ಇಲ್ಲಿ ಕೊಲೆಗಳಾಗಲು ಗಹನವಾದ ಕಾರಣಗಳೇ ಬೇಕಿಲ್ಲ. ಯಾವುದೋ ದೂರದ ದೇಶದಿಂದ ಬಂದವರಾಗಬೇಕಿಲ್ಲ. ಹೆಣ ಬೀಳಲು ಧರ್ಮ, ಹೆಣ್ಣು, ಗೋವು ಇಷ್ಟು ಸಾಕು. ಕೆಲ ಮತೀಯ ಶಕ್ತಿಗಳು ಬಹಿರಂಗವಾಗಿಯೇ ಹೊಡಿ, ಕಡಿ, ಕೊಲ್ಲು ಹೇಳಿಕೆಗಳ ಮೂಲಕ ಪ್ರಚೋದಿಸಿದರೆ, ಇನ್ನೂ ಕೆಲವು ಶಕ್ತಿಗಳು ಗುಪ್ತಗಾಮಿನಿಯಾಗಿಯೇ ಪ್ರಬಲವಾಗಿ ಕಾರ್ಯನಿರ್ವಹಿಸುತ್ತಿವೆ.
ನಿಷೇಧಿತ ಸಂಘಟನೆಗಳಿಂದ ಹೊರಬಂದವರು ಪ್ರತೀಕಾರಕ್ಕಾಗಿಯೇ ಇತರ ಧರ್ಮದವರ ಬಲಿ ಪಡೆದು ತಾವೂ ಬದುಕನ್ನು ಬಲಿ ಕೊಟ್ಟುಕೊಳ್ಳುತ್ತಿದ್ದಾರೆ. 1978ರ ರಾಘವೇಂದ್ರ ನಾಗುರಿ ಕೊಲೆಯಿಂದ ಹಿಡಿದು 2025ರ ಏಪ್ರಿಲ್‌ವರೆಗೆ ಸುಮಾರು 47 ಮಂದಿ ಧರ್ಮ ಸಂಘರ್ಷದ ಗಲಭೆಗಳಿಗೆ ಜೀವ ತೆತ್ತಿದ್ದಾರೆ.
ಧರ್ಮ ಸಂಘರ್ಷದ ಬಣ್ಣ ಪಡೆಯುವ ಕ್ಷುಲ್ಲಕ ಘಟನೆಗಳು
ಇತ್ತೀಚೆಗೆ ಪುತ್ತೂರಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಸಹಪಾಠಿಯೊಬ್ಬ ತನಗೆ ಚೂರಿಯಿಂದ ಇರಿದ ಎಂದು ಆರೋಪಿಸಿ ವಿದ್ಯಾರ್ಥಿನಿಯೊಬ್ಬಳು ಪೊಲೀಸ್ ಠಾಣೆಯ ಮೆಟ್ಟಿಲೇರಿದಳು. ಕಾಲೇಜು ಆವರಣದೊಳಗೇ ಪ್ರಾಂಶುಪಾಲರ ಸಮ್ಮುಖದಲ್ಲಿ ಮುಗಿದು ಹೋಗಬೇಕಾಗಿದ್ದ ಘಟನೆಯು ಮತೀಯ ಸಂಘರ್ಷದ ಬಣ್ಣ ಪಡೆಯಿತು.
ವಿದ್ಯಾರ್ಥಿನಿಯ ಪರ ಇದ್ದ ಗುಂಪು ʼನ್ಯಾಯʼ ಕೊಡಿಸುವ ನೆಪದಲ್ಲಿ ಊರಿಗೇ ʼಬೆಂಕಿʼ ಹಚ್ಚಲು ವ್ಯವಸ್ಥಿತ ಸಿದ್ಧತೆ ನಡೆಸಿತು. ಕೊನೆಗೇ ಇಡೀ ಘಟನೆಯೇ ಸುಳ್ಳು ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಯಿತು. ಬೆಂಕಿ ತಣ್ಣಗಾಯಿತು.
