ಬೆಂಗಳೂರು: ಕಳೆದ 8 ವರ್ಷದಲ್ಲಿ ಗರಿಷ್ಠ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ನರೇಂದ್ರ ಮೋದಿಜಿ ಅವರ ಬಗ್ಗೆ ಸೋನಿಯಾ ಮತ್ತು ರಾಹುಲ್ ಗಾಂಧಿಯವರು ಹಗುರವಾಗಿ ಮಾತನಾಡುತ್ತಿದ್ದಾರೆ. ಇಂಥ ಹಗುರ ಮಾತನ್ನಾಡಿದ ಕಾಂಗ್ರೆಸ್ ಮುಖಂಡರು ಮತ್ತು ಆ ಪಕ್ಷವನ್ನು ದೇಶದ ಜನರು ಕ್ಷಮಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ಎಚ್ಚರಿಸಿದರು.
ರಾಯಚೂರು ಜಿಲ್ಲೆಯ ಗಿಲ್ಲೇಸುಗೂರಿನಲ್ಲಿ ಇಂದು ಜನಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯರ ಸಿಎಂ ಕನಸು ನನಸಾಗುವುದಿಲ್ಲ. ಸಿದ್ದರಾಮಯ್ಯರಿಗೆ 75 ಲಕ್ಷದ ವಾಚ್ ಯಾರು ಕೊಟ್ಟರು? ಸುಮ್ಮನೇ ಕೊಟ್ಟರೇ? ಇದಕ್ಕೆ ಉತ್ತರಿಸಿ ಎಂದು ಸವಾಲೆಸೆದರು. ಅರ್ಕಾವತಿ ರೀಡೂ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ನಿವೇಶನಗಳನ್ನು ರಿಯಲ್ ಎಸ್ಟೇಟ್ ನವರಿಗೆ ಮಾರಾಟ ಮಾಡಿ ಅನುಕೂಲ ಮಾಡಿಕೊಂಡಿದ್ದರು ಎಂದು ಟೀಕಿಸಿದರು.
ಗಾಂಧಿ ಕುಟುಂಬದ ಹೆಸರಿನಿಂದ ಮೂರ್ನಾಲ್ಕು ತಲೆಮಾರಿಗೆ ಬೇಕಾದಷ್ಟು ಸಂಪತ್ತು ಗಳಿಸಿದ್ದೇವೆ; ಆ ಕುಟುಂಬದ ಋಣವನ್ನು ತೀರಿಸಬೇಕೆಂದು ಕಾಂಗ್ರೆಸ್ ಹಿರಿಯ ನಾಯಕ ರಮೇಶ್ ಕುಮಾರ್ ಹೇಳಿದ್ದಾರೆ. ಇದರ ಅರ್ಥ ಏನು? ಸ್ವಾತಂತ್ರ್ಯದ ಬಳಿಕ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಸರಕಾರದ ಖಜಾನೆ ಲೂಟಿ ಮಾಡಿದ್ದನ್ನು ನೀವೇ ಹೇಳಿದ್ದೀರಲ್ಲವೇ? ರಮೇಶ್ ಕುಮಾರ್ ಮಾತನ್ನು ಪಾದಯಾತ್ರೆ ಮಾಡುವ ರಾಹುಲ್ ಗಾಂಧಿ ಅಥವಾ ಸೋನಿಯಾ ಗಾಂಧಿ ಯಾಕೆ ವಿರೋಧಿಸಿಲ್ಲ ಎಂದು ಕೇಳಿದರು.
ನೀವು ತೆರಿಗೆ ಹಣದ ಹಗಲುದರೋಡೆ ಮಾಡಿದ್ದಕ್ಕೆ ಇದು ಉದಾಹರಣೆ ಎಂದ ಅವರು, ಯುಪಿಎ ಅಧಿಕಾರ ಅವಧಿಯಲ್ಲಿ ನಿರಂತರ ಭ್ರಷ್ಟಾಚಾರದ ಹಗರಣಗಳು ನಡೆದಿವೆ ಎಂದು ತಿಳಿಸಿದರು. ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿಯವರು ಜಾಮೀನಿನಲ್ಲಿ ಹೊರಗಡೆ ಇದ್ದಾರೆ. ಎಂದು ತಿಳಿಸಿದರು.
