ಚೇತನ್ ವಿರುದ್ಧ ದೈವಕ್ಕೆ ದೂರು

ಡುಪಿ: ಒಂದೆಡೆ ಕಾಂತಾರ (Kantara) ಸಿನಿಮಾದ ಅಬ್ಬರ ಮುಂದುವರೆದಿದೆ. ಕಾಂತಾರ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ದಾಖಲೆ ಮೇಲೆ ದಾಖಲೆ (Records in Indian Film Industry) ಮಾಡುತ್ತಾ, ಬಾಕ್ಸ್ ಆಫೀಸ್‌ನಲ್ಲಿ (Box Office) ಸದ್ದು ಮಾಡುತ್ತಾ ಮುನ್ನುಗ್ಗುತ್ತಿದೆ.ಇದರ ನಡುವೆಯೇ ದೈವಾರಾಧನೆ ಕುರಿತಂತೆ ನಟ ಚೇತನ್ ಕುಮಾರ್ (Actor Chetan Kumar) ಆಡಿರುವ ಮಾತು ಭಾರೀ ವಿವಾದಕ್ಕೆ ಕಾರಣವಾಗಿದೆ. ಭೂತಕೋಲ, ದೈವಾರಾಧನೆ ಹಿಂದೂ ಸಂಸ್ಕೃತಿ ಎನ್ನುವುದು ನಿಜವಲ್ಲ ಎಂದಿರುವ ಚೇತನ್, ವೈದಿಕ ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇದೆ ಎಂದು ಹೇಳಿದ್ದರು. ಚೇತನ್ ಮಾತಿಗೆ ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈಗಾಗಲೇ ಹಿಂದೂ ಪರ ಸಂಘಟನೆಗಳಿಂದ ಚೇತನ್ ವಿರುದ್ಧ ದೂರು ದಾಖಲಾಗಿದೆ. ಇದೀಗ ಚೇತನ್ ಮಾತಿಗೆ ಆಕ್ರೋಶ ವ್ಯಕ್ತಪಡಿಸಿರುವ ದೈವ ನರ್ತಕರು ಚೇತನ್ ವಿರುದ್ಧ ಪಂಜುರ್ಲಿ (Panjurli) ದೈವಕ್ಕೇ ಪ್ರಾರ್ಥನೆ ಸಲ್ಲಿಸಲು ನಿರ್ಧರಿಸಿದ್ದಾರೆ. 


ನಟ ಚೇತನ್ ಹೇಳಿದ್ದೇನು?


ಕಾಂತಾರ ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದ ನಟ ಚೇತನ್, ನಮ್ಮ ಕನ್ನಡದ ಕಾಂತಾರವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ/ ನಕಲಿ/ಪರವರ ಬಹುಜನ ಸಂಪ್ರದಾಯಗಳು ವೈದಿಕ ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು. ಮೂಲ ನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ' ಎಂದು ಟ್ವೀಟ್ ಮಾಡಿದ್ದರು.


ಚೇತನ್ ಹೇಳಿಕೆಗೆ ಆಕ್ರೋಶ


ಚೇತನ್ ಹೇಳಿಕೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ರಿಷಬ್ ತಂದೆ ಭಾಸ್ಕರ್ ಶೆಟ್ಟಿ ಸೇರಿದಂತೆ ಕರಾವಳಿಯ ದೈವಾರಾಧಕರು, ದೈವ ನರ್ತಕರು, ರಿಷಬ್ ಶೆಟ್ಟಿ ಅಭಿಮಾನಿಗಳು ಚೇತನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಮಂಗಳೂರಿಗೆ ಬಂದು ಈ ರೀತಿಯ ಹೇಳಿಕೆ ನೀಡಿ ಅಂತ ಸವಾಲು ಹಾಕಿದ್ದರು.


