕಾಗಿಯೇ ಆಹ್ವಾನಿತರಾಗಿ ಅಮರರು ಪೋಗುತ್ತಿರುವವರು ನೋಡು. ಬಂಧು ದರ್ಶನವಾಗಲೆಂದು ನನ್ನ ಭಗನಿಯರೂ; ಬಾವಂದಿರೂ ಯಜ್ಞಶಾಲೆಗೆ ಬರುವರು. ನಾನೂ ನಿಮ್ಮೊಡನೆ ಪೋಗಿ ಅವರಂತೆ ಉಡುಗೋರೆಯನ್ನು ತೆಗೆದುಕೊಳ್ಳಪೇಕ್ಷಿಸುವುದು ತಪ್ಪೇ?
ಬಾ! ಅಲ್ಲಿ ಅಕ್ಕತಂಗಿಯರು ಎಲ್ಲರಕ್ಕಿಂತಲೂ ನನ್ನ ತಾಯಿ ನನ್ನನ್ನು ಕಂಡೊಡನೆ ಅಂತಃಕರಣವು ಕರಗಲು ಕರೆದು ಬಿಗಿದಪ್ಪುವರು. ಎಷ್ಟು ದಿನವಾಯಿತವರನ್ನೂ; ತನ್ನವರನ್ನೂ ನೋಡಿ. ಧ್ವಜವು ಹಾರುತ್ತಿರಲು ಮಹಾ ಸಂಭ್ರಮದಿಂದ ಋಷಿಗಳು ಸೇರಿ ನಡೆಸುವ ಯಜ್ಞವನ್ನಾದರೂ ನೋಡಿ ಬರೋಣ! ಏನು ಮಾತಾಡದಿರುವಿ ಸುಂದರಾ? ಹರಿ ಇಚ್ಛೆಯಿಂದ ನಿರ್ಮಿತವಾದೀ ಗುಣತ್ರಯಾತ್ಮಕ ಜಗವನ್ನು ಶ್ರೀಶಾನುಗ್ರಹದಿಂದ ಚೆನ್ನಾಗಿ ತಿಳಿದಿರುವ ನಿನಗೆ ನೋಡಬೇಕೆಂಬುದಿಲ್ಲ?
ಆದರೆ ನಾನು ಸ್ತ್ರೀಯು. ತತ್ತ್ವಜ್ಞಾನವೆನಗಿಷ್ಟಿಲ್ಲ. ಪ್ರಾಣನಾಥ! ನನ್ನ ಜನ್ಮ ಭೂಮಿಯನ್ನು ನೋಡಬೇಕೆನಿಸಿದೆ. ದೀನಳಾಗಿ ಬೇಡುವ ನನ್ನ ಈ ಕೋರಿಕೆಯನ್ನೀಡೇರಿಸು. ನೋಡಿ ಸುರಾ ವನಿತೆಯರು ಅಲಂಕೃತರಾಗಿ ಪತಿ ಸಹಿತರಾಗಿ ಪೋಗುತ್ತಿರುವುದನ್ನು ನೋಡು!
ನೀಲಕಂಠ! ಹಂಸಪಾಂಡುರವಾದ ಅವರ ವಿಮಾನಾವಲಿಯಿಂದ ಆಕಾಶವೇ ನಿಬಿಡವಾಗಿದೆ. ನಾನು ಮಗಳಲ್ಲವೇ? ದಕ್ಷನೆನ್ನ ತಂದೆಯಲ್ಲವೇ? ಅವನ ಮನೆಯಲ್ಲಿ ಮಹೋತ್ಸವವಾಗುತ್ತಿರಲು ಮಗಳಾದ ನನ್ನ ದೇಹವಿಲ್ಲಿ ನಿಲ್ಲುವುದೇ? ಕರೆಯದಿದ್ದರೂ ಸೌಹಾರ್ದವನ್ನೆಣಿಸಿ ಗಂಡನ ಮನೆಗೆ ಹೆಣ್ಣೂ; ಗುರು ಮಂದಿರಕ್ಕೆ ಶಿಷ್ಯನೂ; ತಂದೆಯ ತೌರಿಗೆ ಮಕ್ಕಳೂ ಹೋಗಬೇಕೆಂದು ನೀತಿ ಕೋವಿದರು ಪೇಳುವರು. ಇಷ್ಟಾಗಿ ದೀನತೆಯಿಂದ ಕೇಳುವ ನನ್ನಲ್ಲಿ ಪ್ರಸನ್ನನಾಗು!