ರಾಯಚೂರು ಜಿಲ್ಲೆಯಲ್ಲಿ ‘ಏಮ್ಸ್’ (ಆಲ್ ಇಂಡಿಯಾ ಮೆಡಿಕಲ್ ಸೈನ್ಸ್) ಸ್ಥಾಪನೆ ಕುರಿತು ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಮಾತನಾಡಿದ್ದು, ಆ ಬೇಡಿಕೆಯನ್ನು ಈಡೇರಿಸಲಾಗುವುದು ತಿಳಿಸಿದರು.
ಜಿಲ್ಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಅತಿ ಹೆಚ್ಚು ಬಿಜೆಪಿ ಶಾಸಕರನ್ನು ಗೆಲ್ಲಿಸಿ ಕೊಡಲು ಮನವಿ ಮಾಡಿದರು. ದೇಶದ ಶೇ 73 ಜನರು ನರೇಂದ್ರ ಮೋದಿಯವರ ಪರವಾಗಿ ಇರುವುದು ಸಮೀಕ್ಷೆಯಿಂದ ವ್ಯಕ್ತವಾಗಿದೆ. ಮೋದಿಜಿ ಅವರು ಪ್ರಪಂಚದ ಅಗ್ರಗಣ್ಯ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ವಿವರಿಸಿದರು.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ. ರಾಯರ ಮಠದ ಸುತ್ತ ಇರುವ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಬಿಜೆಪಿ, ಬೊಮ್ಮಾಯಿಯವರ ನೇತೃತ್ವದಲ್ಲಿ ಮುಂದಿನ ಬಾರಿ ಸ್ಪಷ್ಟ ಬಹುಮತ ಗಳಿಸಿ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಕೋವಿಡ್ ಉಚಿತ ಲಸಿಕೆ ನೀಡಲಾಗಿದೆ. ಅಲ್ಲದೆ 80 ಕೋಟಿ ಜನರಿಗೆ ಉಚಿತ ಪಡಿತರ ಕೊಡಲಾಗಿದೆ. ದೇಶ- ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಸರಕಾರಗಳು ಕಾರಣವಾಗಿವೆ. ಇದನ್ನು ಜನತೆ ಮರೆಯುವುದಿಲ್ಲ. ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸದಿಂದ ನುಡಿದರು.
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರು, ಶಾಸಕರು, ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮುಂದಿನ ಬಜೆಟ್‍ನಲ್ಲಿ
5 ಸಾವಿರ ಕೋಟಿ ರೂಪಾಯಿ - ಬಸವರಾಜ ಬೊಮ್ಮಾಯಿ
ಬೆಂಗಳೂರು: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮುಂದಿನ ಬಜೆಟ್‍ನಲ್ಲಿ 5 ಸಾವಿರ ಕೋಟಿ ರೂಪಾಯಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಕಟಿಸಿದರು.
ರಾಯಚೂರು ಜಿಲ್ಲೆಯ ಗಿಲ್ಲೇಸುಗೂರಿನಲ್ಲಿ ಇಂದು ಜನಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 371 ಜೆ ಬಂದಾಗ ಕಲ್ಯಾಣ ಕರ್ನಾಟಕದ ಕುರಿತು ಜನರು ಕನಸು ಕಂಡರು. ಆದರೆ, ಕಾಂಗ್ರೆಸ್‍ನವರು ಅನುದಾನ ಕೊಡಲಿಲ್ಲ. ನಾವು ಅಧಿಕಾರಕ್ಕೆ ಬಂದ ಬಳಿಕ ಗರಿಷ್ಠ ಅನುದಾನ ಕೊಟ್ಟಿದ್ದೇವೆ. 3 ಸಾವಿರ ಕೋಟಿಯನ್ನು ನಾನು ನೀಡಿದ್ದೇನೆ. ರಾಯಚೂರು ವಿವಿ ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಪ್ರತಿಯೊಂದು ಕ್ಷೇತ್ರಕ್ಕೆ ಅನುದಾನ ಕೊಡಲಾಗಿದೆ ಎಂದರು.