Rishab Shetty: ಪ್ರಶಾಂತ್ ಶೆಟ್ಟಿ ಎಂಬ ಹುಡುಗ ರಿಷಬ್ ಶೆಟ್ಟಿ ಆಗಿದ್ದು ಹೇಗೆ? ಕುಂದಾಪುರದಿಂದ ಕಾಂತಾರದವರೆಗಿನ ಪ್ರಯಾಣ ಇಲ್ಲಿದೆ


ಚೇತನ್ ವಿರುದ್ಧ ದಾಖಲಾಗಿದ್ದ ದೂರು


ಇನ್ನು ಚೇತನ್ ವಿರುದ್ಧ ಹಿಂದೂ ಜಾಗರಣಾ ವೇದಿಕೆಯವರು ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರನ್ನೂ ಕೂಡ ದಾಖಲಿಸಿದ್ದರು.


ಚೇತನ್ ವಿರುದ್ಧ ಪಂಜುರ್ಲಿ ದೈವದ ಮೊರೆ


ಇನ್ನು ಈ ಸಂಬಂಧ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಹಿರಿಯ ದೈವರಾಧಕ ಕುಮಾರ ಪಂಬದ, ಸಂಸ್ಕೃತಿಯ ಅವಹೇಳನ ಆದಾಗೆಲ್ಲ ನಾವು ದೈವದ ಮುಂದೆ ಪ್ರಾರ್ಥನೆ ಮಾಡುತ್ತೇವೆ. ನಾವು ಸೇವೆ ಕೊಡುವ ದೈವಗಳ ಮುಂದೆಯೇ ನಾವು ಪ್ರಾರ್ಥನೆ ಮಾಡುತ್ತೇವೆ. ನಮ್ಮ ಮೂಲ ಆರಾಧನೆಯ ಪಂಜುರ್ಲಿ ದೈವದ ಮುಂದೆ ಈ ಬಗ್ಗೆ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದಿದ್ದಾರೆ.


Kantara Movie: ಒಂದೇ ದಿನ 10 ಸಿನಿಮಾ ರಿಲೀಸ್! ಕಾಂತಾರಕ್ಕೆ ಟಫ್ ಫೈಟ್


"ನಮಗೆ ನಟನೆ ಮಾಡಿ ಗೊತ್ತಿಲ್ಲ"


ನಟರಿಗೆ ನಟನೆ ಮಾಡಲು ಗೊತ್ತಿರಬಹುದು. ನಾವು ದೈವಾರಾಧಕರು ನಮಗೆ ನಟಿಸಲು ಗೊತ್ತಿಲ್ಲ ಅಂತ ಕುಮಾರ ಪಂಬಂದ ಹೇಳಿದ್ದಾರೆ. ನಾವು ತಲೆತಲಾಂತರಗಳಿಂದ ಸತ್ಯವನ್ನು ಪಾಲನೆ ಮಾಡಿಕೊಂಡು ಬಂದವರು. ಭೂತಾರಾಧನೆಗೆ ಇಂತಿಷ್ಟು ವರ್ಷದ ಹಿನ್ನೆಲೆ ಎಂಬ ದಾಖಲೆ ನಮ್ಮಲ್ಲಿ ಇಲ್ಲ. ಯಾವುದೋ ಒಂದು ಪುಸ್ತಕ ಹಿಡಿದುಕೊಂಡು ಮಾತನಾಡುವುದು ತಪ್ಪು. ಕರಾವಳಿಯಾದ್ಯಂತ ಪರವ, ಪಂಬದ ನಲಿಕೆಯವರು ಜೀವಿಸುತ್ತಿದ್ದೇವೆ. ನಾವು ಅಲೆಮಾರಿಗಳು ಎಂಬ ಮಾತನ್ನು ಒಪ್ಪಲು ಸಾಧ್ಯವಿಲ್ಲ. ನಮ್ಮ ಹಿರಿಯರ ಕಾಲದಿಂದ ನಾವು ಹಿಂದೂ ಸಂಪ್ರದಾಯವನ್ನು ಆರಾಧನೆ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ದೈವಗಳಿಗೆ ಮೂಲ ಶಬ್ದವೇ ತುಳು. ನಾವು ನಂಬಿಕೊಂಡ ಸತ್ಯದ ಮೂಲಕ ಚೇತನ್ ಗೆ ಪ್ರತಿಕ್ರಿಯೆ ಕೊಡುತ್ತೇವೆ ಎಂದು ಹೇಳಿದ್ದಾರೆ.

Post a Comment

Previous Post Next Post