ಪುತ್ತೂರಿನ ತಾಲೂಕು ಆಸ್ಪತ್ರೆಯಲ್ಲಿ ವೈದ್ಯೆಯ ಮೇಲೆ ಹಲ್ಲೆ ನಡೆಸಲು ಮುಸ್ಲಿಂ ಯುವಕ ಮುಂದಾದ ಪ್ರಕರಣವೂ ಹಿಂದೂಪರ ಹೋರಾಟಗಾರರಿಗೆ ʼಆಹಾರʼವಾಯಿತು. ಅಲ್ಲಿ ವೈದ್ಯರಿಗೆ ತೊಂದರೆ ಉಂಟು ಮಾಡಿದ, ಆಸ್ಪತ್ರೆ ಸೇವೆಯ ಮೇಲೆ ಪರಿಣಾಮ ಉಂಟು ಮಾಡಿದ ವಿಚಾರ ಮುಖ್ಯವಾಗಲೇ ಇಲ್ಲ. ಆರೋಪಿಯ ಧರ್ಮ ಮತ್ತು ವೈದ್ಯೆಯ ಜಾತಿಯೇ ಮುಖ್ಯವಾಯಿತು. ಪೊಲೀಸರ ಲಾಠಿಯ ಮಾತಿನಲ್ಲಿ ಮುಗಿದು ಹೋಗಬೇಕಿದ್ದ ಪ್ರಕರಣ ಧರ್ಮ ಸಂಘರ್ಷದ ತಿರುವು ಪಡೆಯಲು ಮುಂದಾಯಿತು.
ಸುಬ್ರಹ್ಮಣ್ಯದಿಂದ ಕಡಬದ ಕಡೆಗೆ ಬರುತ್ತಿದ್ದ ಬಸ್‌ನಲ್ಲಿ ಮುಸ್ಲಿಂ ಯುವಕರು ಮತ್ತು ಹಿಂದೂ ಹುಡುಗಿ ಒಂದೇ ಸೀಟಿನಲ್ಲಿ ಕುಳಿತಿದ್ದಾರೆ. ಆ ಹುಡುಗಿ ಯುವಕರ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾಳೆ ಎಂಬುದನ್ನೇ ಕಾರಣವಾಗಿಟ್ಟುಕೊಂಡು ʼಧರ್ಮ ರಕ್ಷಕರುʼ ಬಸ್ಸನ್ನೇ ಕಡಬ ಪೊಲೀಸ್ ಠಾಣೆಯ ಮುಂದೆ ನಿಲ್ಲಿಸಿ ರಂಪ ಮಾಡಿದ್ದೂ ನಡೆಯಿತು.
ಖಾಸಗಿ ಮಾತುಕತೆಗಳಲ್ಲಿ ಸ್ಥಳೀಯ ಹಿರಿಯರ ಸಮ್ಮುಖದಲ್ಲಿ ಮುಗಿದು ಹೋಗಬೇಕಾದ ಪ್ರಕರಣಗಳೆಲ್ಲಾ ಧರ್ಮ- ಜಾತಿಯ ಬಣ್ಣ ಪಡೆದು ರಕ್ತದೋಕುಳಿ ಹರಿಸುತ್ತಿವೆ.
ಇಂತಹ ಸಂಘರ್ಷಗಳಿಗೆ ಆರ್ಥಿಕ ಆಯಾಮಗಳೂ ಇವೆ. ದೇವಸ್ಥಾನ, ದೈವಸ್ಥಾನಗಳ ಜಾತ್ರೆಗಳಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ನಿರ್ಬಂಧ ಹೇರಿರುವುದು ದೊಡ್ಡ ಮಟ್ಟದಲ್ಲಿ ಸೌಹಾರ್ದಕ್ಕೆ ಧಕ್ಕೆ ನೀಡಿದೆ. ಏಕೆಂದರೆ ಇಲ್ಲಿನ ಹೆಚ್ಚಿನ ದೇವಸ್ಥಾನಗಳಲ್ಲಿ ಹಿಂದೂಗಳ ಜೊತೆ ಮುಸ್ಲಿಮರ ಪ್ರಾತಿನಿಧ್ಯ ಮತ್ತು ಅವರಿಗೆ ಗೌರವ ಸಲ್ಲಿಸಬೇಕಾದ ಸಂಪ್ರದಾಯಗಳೂ ಇವೆ. ಆದರೆ, ಧರ್ಮದ ಹೆಸರಿನಲ್ಲಿ ಅವೆಲ್ಲವನ್ನೂ ಗಾಳಿಗೆ ತೂರಿ, ಮುಸ್ಲಿಮರು ಊರಿನ ಹಿಂದೂ ಧಾರ್ಮಿಕ ಉತ್ಸವಗಳಲ್ಲಿ ಭಾಗಿಯಾಗಲೇಬಾರದು ಎಂಬ ನಿಯಮವನ್ನು ಆಯಾ ದೇವಸ್ಥಾನಗಳ ಆಡಳಿತ ಮಂಡಳಿ ಕೈಗೊಂಡಿರುವುದು ಮುಸ್ಲಿಮರಲ್ಲಿ ಜಿದ್ದು ಬೆಳೆಯಲು ಕಾರಣವಾಯಿತು.