ಮೀಸಲಾತಿ ಸಂಬಂಧ ಬಿಜೆಪಿ ದಿಟ್ಟ ನಿಲುವು ತೆಗೆದುಕೊಂಡಾಗ ಕಾಂಗ್ರೆಸ್‍ನವರಿಗೆ ದೀನದಲಿತರು ನೆನಪಾಗುತ್ತಾರೆ. ಇದು ಕಾಂಗ್ರೆಸ್ ಪಕ್ಷದ ಕೊಡುಗೆ ಎನ್ನುತ್ತಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಐದು ದಶಕಕ್ಕೂ ಹೆಚ್ಚು ಕಾಲ ಕಾಂಗ್ರೆಸ್ ಆಳ್ವಿಕೆ ಇತ್ತು. ಆಗ ನೀವು ದೀನದಲಿತರಿಗಾಗಿ ಮಾಡಿದ್ದೇನು ಎಂದು ಪ್ರಶ್ನಿಸಿದರು. ತುಳಿತಕ್ಕೆ ಒಳಗಾದವರು, ಶಿಕ್ಷಣ ವಂಚಿತರನ್ನು ಕಡೆಗಣಿಸಿದ ಪಕ್ಷ ಕಾಂಗ್ರೆಸ್ ಎಂದು ಆಕ್ಷೇಪಿಸಿದ ಅವರು, ರಾಜ್ಯಕ್ಕೇ ದೌರ್ಭಾಗ್ಯ ಕೊಟ್ಟ ಕಾಂಗ್ರೆಸ್ಸಿಗರು, ಎಸ್.ಸಿ, ಎಸ್.ಟಿಗೆ ದೊಡ್ಡ ದೌರ್ಭಾಗ್ಯವನ್ನೇ ನೀಡಿದ್ದಾರೆ ಎಂದು ಅವರು ಟೀಕಿಸಿದರು.
ಮುಖ್ಯಮಂತ್ರಿಗಳು ಆರೆಸ್ಸೆಸ್ ಕೈಗೊಂಬೆ ಎಂಬ ಟೀಕೆಗೆ ಉತ್ತರಿಸಿದ ಅವರು, ಆರೆಸ್ಸೆಸ್ ಒಂದು ದೇಶಭಕ್ತಿಯ ಸಂಸ್ಥೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ. ದೇಶ ನಿರ್ಮಾಣಕ್ಕಾಗಿ, ರಾಜಕೀಯ ಸ್ಥಾನಮಾನ ಬಯಸದೆ, ಸ್ವಾರ್ಥರಹಿತವಾಗಿ ದೀನದಲಿತರ ಸೇವೆ ಮಾಡುತ್ತ, ತಳ ಸಮುದಾಯಕ್ಕೆ ಧ್ವನಿ ಕೊಟ್ಟ ಶ್ರೇಷ್ಠ ಸಂಸ್ಥೆ ಆರೆಸ್ಸೆಸ್ ಎಂದು ತಿಳಿಸಿದರು. ಆರೆಸ್ಸೆಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಿಮಗಿಲ್ಲ ಎಂದು ನುಡಿದರು.