ಹೇ ದೇವಶ್ರೇಷ್ಠಾ! ಪೂಜ್ಯನಾದ ನೀನೆನ್ನ ವಾಂಛೆಯನ್ನು ಕೈಗೂಡಿಸು. ಧರ್ಮವನ್ನು ಚೆನ್ನಾಗಿ ತಿಳಿದ ಸರ್ವಜ್ಞನಿರುವೆ. ನಾ ಕೇಳಿದುದೇನಧರ್ಮವೇ? ಅನುಗ್ರಹಿಸು ಎಂದು ಪ್ರಿಯಳಾಡಿದ ಭಾಷಣವನ್ನು ಕೇಳಿ ನಸುನಕ್ಕು ಸುರಪ್ರಿಯನೂ! ವಿಶ್ವಸೃಡ್ಯಾಗದಲ್ಲಿ ದಕ್ಷನಾಡಿದ ವಾಗ್ಬಾಣಗಳ ಮಹಾಭೇದಿ ತೀಕ್ಷ್ಣತೆಯನ್ನು ನೆನೆದು ಮೆಲ್ಲನಿಂತು ನುಡಿದನು...
ಶೋಭನರಾತ್ರಿ! ದಕ್ಷಪುತ್ರೀ! ಕರೆಯದಿದ್ದರೂ ಬಂಧು ಜನರ ಮನೆಗೆ ಪೊಗಬೇಕೆಂದೇ ನಿಜವೇ ಅಹುದು. ಆದರೆ ಅವರೆಮ್ಮನ್ನು ದೋಷ ದೃಷ್ಟಿಯಿಂದ ನೋಡದಿರುವಾಗ ಆ ಮಾತು. ದುರಾಭಿಮಾನ ದೂಷಿತರಾಗಿ ಸಿಟ್ಟಿನಿಂದ ಕೂಡಿದವರಲ್ಲಿ ಹೋಗಬಾರದು. " ವಿದ್ಯಾ - ತಪಸ್ಸು - ಧನ - ಶರೀರ - ಸೌಂದರ್ಯ - ತಾರುಣ್ಯ - ಕುಲ " ಎಂಬ ಆರು ಸಜ್ಜನರಿಗೆ ಗುಣವೆನಿಸುವುವು. ದುಷ್ಟರಿಗವೇ ಮದ ಕಾರಣವಾಗುವುದು. ಮದವೇರಲು ಶಾಸ್ತ್ರ ಜನಿತ ಸ್ಮೃತಿಯು ನಾಶವಾಗುವುದು. ಅಭಿಮಾನದಿಂದ ಕಣ್ಣು ಕಾಣದಾಗಿ ಕುಮತಿಯು ಮಹಜ್ಜನರ ಪ್ರಭಾವವನ್ನೂ ನೋಡದೆ ಅವರನ್ನವಮಾನಿಸುವನು. ಇಂಥವರು ಸಜ್ಜನರಾದರೂ ಅವ್ಯವಸ್ಥಿತ ಚಿತ್ತರಾದ್ದರಿಂದ ಅವರ ಮನೆಗೆ ಹೋಗುವುದು ಉಚಿತವಲ್ಲ!
ಹುಬ್ಬನ್ನು ಮುಡಿದು ಕಣ್ಣನ್ನು ಕೆಂಪಾಗಿಸಿ ವಕ್ರಬುದ್ಧಿಯಿಂದ ಬಂದವರನ್ನು ನೋಡುವ ದುರಾತ್ಮರಲ್ಲಿ ನಮಗೇನು ಕೆಲಸ?
ನನ್ನವರೆನಿಸಿಕೊಂಡವರು ಕೊಂಕು ಬುದ್ಧಿಯಿಂದ ಕೆಟ್ಟ ಮಾತುಗಳನ್ನಾಡಿ ಮರ್ಮಭೇದನ ಮಾಡಿದ ವೇದನೆಯು ಯುದ್ಧರಂಗದಲ್ಲಿ ವಿಷದಿಗ್ಧ ಬಾಣಗಳಿಂದಾದ ವೇದನೆಗಿಂತಲೂ ಅಸಹ್ಯವಾದುದು. ನೀನೇನೋ ಸರ್ವಾಧಿಪತಿಯಾದ ದಕ್ಷನ ಪ್ರೀತಿಯ ಪುತ್ರಿಯೇ ಸರಿ! ಆದರೂ ನನ್ನಲ್ಲಿ ಅಕಾರಣ ದ್ವೇಷಿಯಾದ ದಕ್ಷನು ನನ್ನ ಪತ್ನಿಯಾಗಿರುವುದರಿಂದ ಸನ್ಮಾನಿಸುವುದಿಲ್ಲವೆಂದು ನಿನಗೂ ಗೊತ್ತಿದೆ.
