2016ರ ಮಾ.14ರಂದು ಎಸಿಬಿ ಸ್ಥಾಪನೆಯಾಗಿ, ಮಾ.19ಕ್ಕೆ ಲೋಕಾಯುಕ್ತಕ್ಕಿದ್ದ ಅಧಿಕಾರವನ್ನು ಹಿಂಪಡೆಯಲಾಗಿತ್ತು. ಅಲ್ಲಿಂದ ಇಲ್ಲಿವರೆಗೆ ನಾಮ್ೇವಾಸ್ತೆ ಎಂಬಂತೆ ಲೋಕಾಯುಕ್ತ ಅಸ್ತಿತ್ವದಲ್ಲಿತ್ತು. ಆದರೆ, ಎಸಿಬಿಯನ್ನು ರದ್ದುಪಡಿಸಿದ್ದ ಹೈಕೋರ್ಟ್ ಲೋಕಾಯುಕ್ತ ಮರುಸ್ಥಾಪನೆಗೆ ಆದೇಶಿಸಿತ್ತು. ಅದರಂತೆ, ಈಗಾಗಲೇ ಎಸಿಬಿಯಲ್ಲಿದ್ದ 141 ಕಾನ್ಸ್ಟೆಬಲ್ ಹಾಗೂ ಹೆಡ್ ಕಾನ್ಸ್ಟೆಬಲ್ಗಳನ್ನು ಲೋಕಾಯುಕ್ತಕ್ಕೆ ಈಗಾಗಲೆ ವರ್ಗಾವಣೆ ಮಾಡಲಾಗಿದೆ. ಜತೆಗೆ ಎಸಿಬಿಯಲ್ಲಿದ್ದ ಎಲ್ಲ ಕೇಸ್ಗಳ ಕಡತಗಳೂ ಸೋಮವಾರ ಸಂಜೆ ವೇಳೆಗೆ ಲೋಕಾಯುಕ್ತಕ್ಕೆ ವರ್ಗಾವಣೆಯಾಗಿವೆ. ಲಂಚಕ್ಕೆ ಕೈಯೊಡ್ಡಿದ ಬಿಬಿಎಂಪಿ ಜಂಟಿ ಆಯುಕ್ತ ಹಾಗೂ ಆಪ್ತ ಸಹಾಯಕನನ್ನು ರೆಡ್ಹ್ಯಾಂಡಾಗಿ ಸೆರೆಹಿಡಿಯುವ ಮುಖೇನ ಅಧಿಕೃತವಾಗಿ ಕಾರ್ಯಾರಂಭಿಸಿದ ಮೊದಲ ದಿನವೇ ಲೋಕಾಯುಕ್ತ ಮತ್ತೆ ಫೀಲ್ಡಿಗಿಳಿದಿದೆ ಎಂದು ಭ್ರಷ್ಟರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ನೇತೃತ್ವದಲ್ಲಿ ಸೋಮವಾರ ಮಹತ್ವದ ಸಭೆ ನಡೆದಿದೆ. ಸಭೆಯಲ್ಲಿ ಉಪ ಲೋಕಾಯುಕ್ತ, ಲೋಕಾಯುಕ್ತ ಕಾರ್ಯದರ್ಶಿಗಳು, ರಿಜಿಸ್ಟ್ರಾರ್, ಎಸ್ಪಿಗಳು ಹಾಗೂ ಇತರೆ ಅಧಿಕಾರಿಗಳು ಭಾಗವಹಿಸಿದ್ದರು. ಲೋಕಾಯುಕ್ತ ಬಲವರ್ಧನೆ ಬಗ್ಗೆ ರ್ಚಚಿಸಲಾಗಿದೆ. ಹೆಚ್ಚಿನ ಸಿಬ್ಬಂದಿ ಇದ್ದರೆ ಕಾರ್ಯನಿರ್ವಹಣೆ ಸರಾಗವಾಗಲಿದೆ. ಕಡತಗಳನ್ನು ಮುಂದಿಟ್ಟುಕೊಂಡರೆ ಸಾಕಾಗುವುದಿಲ್ಲ ಅವುಗಳ ತನಿಖೆಯನ್ನು ಪರಿಣಾಮಕಾರಿಯಾಗಿ ಮಾಡಬೇಕು. ಇಲ್ಲದಿದ್ದರೆ ತನಿಖೆಯ ತೀಕ್ಷ್ಣತೆ ಮೊನಚು ಕಳೆದುಕೊಳ್ಳುತ್ತದೆ. ಹೀಗಾಗಿ ಲೋಕಾಯುಕ್ತಕ್ಕೆ ಬೇಕಾಗಿರುವ ಅಗತ್ಯ ಸಿಬ್ಬಂದಿ ಮತ್ತು ಅವಶ್ಯಕತೆಗಳ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಣಯ ಮಾಡಲಾಗಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ 'ವಿಜಯವಾಣಿ'ಗೆ ತಿಳಿಸಿದರು.