ಸಿದ್ದರಾಮಣ್ಣ ಸಮಾಜವಾದವನ್ನು ಮರೆತು ಬಿಟ್ಟಿದ್ದಾರೆ ಎಂಬುದು ದುಃಖದ ವಿಚಾರ. ಸಿದ್ದರಾಮಣ್ಣ ಅಧಿಕಾರಕ್ಕಾಗಿ ಏನೆಲ್ಲವನ್ನೂ ಮಾಡಲು ಸಿದ್ಧರಾಗಿದ್ದಾರೆ. ರೀಲಾಂಚಿಂಗ್ ರಾಹುಲ್ ಗಾಂಧಿ ಚಿಂತನೆಯೊಂದಿಗೆ ರಾಜಕೀಯದಲ್ಲಿ ಪ್ರಸ್ತುತರಾಗಲು ಅವರು ಪಾದಯಾತ್ರೆ ಮಾಡುತ್ತಿದ್ದಾರೆ. ದೇಶ, ಜನರು, ಬಡವರು ಮತ್ತು ದೀನದಲಿತರಿಗಾಗಿ ಈ ಯಾತ್ರೆ ಅಲ್ಲ ಎಂದು ವಿವರಿಸಿದರು.
ಅಂಥ ಭಾರತ್ ಜೋಡೋಗೆ ಸಿದ್ದರಾಮಯ್ಯ ಸಾಥ್ ಕೊಡುತ್ತಿದ್ದಾರೆ. ಅವರಿಂದ ನಾನು ಪಾಠ ಕಲಿಯಬೇಕಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಹಲವರು ಶೀಘ್ರವೇ ಬಿಜೆಪಿಗೆ
ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗಾಗಿದೆ. ಅದರಲ್ಲಿ ಇದ್ದವರು ಸ್ವಲ್ಪವೇ ದಿನದಲ್ಲಿ ಈ ಕಡೆ ಬರಲಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ರಾಯಚೂರು ಜಿಲ್ಲೆಯಲ್ಲೂ ಬಹಳ ದೊಡ್ಡ ಬದಲಾವಣೆ ಆಗಲಿದೆ ಎಂದು ನುಡಿದರು.
ಕಲ್ಯಾಣ ಕರ್ನಾಟಕಕ್ಕೆ ಕಾಂಗ್ರೆಸ್ ಕೈ ಕೊಟ್ಟಿದೆ. ರೈತರಿಗೆ ಕೈ ಕೊಟ್ಟಿದ್ದೀರಿ. ದೀನದಲಿತರಿಗೆ ಕೈ ಕೊಟ್ಟಿದ್ದೀರಿ. ಇಡೀ ಕರ್ನಾಟಕದ ಜನತೆಗೆ ಸುಳ್ಳು ಹೇಳುತ್ತಿದ್ದೀರಿ. ಒಂದು ಸುಳ್ಳನ್ನು ಹತ್ತಾರು ಬಾರಿ ಹೇಳಿದರೆ ಜನಮನ್ನಣೆ ಸಿಗುವ ಕನಸು ಕಾಂಗ್ರೆಸ್ ಪಕ್ಷದವರದು ಎಂದು ಆಕ್ಷೇಪಿಸಿದರು.
ನರೇಂದ್ರ ಮೋದಿಜಿ ಅವರ ಆಶೀರ್ವಾದದಿಂದ ರಾಯಚೂರಿಗೆ ಏಮ್ಸ್ ಬರಲಿದೆ ಎಂದು ವಿಶ್ವಾಸದಿಂದ ತಿಳಿಸಿದರು. ರಾಯಚೂರಿನ ನೀರಾವರಿ ಸೇರಿದಂತೆ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಿದ್ದೇವೆ ಎಂದು ಅವರು ಪ್ರಕಟಿಸಿದರು. ಈ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾವು ಕಂಕಣಬದ್ಧರಾಗಿದ್ದೇವೆ ಎಂದು ನುಡಿದರು.