ಅಸುರಾವೇಶದಿಂದ ನನ್ನ ಪುರುಷ ಬುದ್ಧೀ೦ದ್ರಿಯಾದಿ ಪ್ರೇರಕತ್ವ ರೂಪ ಮಹಾದೈಶ್ವರ್ಯವನ್ನು ಕಂಡು ಕುಡಿಯುತ್ತಿರುವನು. ಇಂಥಹಾ ಪದವಿಯು ತನಗಾಗಲಾರದೆಂದು ಅಸುರರು ಹರಿಯನ್ನಂತೆ ನಿಷ್ಕಾರಣವಾಗಿ ತನ್ನನ್ನು ದ್ವೇಷಿಸುತ್ತಿರುವ ದಕ್ಷನು ಹರಿಯ ದ್ವೇಷಿಯೇ ಸರಿ!
ಕೇಳಿಲ್ಲಿ! ಪ್ರತುದ್ಗಮನ; ವಿನಯ; ಅಭಿವಾದಗಳು ಉತ್ತಮರಿಗೆ. ಮಿತ್ರರಿಗೆ ಪ್ರತ್ಯುದ್ಗಮನವಷ್ಟೇ! ಅಧಮರಿಗಿವಾವೂ ಇಲ್ಲ. ಆದರೂ ಪ್ರಾಜ್ಞರು ಸ್ಟೋತ್ತಮರಲ್ಲಿರುವ ಶ್ರೀಶನಿಗೂ; ಸ್ವೋತ್ತಮರಿಗೂ ಶಿರಸಾ ನಮಿಸುವರು. ಸ್ವಾಧಮರಾದರೆ ಅಂತರ್ಯಾಮಿಗೆ ನಮಿಸಿ ಸುಮ್ಮನಿರುವುದು ಧರ್ಮ ಸೂಕ್ಷ್ಮವು. ದಕ್ಷನಿಗೀ ವಿವೇಕವಿಲ್ಲ!
ನನ್ನಿಂದ ಪ್ರತ್ಯುತ್ಥಾನದಿಗಳಿಂದ ಪೂಜಿಸಲರ್ಹನು ಶ್ರೀ ಚತುರ್ಮುಖ ಬ್ರಹ್ಮಾದಿ ಶರೀರ ಸ್ಥಿತನಾದ ಶ್ರೀ ಹರಿಯೇ! ಅವನು ಮಾಯಾವರಣಾದಿಗಳಿಂದ ರಹಿತನಾಗಿರುವನು. ಅಪ್ರಾಕೃತನಾಗಿರುವನು. ಅವನೇ ವ್ಯಾಪ್ತಿಯಿಂದ ಪೃಥುವ್ಯಾದಿಗಳಲ್ಲಿದ್ದು ಪ್ರಕಾಶಿತನಾದರೂ ಲೇಪ ರಹಿತನಾಗಿರುವನು. ಅಂಥಹಾ ಸರ್ವೇ೦ದ್ರಿಯ ಸ್ವಾಮಿಯಾದ ಶ್ರೀ ಬ್ರಹ್ಮ ಶರೀರಸ್ಥ ಶ್ರೀ ವಾಸುದೇವನನ್ನು ನಾನಾಗ ಚಿಂತಿಸುತ್ತಿದ್ದೆ. ದಕ್ಷಾ೦ತಃಸ್ಥತ ಶ್ರೀ ಹರಿಯೂ ಆದುದರಿಂದ ಸತ್ಕರಿಸಲ್ಪಟ್ಟಂತೆಯೇ ಆಯಿತು. ಹೀಗಿರುವಾಗ ದಕ್ಷನು ನನ್ನನ್ನು ದ್ವೇಷಿಸುವುದು ವಿನಾಕಾರಣವೇ ಸರಿ!
ರಜೋಗುಣ ಪ್ರಯುಕ್ತ ಮದ ದೂಷಿತನಾದ್ದರಿಂದಲೂ; ಶ್ರೀ ಹರಿ ಸನ್ನಿಧಾನ ವಿಶೇಷದಿಂದಲೂ; ಪ್ರತ್ಯುತ್ಥಾನದಿಗಗಳನ್ನು ಮಾವನಾದರೂ ಮಾಡದೆ ನಾನಿದ್ದುದೂ ಸರಿಯೇ! ನನ್ನ ದ್ವೇಷಿಯಾದ್ದರಿಂದ ನಿನ್ನ ತಂದೆಯಾದರೂ ದಕ್ಷನನ್ನು ನೋಡಲು ಹೋಗಬೇಡ. ಸತೀ! ಆ ವಿಶ್ವಸೃಡ್ಯಾಗದಲ್ಲಿ ದುರ್ವಚನಗಳನ್ನಾಡುವವನೂ, ನಿನ್ನನ್ನು ಸಂಭಾವಿಸನು. ನನ್ನ ಮಾತನ್ನು ಮನ್ನಿಸದೆ ಪೋದರೆ ಒಳ್ಳೆಯದಾಗದು. ಸಂಭಾವಿತರಿಗೆ ಸೃಜನಕೃತ ಪರಾಭವವು ದೇಹ ವಿಯೋಗಕ್ಕೆ ಮಿಗಿಲೆನಿಸುವುದು. ನೋಡಿನ್ನು ನಿನ್ನ ಮನ ಬಂದಂತೆ ಮಾಡು.
