ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಜಾರಿಗೆ ಬರುವುದು ಕಷ್ಟಕರ; ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಜಾರಿಗೆ ಬರುವುದು ಕಷ್ಟಕರ; ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
ಮೈಸೂರು; ಒಳ ಮೀಸಲಾತಿ ಕುರಿತು ಸಲ್ಲಿಸಿರುವ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ಬರುವುದು ಕಷ್ಟಕರವಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು. 
ಭಾನುವಾರ ಮೈಸೂರಿನ ನಗರದ ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಅಖಿಲ ಕರ್ನಾಟಕ ಡಾ.ಅಂಬೇಡ್ಕರ್ ಆದಿದ್ರಾವಿಡ ಪೌರಕಾರ್ಮಿಕರ ಜನಾಂಗದ ಅಭಿವೃದ್ಧಿ ಟ್ರಸ್ಟ್ ಮತ್ತು ಡಾ.ಅಂಬೇಡ್ಕರ್ ಆದಿದ್ರಾವಿಡ ಪೌರಕಾರ್ಮಿಕರ ಯುವಕರ ಅಭಿವೃದ್ಧಿ ಮಹಾಸಂಘ ಸಹಯೋಗದಲ್ಲಿ ಆಯೋಜಿಸಿದ್ದ ಆದಿದ್ರಾವಿಡ ಸಮಾಜದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, 
ಒಳ ಮೀಸಲಾತಿ ಕಲ್ಪಿಸುವುದು ಅಷ್ಟು ಸುಲಭವಲ್ಲ. ಈ ಕುರಿತು ಅಧ್ಯಯನ ಮಾಡಿ, ಅನೇಕ ವರದಿಗಳನ್ನು ಎಲ್ಲ ರಾಜ್ಯದಲ್ಲೂ ಸಲ್ಲಿಸಲಾಗಿದೆ. ಈ ಎಲ್ಲ ವರದಿಯಲ್ಲೂ ಒಂದೇ ರೀತಿಯ ಸಮಸ್ಯೆವಿದೆ. ಇದು ಕೇಂದ್ರ, ರಾಜ್ಯ ಸರ್ಕಾರಗಳಿಂದ ಆಗಲ್ಲ. ಹೀಗಾಗಿ, ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರೂ, ಅದು ಜಾರಿಗೆ ಬರುವುದು ಕಷ್ಟಕರವಿದೆ. ಇದರಿಂದಾಗಿ ಮಾದಿಗ ಸಮಾಜಕ್ಕೆ ಅನ್ಯಾಯವಾಗುತ್ತಿದೆ ಎಂದರು. 
 ಜಾತಿ ವರ್ಗೀಕರಣ ಮಾಡಿ ಒಳಮೀಸಲಾತಿ ಕಲ್ಪಿಸುವ ಕುರಿತು ಕಾನೂನು ಹೋರಾಟ ನಡೆಯುತ್ತಿದೆ. ಈ ಕುರಿತು ಹಿರಿಯ ವಕೀಲರೊಬ್ಬರನ್ನು ನೇಮಿಸಲಾಗಿದೆ. ಆ.10ರಂದು ಸುಪ್ರೀಂಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ಬರಲಿದೆ. ಕೇಂದ್ರ ಸರ್ಕಾರಕ್ಕೆ ಕೆಲ ಸೂಚನೆ ನೀಡುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಕೇಂದ್ರ ಸಚಿವನಾದರೂ ಈಗಲೂ ನನ್ನನ್ನು ಜಾತಿಯಿಂದ ಗುರುತಿಸುತ್ತಾರೆ. ಯಾವ ಕುರ್ಚಿ, ಯಾವ ಬಟ್ಟೆ ಹಾಕಿಕೊಂಡರೂ, 7 ಸ್ಟಾರ್ ಹೋಟೆಲ್ ಕುಳಿತಿದ್ದರೂ ಅಲ್ಲಿ ನೋಡು ಮಾದಿಗ ಜಾತಿಯವನು ಕುಳಿತಿದ್ದಾನೆ ಎನ್ನುತ್ತಾರೆ. ಇದನ್ನೆಲ್ಲ ಸಾಕಷ್ಟು ಕೇಳಿದ್ದೇನೆ, ನೋಡಿದ್ದೇನೆ. ಅಷ್ಟೇ ಅಲ್ಲ, ನಮ್ಮ ಮಾದಿಗ ಜನರೇ ನನ್ನನ್ನು ನಮ್ಮ ನಾಯಕ ಎಂದು ಹೇಳಲ್ಲ. ಒಪ್ಪಿಕೊಳ್ಳಲು ಮನಸ್ಸು ಮಾಡಲ್ಲ. ಮನೆಗೆ ಕರೆದು ಊಟವನ್ನೂ ಹಾಕಲ್ಲ ಎಂದು ನೋವಿನಿಂದ ಹೇಳಿದರು. ಮೊದಲು ನನಗೆ ನನ್ನ ಸಮಾಜ ಮುಖ್ಯ. ಬಳಿಕ ನಾನೊಬ್ಬ ರಾಜಕಾರಣಿ ಎಂಬುದನ್ನು ಅರಿತು ಮಾತನಾಡುತ್ತಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎ.ರಾಮದಾಸ್,ಎಲ್.ನಾಗೇಂದ್ರ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ನಗರಪಾಲಿಕೆ ಸದಸ್ಯೆ ಶಾಂತಮ್ಮ ವಡಿವೇಲು, ಹುಣಸೂರು ನಗರಸಭಾ ಸದಸ್ಯೆ ರಾಣಿ ಪೆರುಮಾಳ್, ನಂಜನಗೂಡು ಪುರಸಭಾ ಸದಸ್ಯ ಪಿ.ದೇವ, ಕೆ.ಆರ್.ನಗರ ಪುರಸಭಾ ಸದಸ್ಯ ಶಂಕರ್, ಸೋಸಲೆ ಗ್ರಾಪಂ ಅಧ್ಯಕ್ಷೆ ಎಸ್.ಹೇಮ ಹಾಜರಿದ್ದರು. ಕಾರ್ಯಾಧ್ಯಕ್ಷ ವಿ.ರಾಜು,ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಸುರೇಶ್ ಕುಮಾರ್, ಉಪಾಧ್ಯಕ್ಷರಾದ ಜಿ.ಮಹದೇವ್,ಶಂಕರಬಾಬು,ನಗರಾಧ್ಯಕ್ಷ ಶಿವ,ಕಾರ್ಯಾಧ್ಯಕ್ಷ ಪಿ.ಆರ್.ವಿಜಯ್,ಜಿಲ್ಲಾಧ್ಯಕ್ಷ ಎಸ್.ಪಿ.ಮಹದೇವ್ ಉಪಸ್ಥಿತರಿದ್ದರು.
--------------------------ಕೋಟ್ -------------
ನಾನೊಬ್ಬ ಸರ್ವಾಧಿಕಾರಿ ಎನ್ನುವುದನ್ನು ಸಾರ್ವಜನಿಕವಾಗಿ ಹೇಳುತ್ತೇನೆ. ಜನಪರ ಕೆಲಸ ಮಾಡದ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ನಮಸ್ಕಾರ ಮಾಡಲ್ಲ. ವರ್ಗಾವಣೆ, ಕಮಿಷನ್ ನನಗೆ ಗೊತ್ತಿಲ್ಲ. ಈ ರೀತಿ ಮನೋಭಾವ ನೋಡಿಯೇ ನಮ್ಮ ಬಿಜೆಪಿ ಪಕ್ಷವು ನನ್ನನ್ನು ಸಚಿವನಾಗಿ ಮಾಡಿದೆ.
-ಎ.ನಾರಾಯಣಸ್ವಾಮಿ, ಕೇಂದ್ರ ಸಚಿವ.

Post a Comment

Previous Post Next Post