ಈ ಸಂಕಲ್ಪ ಯಾತ್ರೆ ಅಂತಿಮಗೊಂಡಾಗ ಇದು ವಿಜಯಯಾತ್ರೆಯಾಗಿ ಪರಿವರ್ತನೆಗೊಳ್ಳಲಿದೆ. ಕಾಂಗ್ರೆಸ್ ಕನಸು ಕನಸಾಗಿಯೇ ಉಳಿಯಲಿದೆ. ಕರ್ನಾಟಕದಲ್ಲಿ ಜನತೆ ಈಗಾಗಲೇ ಕಾಂಗ್ರೆಸ್ ದುರಾಡಳಿತವನ್ನು ನೋಡಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ಹಲವು ಹಗರಣಗಳಾಗಿವೆ. ಆದರೆ, ಕ್ರಮ ಕೈಗೊಂಡಿಲ್ಲ. ನಾವು ಕಠಿಣ ಕ್ರಮ ಕೈಗೊಂಡಿದ್ದೇವೆ. ಇದು ನಮ್ಮ ತಾಕತ್ತು. ಅರ್ಜಿ ಕೊಡದವರಿಗೆ ನೌಕರಿ ಕೊಟ್ಟಿದ್ದಾರೆ. ಭ್ರಷ್ಟ ನೌಕರಿ ಭಾಗ್ಯ ಕಾಂಗ್ರೆಸ್ ಸಾಧನೆ. ದಿಂಬೂ ಬಿಡಲಿಲ್ಲ; ಹಾಸಿಗೆ ಬಿಡಲಿಲ್ಲ. ಬೋರ್‍ವೆಲ್ ಬಿಡಲಿಲ್ಲ. 36 ಸಾವಿರ ಬೋರ್ ವೆಲ್ ಒಂದೇ ದಿನ ಕೊರೆದಂತೆ ತೋರಿಸಿದ್ದೀರಿ ಎಂದು ಟೀಕಿಸಿದರು.
ಕಾಂಗ್ರೆಸ್ ಅವಧಿಯಲ್ಲಿ ಎಷ್ಟು ಹಗರಣ ಬೇಕು?; ತನಿಖೆ ಮಾಡ್ತೇವೆ ಎಂದರಲ್ಲದೆ, ಇದೇಥರ ಸುಳ್ಳು ಆರೋಪ ಮಾಡುತ್ತಿದ್ದರೆ ಜನರು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ನಾವು, ರೈತರು, ರೈತರ ಮಕ್ಕಳು, ವಿದ್ಯಾರ್ಥಿಗಳು, ಹಾಲು ಉತ್ಪಾದಕರು ಸೇರಿ ಎಲ್ಲ ವರ್ಗದ ಜನರಿಗಾಗಿ ಯೋಜನೆಗಳನ್ನು ರೂಪಿಸಿ ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತಂದಿದ್ದೇವೆ ಎಂದು ವಿವರಿಸಿದರು.
ಕಾಂಗ್ರೆಸ್ ಅವಧಿಯಲ್ಲಿ ಕಾನೂನು ಮತ್ತು ಯೋಜನೆಗಳು ಕೇವಲ ಪುಸ್ತಕದಲ್ಲಷ್ಟೇ ಉಳಿದಿದ್ದವು. ಜನರಿಗೆ ಅದರ ಪ್ರಯೋಜನ ಸಿಗಲಿಲ್ಲ ಎಂದು ತಿಳಿಸಿದರು. ಎಸ್‍ಸಿ, ಎಸ್‍ಟಿ ಜನಾಂಗದವರಿಗೆ ಉಚಿತ ವಿದ್ಯುತ್ ಯೋಜನೆಯನ್ನು ನಮ್ಮ ಸರಕಾರ ಜಾರಿಗೊಳಿಸಿದೆ ಎಂದರು. ಕರ್ನಾಟಕದಲ್ಲಿ ಮತ್ತೊಮ್ಮೆ ಕಮಲವನ್ನು ಅರಳಿಸುವ ಸಂಕಲ್ಪವನ್ನು ಮಾಡಬೇಕೆಂದು ಮನವಿ ಮಾಡಿದರು.
ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ರಾಜ್ಯದ ಸಹ ಉಸ್ತುವಾರಿ ಶ್ರೀಮತಿ ಡಿ.ಕೆ.ಅರುಣಾ, ಸಚಿವರು, ಶಾಸಕರು, ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
Post a Comment