ಶ್ರೀಶೇಚ್ಛೆಯಂತಾಗಲಿ! ಇಷ್ಟು ಮಾತನ್ನು ನುಡಿದ ಶ್ರೀ ಶಂಕರನು ಮನಸಾ ಹೇಗಾದರೂ ಪತ್ನಿಯ ಅಂಗ ನಾಶವು ನಿಶ್ಚಿತವು. ಬೇಡವೆಂದರೆ ವಿಷಾಗ್ನಿ ಜಲಗಳಿಂದ; ಹೋಗೆಂದರೆ ಅಲ್ಲಿ ದಕ್ಷಾವಮಾನದಿಂದ ಸಾಯುವಳೆಂದು ತಿಳಿದು ನಿಟ್ಟುಸಿರು ಬಿಟ್ಟು ಸುಮ್ಮನಾದನು!
ಆದರೂ ಸತೀದೇವಿಯು ದಕ್ಷನ ಯಜ್ಞಕ್ಕೆ ಬಂದು ಅಲ್ಲಿ ಅವಮಾನಿತಳಾಗಿ ದೇಹ ತ್ಯಾಗ ಮಾಡಿದಳು. ದಕ್ಷನಾದರೂ ಮಗಳು ತನ್ನ ದೋಷ ನಿಮಿತ್ತದಿಂದ ಸತ್ತಿದ್ದನ್ನು ಕಂಡು ಹೋ! ಎಂದು ರೋಧಿಸಿ ಬಹು ಪಶ್ಚಾತ್ತಾಪ ತಪ್ತನಾದನು. ಅವನ ಅಸುರಾವೇಶ ಸರಿಯುತ್ತಾ ಬಂದಂತೆ ಜ್ಞಾನೋದಯವಾಯಿತು. ಇಂತೂ ದೇಹ ತ್ಯಾಗ ಮಾಡಿದ ಸತೀದೇವಿಯು ಹಿಮವದ್ರಾಜನ ಮಹಿಷಿಯಾದ ಮೇನಾದೇವಿಯಲ್ಲಿ ಪಾರ್ವತಿ ಎನಿಸಿ ಪುಟ್ಟಿ ಪುನಃ ಶಂಕರನ ಸತಿಯೇ ಆದಳು!
ಪರಮ ಪುರುಷನಾದ ಶ್ರೀ ಹರಿಯನ್ನು ಪೊಂದುವ ಲಕ್ಷ್ಮೀಯಂತೆ ಅನನ್ಯ ಭಾವನಳು. ಏಕ ಪತಿವ್ರತೆಯಾದ ಗಿರಿಜೆ ತಪವಂಗೈದು ಶಂಕರನರ್ಧಾ೦ಗಿಯಾದಳು. ದಕ್ಷಾಧ್ವರ ಧ್ವಂಸಿಯಾದ ಶಂಭುವಿನ ಪರಮ ಪವಿತ್ರ ಕಥೆಯನ್ನು ಮೈತ್ರೇಯರು ಉದ್ಧವನಿಂದ ಕೇಳಿ ತಿಳಿದದ್ದನ್ನು ವಿದುರನಿಗೆ ಹೇಳಿದರು.
ಆಯುರ್ವೃದ್ಧಿಕಾರಣವೂ; ಪಾಪ ನಿವಾರಕವೂ ಆ ಈ ಶಿವ ಲೀಲೆಯನ್ನು ನಿತ್ಯವೂ ಶ್ರದ್ಧೆಯಿಂದ ಕೇಳಲೂ - ಪೇಳಲೂ ಭಕ್ತಿ ಹೆಚ್ಚಿ ಅಹಂಕಾರ ಭಾವನೆಯು ನಶಿಸಿ; ಜ್ಞಾನೋದಯವಾಗುವುದು!!