ಎಸಿಬಿ ಹುದ್ದೆಗಳು: ಎಸಿಬಿಯಲ್ಲಿ ಎಡಿಜಿಪಿ ಸೇರಿ 322 ಹುದ್ದೆಗಳಿವೆ. ಒಬ್ಬರು ಐಜಿಪಿ, 10 ಎಸ್ಪಿಗಳು, 35 ಹೆಚ್ಚುವರಿ ಎಸ್ಪಿಗಳು, 75 ಇನ್ಸ್ಪೆಕ್ಟರ್ಗಳು ಮತ್ತು 200 ಕಾನ್ಸ್ಟೆಬಲ್ ಹಾಗೂ ಹೆಡ್ ಕಾನ್ಸ್ಟೆಬಲ್ಗಳ ಹುದ್ದೆಗಳಿವೆ. ಸದ್ಯ ಕೆಳಹಂತದ ಸಿಬ್ಬಂದಿ ಮಾತ್ರ ಲೋಕಾಯುಕ್ತಕ್ಕೆ ನಿಯೋಜಿಸಿದ್ದು, ಮೇಲಿನ ಹಂತದ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯೂ ಶೀಘ್ರ ಆರಂಭವಾಗಲಿದೆ.
ಕಾರ್ಯನಿರ್ವಹಣೆಗೆ 26 ಅಂಶ: ದಾಳಿ, ತನಿಖೆ ನಂತರ ವಿಚಾರಣೆ ನಡೆಸಬೇಕು. ಶಿಸ್ತುಕ್ರಮಕ್ಕೆ ಶಿಫಾರಸು ಮಾಡಬೇಕು. ಲೋಕಾಯುಕ್ತದಲ್ಲಿರುವ ಪೊಲೀಸರಿಗೆ ನಗರ ಮತ್ತು ಜಿಲ್ಲೆ ಮಟ್ಟದಲ್ಲಿರುವ ಹಲವಾರು ಕೆಲಸಗಳನ್ನು ವಹಿಸಬೇಕು. ಲೋಕಾಯುಕ್ತ ಸಂಸ್ಥೆಯ ಪೊಲೀಸ್ ವಿಭಾಗವು ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ 26 ಅಂಶಗಳನ್ನು ಒಳಗೊಂಡ ಮಾರ್ಗಸೂಚಿ ಹೊರಡಿಸಲಾಗಿದೆ. ಸರ್ಕಾರ ಶಿಫಾರಸು ಮಾಡಿರುವ ನರೇಗಾ ಅಕ್ರಮ ಪ್ರಕರಣ ಸೇರಿ ಸಾವಿರಾರು ಪ್ರಕರಣ ತನಿಖಾ ಹಂತದಲ್ಲಿವೆ. ಅವುಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸಬೇಕಿದೆ.
ಲೋಕಾಯುಕ್ತರ ಸೂಚನೆ ಏನು?
- ಜಿಲ್ಲಾ ಕಚೇರಿಯ ಮೇಲಾಧಿಕಾರಿ ತಿಂಗಳಿಗೆ ಕನಿಷ್ಠ 1 ಬಾರಿ ತಾಲೂಕು ಕೇಂದ್ರಕ್ಕೆ ಹೋಗಿ ದೂರು ಆಲಿಸಬೇಕು
- ಭೇಟಿ ದಿನಾಂಕವನ್ನು 5 ದಿನಗಳ ಮುನ್ನ ತಿಳಿಸುವುದು
- ತಾಲೂಕುಗಳಲ್ಲಿ ತಂಗಿ ಜನರ ಸಮಸ್ಯೆ ಆಲಿಸುವುದು
- ಲೋಕಾಯುಕ್ತರೇ ಖುದ್ದು ತಿಂಗಳಿಗೊಮ್ಮೆ ಜಿಲ್ಲಾವಾರು ಪ್ರವಾಸ ಕೈಗೊಂಡು ಅಧಿಕಾರಿಗಳಿಗೆ ಲೋಕಾ ಧ್ಯೇಯ, ಉದ್ದೇಶ ತಿಳಿಸಿಕೊಡಲಿದ್ದಾರೆ.
ಬೇಕಿರೋದೇನು?
- ಖಾಲಿ ಹುದ್ದೆಗಳ ಶೀಘ್ರ ಭರ್ತಿ
- ತನಿಖಾಧಿಕಾರಿಗಳ ತುರ್ತು ನಿಯೋಜನೆ
- ವಾಹನ, ಚಾಲಕರು ಸೇರಿ ಇನ್ನಿತರ ಮೂಲಸೌಲಭ್ಯಗಳು
ದೂರು ನೀಡಲು ಕರೆ ಮಾಡಿ
- 18004255320
- 080-22375014
- 080-22011298
- 9900644333
Post a Comment