ಹೀಗಾಗಿ ಮಂದಿರ -ಮಸೀದಿಗಳ ಉತ್ಸವಗಳಲ್ಲಿಯೂ ಅದ್ದೂರಿತನ- ವೈಭವದ ಪೈಪೋಟಿ ಜೋರಾಗಿದೆ. ಇತ್ತ ಧಾರ್ಮಿಕ ಸಭೆಗಳಲ್ಲಿ ʼಧರ್ಮ ರಕ್ಷಕರʼ ಭಾಷಣಗಳಿಗೆ ಪ್ರತಿಯಾಗಿ ಹಳ್ಳಿಗಾಡುಗಳ ಮಸೀದಿಗಳಲ್ಲೂ ಮತ ಪ್ರಭಾಷಣಗಳು ವಾರಗಟ್ಟಲೆ ನಡೆಯುತ್ತಿವೆ.
ಧರ್ಮರಕ್ಷಣೆಯ ಮುಖವಾಡದ ಹಿಂದಿರುವ ಅಧಿಕಾರದಾಹದ ರಾಜಕಾರಣ, ರಿಯಲ್ ಎಸ್ಟೇಟ್ ಮತ್ತು ಮರಳು ಮಾಫಿಯಾ, ಫೈನಾನ್ಸ್ ವ್ಯವಹಾರಗಳು ಇಂಥಹ ಸಂಘರ್ಷಗಳ ಪ್ರಾಯೋಜಕತ್ವ ವಹಿಸಿರುವುದೂ ಗುಟ್ಟಾಗಿ ಉಳಿದಿಲ್ಲ. ಆದರೆ, ಈ ಜಿದ್ದುಗಳಿಗೆ ಎರಡೂ ಸಮಾಜಗಳಲ್ಲಿರುವ ಮಧ್ಯಮ ವರ್ಗ ಅಥವಾ ಕೆಳಮಧ್ಯಮ ವರ್ಗ, ಆರ್ಥಿಕವಾಗಿ ಕೆಳಸ್ತರದಲ್ಲಿರುವ ಯುವಕರೇ ಬಲಿಯಾಗುತ್ತಿದ್ದಾರೆ.
ದಕ್ಷಿಣ ಕನ್ನಡ ಪ್ರಮುಖ ಸಂಘರ್ಷಗಳು
1978 - ರಾಘವೇಂದ್ರ ನಾಗುರಿ ಕೊಲೆ, ವಾರಗಳ ಕರ್ಫ್ಯೂ
1998 - ಸುರತ್ಕಲ್‌ನಲ್ಲಿ 3 ಮಂದಿಯ ಕೊಲೆ.
1998 - ಪೊಳಲಿಯಲ್ಲಿ ಆಟದ ವಿಷಯದಲ್ಲಿ ಜಗಳ ಗುಜರಿ ವ್ಯಾಪಾರಿ ಹತ್ಯೆ
2001 - ಕಂದಾವರದಲ್ಲಿ ಆಟೋರಿಕ್ಷಾ ಚಾಲಕನ ಕೊಲೆ
2002 - ಕುದ್ರೋಳಿಯಲ್ಲಿ ಬಡಗಿಯ ಕೊಲೆ
2003 - ಯುವತಿ ಚುಡಾಯಿಸಿದ್ದಕ್ಕೆ ಒಂದೇ ಸಮುದಾಯದ 7, ಇನ್ನೊಂದು ಸಮುದಾಯದ ಇಬ್ಬರ ಕೊಲೆ, ಕ್ಲಾಕ್‌ಟವರ್ ಬಳಿ ಒಬ್ಬ ಪೊಲೀಸ್ ಸಾವು.