ದಕ್ಷಸ್ಯ ದುಹಿತಾ ಪೂರ್ವಂ ಸತೀ ನಾಮೇತಿ ವಿಶ್ರುತಾ ।
ತೇನ ಮೇ ತ್ವಪಮಾನಶ್ಚ ಕೃತಂ ಲೋಕೇ ಚ ದೂಷಣಮ್ ।।
ತಸ್ಯ ಕೋಪೇನ ಮಹತಾ ತ್ವಯಾ ತ್ಯಕ್ತ೦ ಕಲೇವರಂ ।
ಹಿಮಾಚಲಸುತಾ ಜಾತಾ ಪಾರ್ವತೀತ್ಯೇವ ವಿಶ್ರುತಾ ।।
" ಸ್ವರ್ಣಗೌರೀ ವ್ರತ ಕಥಾ "
ಪಾರ್ವತಿಯು ಬಾಲ್ಯದಿಂದಲೂ ಶಿವನನ್ನೇ ಪತಿಯನ್ನಾಗಿ ಹೊಂದಲು ಶಿವಾಂತರ್ಯಾಮಿ ಮತ್ತು ಶಿವನ ಉಪಾಸ್ಯ ಮೂರ್ತಿ ಸೀತಾರಾಮನನ್ನು 12 ವರ್ಷಗಳ ಕಾಲ ಗಾಳಿಯನ್ನು ( ಹೊಗೆ ) ಸೇವಿಸಿ ತಪವನ್ನಾಚರಿಸಿದಳು. ಇದರಿಂದ ಸಂತುಷ್ಟನಾದ ಶಿವಾಂತರ್ಯಾಮಿಯು ಪಾರ್ವತಿಯನ್ನು ಅನುಗ್ರಹಿಸಿದನು.
ಈ ಮಧ್ಯದಲ್ಲಿ ಹಿಮಾಲಯನು ತನ್ನ ಮಗಳ ಪೂರ್ವೇತಿಹಾಸವನ್ನು ತಿಳಿಯದೇ ನಾರಾಯಣನಿಗೆ ಪಾರ್ವತಿಯನ್ನು ಕೊಡಲು ನಿಶ್ಚಯಿಸಿದನು. ಪಾರ್ವತಿಯಾದರೂ ಇದರಿಂದ ಖಿನ್ನಳಾಗಿ ಮನೆಯನ್ನು ತ್ಯಜಿಸಿ; ಕಾಡನ್ನು ಪ್ರವೇಶಿಸಿ; ಮರಳಿನಿಂದ ಲಿಂಗವನ್ನು ತಯಾರಿಸಿ ಭಕ್ತಿಯಿಂದ ಪೂಜಿಸಿದಳು. ಉಪವಾಸದಿಂದ ಇದ್ದು ರಾತ್ರಿ ಜಾಗರಣೆಯನ್ನು ಮಾಡಿ ಶಿವನನ್ನು ಮೆಚ್ಚಿಸಿದಳು. ಅಂದು ಭಾದ್ರಪದ ಶುಕ್ಲ ತೃತೀಯಾ ತಿಥಿಯಾಗಿತ್ತು.
ಭಾದ್ರಪದ ಶುಕ್ಲ ತೃತೀಯಾಯಾ೦ ಸಾ ಗತಾ ವನಮುತ್ತಮಂ ।
ಕೃತ್ವಾ ವಾಲುಕಲಿಂಗಂ ಚ ಪೂಜಯಾಮಾಸ ಪಾರ್ವತೀ ।।
ಹಿಮಾಲಯನಾದರೂ ಮಗಳನ್ನು ಸಂದರ್ಶಿಸಿ; ನಿನ್ನನ್ನು ಶಿವನಿಗೆ ಕೊಟ್ಟು ವಿವಾಹ ಮಾಡಿ ಕೊಡುವೆನು ಎಂದು ಸಂತೈಸಿ; ಶಿವನಿಗಾಗಿ ದೂತನನ್ನು ಕಳುಹಿಸಿ ಹಾಗೂ ಪಾರ್ವತಿಗೆ ಶಿವನೊಂದಿಗೆ ವಿವಾಹವನ್ನು ಮಾಡಿದನು. ಪಾರ್ವತಿಯು ಭಾದ್ರಪದ ಶುಕ್ಲ ತೃತೀಯಾದಂದು ಮಾಡಿದ ಶಿವನ ಕುರಿತ ತಪಸ್ಸಿನಿಂದ ಶಿವನ ಅರ್ಧಾ೦ಗಿಯಾದಳು. ಅಖಂಡ ಸೌಭಾಗ್ಯವನ್ನು ಪಡೆದಳು!
ಏತದ್ವ್ರತ ಪ್ರಭಾವೇನ ಮಾಮ ಚಾರ್ಧಾಸನಂ ಗತಾ ।
ಸೌಭಾಗ್ಯ೦ ಚ ತಯಾ ಪ್ರಾಪ್ತ೦ ವ್ರತರಾಜ ಪ್ರಭಾವಿತಃ ।।
ಅಂದಿನಿಂದ ಗೌರಿಯು ಮಾಡಿದ ವ್ರತವು ಲೋಕದಲ್ಲಿಯೂ ಪ್ರಚಾರವಾಗಿ ಅಖಂಡ ಸೌಭಾಗ್ಯಕ್ಕಾಗಿ ಉಮಾ ಮಹೇಶ್ವರರನ್ನು ಪೂಜಿಸುವುದು ರೂಢಿಯಲ್ಲಿದೆ.
ತದಾಪ್ರಭೃತಿ ಲೋಕೇಷು ವ್ರತಮೇತತ್ ಪ್ರಕಾಶಿತಮ್ ।
ಭಾದ್ರಪದ ಶುಕ್ಲ ತೃತೀಯಾಯಾ೦ ಕಾರ್ಯ೦ ಸೌಭಾಗ್ಯ ಪ್ರಾಪ್ತಯೇ ।।
ಅಂದು ಪೂಜೆಯ ಮೊದಲು ಏನನ್ನೂ ತಿನ್ನದೇ ಭಕ್ತಿಯಿಂದ ಪೂಜಿಸಿ 16 ಗ್ರಂಥಿಗಳುಳ್ಳ ದಾರದಲ್ಲಿ ಉಮಾಮಹೇಶ್ವರರ ಅಂತರ್ಯಾಮಿಯಾಗಿರುವ ಶ್ರೀ ಲಕ್ಷ್ಮೀ ನರಸಿಂಹದೇವರನ್ನು ಆವಾಹಿಸಿ; ಪೂಜಿಸಿ; ದಂಪತಿಗಳನ್ನು ವಸ್ತ್ರಾದಿಗಳಿಂದ ಪೂಜಿಸಿ; ಭೋಜನಾದಿಗಳಿಂದ ತೃಪ್ತಿ ಪಡಿಸಿ; ತಾನೂ ಭುಂಜಿಸಬೇಕು.
ಈ ವ್ರತವನ್ನು ಚಂದ್ರಪ್ರಭರಾಜನು ತನ್ನ ಪತ್ನಿಯರಿಂದ ಮಾಡಿಸಿ ಸಾಂಸಾರಿಕ ಸುಖವನ್ನು ಪಡೆದನು.
ಸರಸ್ವತೀ ನದಿಯ ಮೇಲಿರುವ " ಸುವಿಲಾ " ಎಂಬ ನಗರದ ರಾಜನಾದ ಚಂದ್ರಪ್ರಭನು ಮಹಾದೇವಿ - ವಿಶಾಲ ಎಂಬ ರಾಣಿಯರೊಂದಿಗೆ ಸುಖಿಯಾಗಿದ್ದನು. ಮಹಾದೇವಿಯು ರಾಜನಿಗೆ ಅತ್ಯಂತ ಪ್ರಿಯಳಾಗಿದ್ದಳು.
ಒಂದುದಿನ ರಾಜನು ಬೇಟೆಗಾಗಿ ಕಾಡಿಗೆ ಹೋಗಿದ್ದನು. ಕಾಡಿನಲ್ಲಿ ಅಪ್ಸರೆಯರು " ಸ್ವರ್ಣಗೌರೀ ವ್ರತ " ವನ್ನು ಆಚರಿಸುತ್ತಿದ್ದರು. ರಾಜನು ಅವರನ್ನು ಕುರಿತು..
ಇದು ಯಾವ ವ್ರತ?
ಈ ವ್ರತಾಚರಣೆಯಿಂದ ಯಾವ ಫಲ ಹೊಂದ ಬಹುದು?
ಎಂದು ಪ್ರಶ್ನಿಸಿದನು.
ವಿಧಾನಂ ಕೀದೃಶಂ ವೃತಂ ಕಿಂ ಫಲಂ ವಿಸ್ತರಾನ್ಮಮ ।।
ಅಪ್ಸರೆಯರು ಹೀಗೆಂದರು..
ರಾಜನೇ! ಇದು ಸಕಲ ಸಾಂಸಾರಿಕ ಸುಖಗಳನ್ನೂ ನೀಡುವ ಹಾಗೂ ಸರ್ವ ಸಂಪತ್ತುಗಳನ್ನೂ ನೀಡುವ ವೃತವಾಗಿದೆ.
ರಾಜನು ಆ ವ್ರತವನ್ನು ಮಾಡುವ ವಿಧಾನವನ್ನು ಕೇಳಿದನು.
ಅಪ್ಸರೆಯರು ಆ ವ್ರತದ ಕುರಿತು ಹೀಗೆ ತಿಳಿಸಿದರು...
ಭಾದ್ರಪದ ಶುದ್ಧ ತೃತೀಯಾದಂದು ಪಾರ್ವತಿ ಹಾಗೂ ಮಹೇಶ್ವರರನ್ನೂ ಮತ್ತು ಅವರಂತರ್ಯಾಮಿ ಶ್ರೀ ಲಕ್ಷ್ಮೀ ನರಸಿಂಹದೇವರನ್ನು ಆವಾಯಿಸಿ; ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ನಂತರ 16 ಗಂಟುಗಳುಳ್ಳ ದಾರವನ್ನು ಪೂಜಿಸಿ ಕೈಗೆ ಕಟ್ಟಿ ಕೊಳ್ಳಬೇಕು. ಸ್ತ್ರೀಯರಾದರೂ ಎಡಗೈಗೆ ಮುಟ್ಟಿಸಿ ಬಲಗೈಗೆ ಕಟ್ಟಿ ಕೊಳ್ಳಬೇಕು ಅಥವಾ ಕಂಠದಲ್ಲಿಯೂ ಧರಿಸಬಹುದು.
ದೇವದೇವ ಸಮಾಗಚ್ಛ ಪ್ರಾರ್ಥಯೇsಹಂ ಜಗತ್ಪತೇ ।
ಇಮಾಂ ಮಯಾ ಕೃತಂ ಪೂಜಾ ಗೃಹಾಣಾ ಸುರಸತ್ತಮ ।।
ಹೀಗೆ ಆವಾಯಿಸಿ ಪಾರ್ವತೀ ಪರಮೇಶ್ವರರನ್ನು ಪೂಜಿಸಬೇಕು.
ಪಾರ್ವತೀ ಶಂಕರೌ ಪೂಜ್ಯೋ ಭಕ್ತ್ಯಾ ಪರಮಯಾ ಮುದಾ ।
ದೋರಕಂ ಷೋಡಶ ಗುಣಂ ಬಧ್ನಿಯಾದ್ದಕ್ಷಿಣೇ ಕರೇ ।।
ನರೋ, ವಾಮೇ ತು ನಾರೀಣಾ೦ ಗಲೇ ಬಂಧನಂ ಮತಂ ।।
ರಾಜನು ಅಪ್ಸರೆಯರು ತಿಳಿಸಿದಂತೆ ದೇವಿಯನ್ನು ಭಕ್ತಿಯಿಂದ ಪೂಜಿಸಿ ದಾರವನ್ನು ಬಲಗೈಗೆ ಕಟ್ಟಿಕೊಂಡು ಅರಮನೆಗೆ ಬಂದನು.
ಏವಂ ದೇವ್ಯಾ ವ್ರತಂ ಕೃತ್ವಾ ಆಜಗಾಮ ನಿಜಂ ಗೃಹಮ್ ।।
ರಾಜನ ಕೈಯಲ್ಲಿರುವ 16 ಗ್ರಂಥಿಗಳುಳ್ಳ ದಾರವನ್ನು ನೋಡಿದ ಜ್ಯೇಷ್ಠ ಭಾರ್ಯೆಯಾದ ಮಹಾದೇವಿಯು ಕೋಪಿಷ್ಠಳಾಗಿ ಅದನ್ನು ಕಿತ್ತು ಬಿಸಾಡಿದಳು. ಆ ದಾರವು ಒಣಗಿದ ಗಿಡದ ಮೇಲೆ ಬಿದ್ದಾಗ ಒಣಗಿದ ಗಿಡವೂ ಚಿಗುರಿತು.
ತ್ರೋಟಯಿತ್ವಾ ಚ ಚಕ್ಷೇಪ ಬಾಹ್ಯೇ ಶುಷ್ಯತರೂಪರಿ ।
ತೇನ ಸಂಸ್ಪೃಷ್ಟ ಮಾತ್ರೇಣ ತರು: ಪಲ್ಲವಿತೋsಭವೇತ್ ।।
ಎರಡನೆಯ ಹೆಂಡತಿಯಾದ ವಿಶಾಲೆಯು ದಾರದ ಮಹಿಮೆಯನ್ನು ತಿಳಿದು ತಾನೇ ಧರಿಸಿದಳು. ಇದರಿಂದ ರಾಜನ ಪ್ರೀತಿಗೆ ಪಾತ್ರರಾದಳು. ಜ್ಯೇಷ್ಠಳಾದರೂ ಗೌರಿಗೆ ಅಪಚಾರ ಮಾಡಿದ್ದರಿಂದ ರಾಜನಿಂದ ತ್ಯಜಿಸಲ್ಪಟ್ಟು ದುಃಖಿತಳಾದಳು. ಪಶ್ಚಾತ್ತಾಪ ದಗ್ಧಳಾಗಿ ಗೌರಿಯನ್ನು ಭಕ್ತಿಯಿಂದ ಪ್ರಾರ್ಥಿಸಿದಾಗ ಗೌರಿಯು ಪ್ರತ್ಯಕ್ಷಳಾದಳು.