2005 - ತಾ.ಪಂ.ಅಧ್ಯಕ್ಷ ಜಬ್ಬಾರ್ ಹತ್ಯೆ, ಮಂಗಳೂರಲ್ಲಿ ರಿಕ್ಷಾ ಚಾಲಕ ಫಾರೂಕ್ ಕೊಲೆ, ಅಡ್ಡೂರಲ್ಲಿ ಉತ್ತರ ಕರ್ನಾಟಕ ಮೂಲದ ಲಾರಿ ಕ್ಲೀನರ್ ಕೊಲೆ.
2006 - ಗೋ ಕಳವು, ಹತ್ಯೆ ಹಿನ್ನೆಲೆಯಲ್ಲಿ ಬಿಜೈನಲ್ಲಿ ಧರ್ಮಗುರುಗಳ ಕೊಲೆ, ಮಂಗಳೂರಿನಲ್ಲಿ ಇನ್ನೊಂದು ಕೊಲೆ, ಪೊಳಲಿಯಲ್ಲಿ ರಿಕ್ಷಾ ಚಾಲಕನ ಕೊಲೆ.
2006 - ಹೊಸಬೆಟ್ಟುವಿನಲ್ಲಿ ಮೂಲ್ಕಿ ಸುಖಾನಂದ ಶೆಟ್ಟಿ ಕೊಲೆ, ಮೆರವಣಿಗೆಯಲ್ಲಿ ಪೊಲೀಸ್ ಗೋಲಿಬಾರ್‌ಗೆ ಇಬ್ಬರ ಸಾವು. ಬುಲೆಟ್ ಸುಧೀರ್ ಮತ್ತು ಮೂಲ್ಕಿ ರಫೀಕ್ ಎನ್‌ಕೌಂಟರ್, ಉಳ್ಳಾಲ, ಮಾಸ್ತಿಕಟ್ಟೆ, ಫರಂಗಿಪೇಟೆಗಳಲ್ಲಿ ಕೊಲೆಗಳು
2008-ಪೊಳಲಿಯಲ್ಲಿ ಪೊಳಲಿ ಅನಂತು ಕೊಲೆ. ದೇವಸ್ಥಾನ ಮತ್ತು ಮಸೀದಿ ಅಪವಿತ್ರ ಘಟನೆ
2016- ಮಂಗಳೂರು ಜೈಲಲ್ಲೇ ಮಾಡೂರು ಇಸುಬು, ಗಣೇಶ್ ಶೆಟ್ಟಿ ಕೊಲೆ, ಪಣಂಬೂರಿನಲ್ಲಿ ವ್ಯಕ್ತಿಯೊಬ್ಬರ ಕೊಲೆ
2017-18- ಮೂಡುಬಿದಿರೆಯಲ್ಲಿ ಪ್ರಶಾಂತ್ ಪೂಜಾರಿ, ಬಂಟ್ವಾಳದಲ್ಲಿ ಹರೀಶ್, ಬಿ.ಸಿ.ರೋಡ್‌ನಲ್ಲಿ ಶರತ್ ಮಡಿವಾಳ ಹತ್ಯೆ, ಸುರತ್ಕಲ್‌ನಲ್ಲಿ ದೀಪಕ್ ರಾವ್, ಕೊಟ್ಟಾರದಲ್ಲಿ ಬಶೀರ್, ಬೆಂಜನಪದವಿನಲ್ಲಿ ಅಶ್ರಫ್ ಕಲಾಯಿ ಹತ್ಯೆ.
2020-ಮಂಗಳೂರಲ್ಲಿ ಎನ್‌ಆರ್‌ಸಿ, ಸಿಎಎ ವಿರೋಧಿಸಿ ಘಟನೆ, ಪೊಲೀಸ್ ಗೋಲಿಬಾರ್‌ನಲ್ಲಿ ನೌಷಾದ್, ಜಲೀಲ್ ಸಾವು.
2022-ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆ, ಸುರತ್ಕಲ್‌ನಲ್ಲಿ ಫಾಝಿಲ್ ಕೊಲೆ
2025- ಕುಡುಪು ಭಟ್ರ ಕಲ್ಲುರ್ಟಿ ದೇವಸ್ಥಾನದ ಬಳಿ ಮಾನಸಿಕ ಅಸ್ವಸ್ಥ ಅಶ್ರಫ್‌ನ ಗುಂಪು ಹತ್ಯೆ, ಸುಹಾಸ್ ಶೆಟ್ಟಿ ಹತ್ಯೆ
Post a Comment