ಮಹಾದೇವಿ ಎಂಬ ಜ್ಯೇಷ್ಠ ಭಾರ್ಯೆಯು ಗೌರಿಯನ್ನು ಹೀಗೆ ಪ್ರಾರ್ಥಿಸಿದಳು...
ಜಯ ದೇವಿ ನಮಸ್ತುಭ್ಯ೦ ಜಯ ಭಕ್ತ ವರಪ್ರದೇ ।
ಜಯ ಶಂಕರ ವಾಮಾಂಗೇ ಜಯ ಮಂಗಲ ಮಂಗಲೇ ।।
ನಂತರ ಗೌರೀದೇವಿ ವ್ರತವನ್ನು ಆಚರಿಸಿ ದಾರವನ್ನು ಧರಿಸಿ ತನ್ನ ಗಂಡನಿಂದ ಪುರಸ್ಕೃತಳಾದಳು. ಈ ಇತಿಹಾಸದಿಂದ ಈ ವ್ರತಾಚರಣೆಯಿಂದ ಪತಿಯ ಪ್ರೇಮವನ್ನೂ ಪಡೆಯಬಹುದೆಂದು ತಿಳಿಯುತ್ತದೆ.
**********
#ಗೌರಿಯನ್ನು #ಪೂಜೆಗೆ #ಕರೆಯುವ #ಹಾಡು.
ಬಾರೆ ಗೌರಿ ಪೂಜಿಸುವೆನು ಸಾರಸಾಂಬಕಿ
ಸಾರುವೆ ಸಂಸಾರದಿ ಸುಖದೋರೆ ವಿಧುಮುಖಿ || ಪ||
ಕುಂದ ಮಲ್ಲಿಗೆ ಜಾಜಿ ಕುಸುಮ ಗಂಧ ಪರಿಮಳ
ಚಂದದಿ ಸಮರ್ಪಿಸುವೆನು ಪುಷ್ಪಫಲಗಳ||1||
ಮಂಗಳೆಂದು ಪಾಡುತ ಬೆಳಗುವೆನು ಆರುತಿ
ಮಂಗಳಗೌರಿಯೆ ಕೊಡು ಸೌಭಾಗ್ಯ ಸಂತತಿ||2||
ಮಂಗಳ ಪ್ರದಾತೆ ಗಿರಿಸಂಭೂತೆ ಸುರನುತೆ
ಮಂಗಳಾಂಗಿ ಕುರು ಕರುಣಾಮಯಿ ನಮೋಸ್ತುತೆ ||3||
ಪತ್ಯಂತರ್ಗತ ಹರಿಯಸೇವೆ ನಿತ್ಯ ಮಾಡಿಸೆ
ಪುತ್ರ ಪೌತ್ರಾದಿ ಸಂಪದವಿತ್ತು ರಕ್ಷಿಸೆ ||4||
ರತಿಯ ಪತಿಯ ಪಿತಗೆ ಸದಾಪ್ರತಿಮೆಯೆನಿಸುವ
ಅತಿಥಿಗಳನು ಸೇವಿಸುವ ಸುಮತಿಯ ಕೊಡು ಜವ||5||
ಸಡಗರದಿ ನಿಮ್ಮಡಿಯ ಶೇವೆ ಬಿಡುದೆ ಮಾಡುವೆ
ಮೃಡನ ರಾಣಿ ಕೊಡುವರಗಳ ಗಡನೆ ಬೇಡುವೆ ||6||
ಶರಣು ಜನರ ಪೊರೆವ ಕಾರ್ಪರ ನಾರಸಿಂಹನ
ಚರಣ ಕಮಲಯುಗದಿ ಭಕುತಿ ಇರಲಿ ಅನುದಿನಾ||7||
********
▬▬▬▬▬ஜ۩۞۩ஜ▬▬▬▬▬
*॥ಸರ್ವೆಜನಃ ಸುಖಿನೋಭವಂತು॥*
ಕೃಷ್ಣಾರ್ಪಣಮಸ್ತು
▬▬▬▬▬ஜ۩۞۩ஜ▬▬▬▬▬
Post a Comment